ಬೆಂಗಳೂರು, ಫೆ.27: ರಾಜ್ಯ ಸರ್ಕಾರ ಹಮ್ಮಿಕೊಂಡಿದ್ದ ಸಂವಿಧಾನ ಸಮಾವೇಶ ಕುರಿತು ಪ್ರತಿಪಕ್ಷದ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
ಸಂವಿಧಾನ ಸಮಾವೇಶದ ಹೆಸರಿನಲ್ಲಿ ವಿಕೃತ ಮನಸ್ಕರಿಗೆ ಸರ್ಕಾರಿ ಖರ್ಚಿನಲ್ಲಿ ವೇದಿಕೆ ಕಲ್ಪಿಸಿಕೊಟ್ಟಿದೆ ಎಂದು ಅಶೋಕ್ ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.
ರಾಜ್ಯದಲ್ಲಿ ಹಿಂದೆಂದೂ ಕಂಡರಿಯದ ಭೀಕರ ಬರಗಾಲ ಇದೆ, 900ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಕೃಷಿ ಕಾರ್ಮಿಕರು ಗುಳೆ ಹೋಗಿದ್ದಾರೆ, ಬೆಂಗಳೂರಲ್ಲಿ ಕುಡಿಯುವ ನೀರಿಗೂ ಜನ ಪರದಾಡುತ್ತಿದ್ದಾರೆ ಇಂತಹ ಪರಿಸ್ಥಿತಿಯಲ್ಲಿ ಅತಿಥಿಗಳಿಗೆ ಅಂತಾರಾಷ್ಟ್ರೀಯ ವಿಮಾನ ಟಿಕೆಟ್, ಪಂಚತಾರಾ ಹೋಟೆಲ್ ವಾಸ್ತವ್ಯ ಅಂತ ನೂರಾರು ಕೋಟಿ ಸರ್ಕಾರಿ ಹಣ ದುಂದು ವೆಚ್ಚ ಮಾಡಿ ಸಂವಿಧಾನ ಸಮಾವೇಶ ಮಾಡುವ ಅವಶ್ಯಕತೆ ಏನಿತ್ತು ಮುಖ್ಯ ಮಂತ್ರಿಗಳೇ ಎಂದು ಅವರು ಪ್ರಶ್ನಿಸಿದ್ದಾರೆ.
ಪತ್ರಿಕೆಗಳಿಗೆ 21.70 ಕೋಟಿ ರೂಪಾಯಿ ಸೇರಿ ಇತರೆ ಜಾಹೀರಾತುಗಳಿಗೆ 100 ಕೋಟಿ ವೆಚ್ಚ ಮಾಡಿ ಆರ್ಥಿಕ ಬಿಕ್ಕಟಿನಲ್ಲೂ ಪ್ರಚಾರದ ಗೀಳು ಪ್ರದರ್ಶಿಸಿದ್ದೀರಲ್ಲ ಮಹದೇವಪ್ಪನವರೇ,ಇದು ನಿಮ್ಮ ಕಾಂಗ್ರೆಸ್ ಪೋಷಿತ ಗಂಜಿ ಗಿರಾಕಿಗಳಿಗೆ ಲಾಭವೇ ಹೊರತು ಕನ್ನಡಿಗರಿಗೆ ಏನು ಲಾಭ ಎಂದು ಅಶೋಕ್ ಕೇಳಿದ್ದಾರೆ.
ನಿಮಗೆ ನಿಜವಾಗಿಯೂ ಸಂವಿಧಾನದ ಬಗ್ಗೆ, ಸಂವಿಧಾನದ ಆಶಯಗಳ ಬಗ್ಗೆ ಗೌರವ ಇದ್ದಿದ್ದರೆ ಇದೇ ಹಣವನ್ನ ಶಾಲಾ – ಕಾಲೇಜುಗಳ ವಿಧ್ಯಾರ್ಥಿಗಳಿಗೆ ಸಂವಿಧಾನದ ಬಗ್ಗೆ ಅರಿವು ಮೂಡಿಸುವ ರಚನಾತ್ಮಕ ಕಾರ್ಯಕ್ರಮಗಳನ್ನು ಹಳ್ಳಿ ಹಳ್ಳಿಗಳಲ್ಲಿ ಮಾಡಬಹುದಿತ್ತು. ಅದು ಬಿಟ್ಟು ನಿತಾಶಾ ಕೌಲ್ ರಂತಹ ದೇಶದ್ರೋಹಿಗಳಿಗೆ ಆಹ್ವಾನ ಕೊಟ್ಟಿದ್ದೀರಲ್ಲ ಇದೂ ಸಹ ನಿಮ್ಮ ನಾಯಕ ರಾಹುಲ್ ಗಾಂಧಿ ಅವರ ಅಪ್ಪಣೆಯಂತೆ ನಡೆದಿದೆಯೋ ಎಂದು ಕಿಡಿಕಾರಿದ್ದಾರೆ