ತಿರುವನಂತಪುರಂ,ಫೆ.27: ಇಸ್ರೋದ ಐತಿಹಾಸಿಕ ಮಾನವ ಸಹಿತ ಗಗನಯಾನದ ಭಾಗವಾಗಿ ಕಡಿಮೆ ಭೂಮಿಯ ಕಕ್ಷೆಗೆ ಹಾರುವ ನಾಲ್ಕು ಗಗನಯಾತ್ರಿಗಳ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ್ದಾರೆ.
ಕೇರಳದ ತಿರುವನಂತಪುರಂನಲ್ಲಿರುವ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ಈ ಗಗನಯಾತ್ರಿಗಳ ಹೆಸರನ್ನು ಪ್ರಕಟಿಸಿದರು.
ಭಾರತಕ್ಕೆ ಮಾನವ ಸಹಿತ ಮೊದಲ ಗಗನಯಾನ ಇದಾಗಲಿದ್ದು, ಗ್ರೂಪ್ ಕ್ಯಾಪ್ಟನ್‌ಗಳಾದ ಪ್ರಶಾಂತ್ ಬಾಲಕೃಷ್ಣನ್ ನಾಯರ್, ಅಂಗದ್ ಪ್ರತಾಪ್, ಅಜಿತ್ ಕೃಷ್ಣನ್ ಮತ್ತು ವಿಂಗ್ ಕಮಾಂಡರ್ ಶುಭಾಂಶು ಶುಕ್ಲಾ ಅವರು ಬಾಹ್ಯಾಕಾಶಕ್ಕೆ ಭಾರತದ ಮೊದಲ ಮಾನವ ಸಹಿತ ಗಗನಯಾತ್ರಿಗಳಾಗಿ ಆಯ್ಕೆಯಾಗಿದ್ದಾರೆ.
ಇವರೆಲ್ಲರೂ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಮತ್ತು ಗ್ರೂಪ್ ಕ್ಯಾಪ್ಟನ್‌ಗಳು. ಪರೀಕ್ಷಾ ಪೈಲಟ್‌ಗಳಾಗಿ ಕೆಲಸ ಮಾಡಿದ ಅನುಭವವನ್ನು ಹೊಂದಿದ್ದಾರೆ.
ಏನಾದರೂ ತಪ್ಪಾದ ಸಂದರ್ಭಗಳಲ್ಲಿ ತ್ವರಿತವಾಗಿ ಪ್ರತಿಕ್ರಿಯಿಸಲು ಅವರು ಈಗಾಗಲೇ ತರಬೇತಿ ಪಡೆದಿದ್ದಾರೆ. ಬೆಂಗಳೂರಿನಲ್ಲಿರುವ ಬಾಹ್ಯಾಕಾಶ ಸಂಸ್ಥೆಯ ತರಬೇತಿ ಕೇಂದ್ರದಲ್ಲಿ ಈ ನಾಲ್ವರೂ ಗಗನಯಾತ್ರಿಗಳು ತರಬೇತಿ ಪಡೆಯುತ್ತಿದ್ದಾರೆ. ಗಗನಯಾತ್ರಿಗಳ ಆಯ್ಕೆಯು ಐಎಎಫ್‌ನ ಇನ್‌ಸ್ಟಿಟ್ಯೂಟ್ ಆಫ್ ಏರೋಸ್ಪೇಸ್ ಮೆಡಿಸಿನ್‌ನಲ್ಲಿ ನಡೆಯಿತು.
400 ಕಿಮೀ ಎತ್ತರದಲ್ಲಿರುವ ಭೂ ಕೆಳ ಕಕ್ಷೆಗೆ ಗಗನಯಾತ್ರಿಗಳನ್ನು ಕಳುಹಿಸಿ, ಮೂರು ದಿನಗಳ ಕಾಲ ಅಂತರಿಕ್ಷ ಯಾನ ನಡೆಸಿದ ನಂತರ ಸುರಕ್ಷಿತವಾಗಿ ಭೂಮಿಗೆ ಕರೆತರುವುದು ಗಗನಯಾನ ಮಿಷನ್‌ನ ಗುರಿಯಾಗಿದೆ.