Thu. Mar 5th, 2026

ನೀರು ಹರಿಸದಿದ್ದಾಗ ಬೆಳೆ ಪರಿಹಾರ ನೀಡಿದ ಉದಾಹರಣೆ ಕೊಡಿ:ಸಚಿವ ಶಿವರಾಜ್ ತಂಗಡಗಿ

Share this with Friends

ಗಂಗಾವತಿ:ಯಾವ ಕಾಲದಲ್ಲಿ ಒಂದು ಬೆಳೆಗೆ ನೀರು ಕೊಟ್ಟಾಗ, ಬಿಜೆಪಿ ಸರ್ಕಾರ ರೈತರಿಗೆ ಪರಿಹಾರ ರೂಪದಲ್ಲಿ ಹಣ ನೀಡಿದೆ ಎಂದು ಸ್ಪಷ್ಟಪಡಿಸಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್.ಎಸ್‌‌.ತಂಗಡಗಿ ಸವಾಲೆಸೆದಿದ್ದಾರೆ.

ಗಂಗಾವತಿಯಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಿಗೆ ಮಾಡಲು ಬೇರೆ ಏನು ಕೆಲಸ ಇಲ್ಲ. ರೈತರ ಬಗ್ಗೆ ಮಾತನಾಡಲು ಬಿಜೆಪಿಗರಿಗೆ ಯಾವುದೇ ಯೋಗ್ಯತೆ ಇಲ್ಲ.  ನೀರು ಹರಿಸಿ ಇಲ್ಲವೇ ಪರಿಹಾರ ನೀಡಿ ಎನ್ನುತ್ತಿದ್ದಾರೆ ಆದರೆ ಯಾವ ಕಾಲದಲ್ಲಿ ಒಂದು ಬೆಳೆಗೆ ನೀರು ಕೊಟ್ಟಾಗ, ಬಿಜೆಪಿ ಸರ್ಕಾರ ರೈತರಿಗೆ ಪರಿಹಾರ ರೂಪದಲ್ಲಿ ಹಣ ನೀಡಿದೆ ಎಂದು ಸ್ಪಷ್ಟಪಡಿಸಲಿ ಎಂದು ತಿರುಗೇಟು ನೀಡಿದರು.

ಅಣೆಕಟ್ಟೆಯ ರಕ್ಷಣೆ ದೃಷ್ಟಿಯಿಂದ 80 ಟಿಎಂಸಿ ನೀರು ಮಾತ್ರ ಸಂಗ್ರಹಿಸಿ ಎಂದು ಹೇಳಿದವರು ಯಾರು? ರೈತರ ಪರ ರಾಜ್ಯ ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ಬಳಿ ಧ್ವನಿ ಎತ್ತಲಿ. ಆಗ ಪ್ರಧಾನಿ ಮೋದಿ ಅವರ ಬಳಿ ಕುಣಿದರೆ ಸ್ವಲ್ಪ‌ ಉಪಯೋಗವಾಗಲಿದೆ ಎಂದು ಮಾರ್ಮಿಕವಾಗಿ ಹೇಳಿದರು.

ಅಣೆಕಟ್ಟೆಯಲ್ಲಿ 45 ಟಿಎಂಸಿ ನೀರಿದ್ದಾಗ ರೈತರಿಗೆ ಸುಗ್ಗಿ ಬೆಳೆಗೆ ನೀರು ಕೊಟ್ಟಿದ್ದೇವೆ. ಬೇಸಿಗೆ ಬೆಳೆಗೆ ನೀರು ಬಿಡಲು ಹೇಗೆ ಸಾಧ್ಯ?. ವಾಸ್ತವ ಸತ್ಯ ಜನರಿಗೆ ತಿಳಿಸಲಿ. ವಿರೋಧ ಪಕ್ಷದವರಿಗೆ ತುಂಗಭದ್ರಾದ ಬಗ್ಗೆ ಮಾತನಾಡಲು ಅವರಿಗೆ ಏನು ತಿಳಿದಿದೆ. ಕೇಂದ್ರ ಸರ್ಕಾರ ಇದೆಯಲ್ಲ? ಬಿಜೆಪಿ ನಾಯಕರು ಬಾಯಿಗೆ ಬೆರಳು ಇಟ್ಕೊಂಡು ಕುಳಿತಿದ್ದಾರಾ? ಇವರೆಲ್ಲ ನಾಟಕ ಕಂಪನಿಗಳು ? ಎಂದು ಛೇಡಿಸಿದರು.

ಡ್ಯಾಂನ ಗೇಟ್ ಅಳವಡಿಕೆ ಸಂಬಂಧ ನಮ್ಮ ರಾಜ್ಯದ ಪಾಲಿನ ಹಣ ನೀಡಲು ಅಗತ್ಯ ಕ್ರಮಕೈಗೊಳ್ಳಲಾಗಿದ್ದು, ಕಡತ ಆರ್ಥಿಕ ಇಲಾಖೆಯಲ್ಲಿದೆ. ಶೀಘ್ರ ಹಣ ಬಿಡುಗಡೆಯಾಗಲಿದೆ ಎಂದರು.

ಒಂದು ಲಕ್ಷ ಭಕ್ತರ ಆಗಮನ ನಿರೀಕ್ಷೆ: ಅಂಜನಾದ್ರಿ ಹನುಮಮಾಲಾ ವಿಸರ್ಜನೆಗೆ ಒಂದು ಲಕ್ಷ ಭಕ್ತಾದಿಗಳು ಆಗಮಿಸುವ ನಿರೀಕ್ಷೆ ಇದ್ದು, ಅಗತ್ಯ ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿದೆ‌. ಪ್ರತಿಯಿಂದು ಸ್ಥಳದಲ್ಲಿಯೂ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದ್ದು, ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಹನುಮಮಾಲಾ‌ ವಿಸರ್ಜನೆ‌ ವೇಳೆ‌ ಖಾಸಗಿ ಕಂಪನಿಗಳು ಬ್ಯಾನರ್ ಹಾಕಿ ಪ್ರಚಾರ ತೆಗೆದುಕೊಳ್ಳುತ್ತಿವೆಯಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಸೇವೆ ಮಾಡಲು ನಮ್ಮ ವಿರೋಧವಿಲ್ಲ. ದೇವರ ಹೆಸರಿನಲ್ಲಿ‌ ಪ್ರಚಾರ ತೆಗೆದುಕೊಳ್ಳುವುದು ಸರಿಯಲ್ಲ ಎಂದರು.


Share this with Friends

Related Post