Fri. Mar 6th, 2026

ನ್ಯಾಯಮೂರ್ತಿಗಳಿಂದ ಭ್ರಷ್ಟಾಚಾರ ಆರೋಪ ಕಾಂಗ್ರೆಸ್ ಸರ್ಕಾರ ಮೇಲಿನದ್ದೇ,: ಪ್ರತಿಪಕ್ಷ ನಾಯಕ ಆರ್‌.ಅಶೋಕ

Share this with Friends

ಬೆಂಗಳೂರು:ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಭ್ರಷ್ಟಾಚಾರದ ಆರೋಪ ಮಾಡಿದ್ದು,ಈಗಿನ ಕಾಂಗ್ರೆಸ್ ಸರ್ಕಾರದ ಮೇಲೆಯೇ ಹೊರತು ಹಿಂದಿನ ಬಿಜೆಪಿ ಸರ್ಕಾರದ ಮೇಲಲ್ಲ ಆದರೂ ಸಿಎಂ ಬಿಜೆಪಿ ಕಡೆ ಬೆರಳು ಮಾಡಿದ್ದು ಒಮ್ಮೆ ಅವರು ವೀಡಿಯೋ ನೋಡಿದರೆ ಸತ್ಯ ತಿಳಿಯಲಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‌ನ್ಯಾ.ಬಿ.ವೀರಪ್ಪ ಅವರು ಈಗಿನ ಕಾಂಗ್ರೆಸ್‌ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆಯೇ ಹೊರತು ಬಿಜೆಪಿ ಬಗ್ಗೆ ಹೇಳಿಲ್ಲ. ಇದು ಮಾಧ್ಯಮಗಳಲ್ಲೇ ಬಂದ ಸುದ್ದಿ.ಬಹಳ ಸ್ಪಷ್ಟವಾಗಿಯೇ ನ್ಯಾಯಮೂರ್ತಿಗಳು ಹಾಗೂ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಕರ್ನಾಟಕದ ಕಾಂಗ್ರೆಸ್‌ ಸರ್ಕಾರದ 63 ಪರ್ಸೆಂಟ್‌ ಭ್ರಷ್ಟಾಚಾರದ ಬಗ್ಗೆ ಹೇಳಿದ್ದಾರೆ.2019 ಎಂದು ಪ್ರಸ್ತಾಪ ಮಾಡಿಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ಹೇಳುವ ಮುನ್ನ ಅವರ ಮಾತಿನ ವೀಡಿಯೋ ನೋಡಲಿ ಎಂದರು.

ಆರೋಪವನ್ನು ನಾನು ಸೃಷ್ಟಿ ಮಾಡಿಲ್ಲ. ಇದು ಎಲ್ಲ ಪತ್ರಿಕೆ ಹಾಗೂ ಟಿವಿ ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ಸುದ್ದಿ. ಇದನ್ನು ನಾನು ತಿರುಚಲು ಸಾಧ್ಯವೇ ಇಲ್ಲ. ವಾಲ್ಮೀಕಿ ನಿಗಮದ ಹಗರಣ, ಮುಡಾ ಹಗರಣ, ಗುತ್ತಿಗೆದಾರರು ಮಾಡಿರುವ ಆರೋಪ ಮೊದಲಾದವು ಕಾಂಗ್ರೆಸ್‌ ಸರ್ಕಾರದ ಭ್ರಷ್ಟಾಚಾರಕ್ಕೆ ಸಾಕ್ಷಿ ಎಂದರು.

ಸರ್ಕಾರದಲ್ಲಿ ಇನ್ನೂ ಗೊಂದಲ ಇರುವುದರಿಂದ ಸರಣಿ ಸಭೆಗಳು ನಡೆಯುತ್ತಿದೆ. ಅವಿಶ್ವಾಸ ಮಂಡನೆಯಾದರೆ ಎಲ್ಲರೂ ಒಂದಾಗಿರಬೇಕೆಂದು ಸಿಎಂ ಸಿದ್ದರಾಮಯ್ಯ ಶಾಸಕರಿಗೆ ಸೂಚಿಸಿದ್ದಾರೆ. ಅವಿಶ್ವಾಸ ಮಂಡನೆ ಬಗ್ಗೆ ಬಿಜೆಪಿಯಲ್ಲಿ ಯಾವುದೇ ತೀರ್ಮಾನವಾಗಿಲ್ಲ. ಆದರೆ ಈ ಬಗ್ಗೆ ಸಲಹೆ ಬಂದಿರುವುದು ನಿಜ. ಅಧಿವೇಶನದಲ್ಲಿ ಆರಂಭದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕೆಂದು ಆಗ್ರಹಿಸುತ್ತೇವೆ. ಪ್ರವಾಹ ಹಾನಿಯ ಪರಿಹಾರ ನೀಡದೆ ರೈತರಿಗೆ ಮೋಸ ಮಾಡಲಾಗುತ್ತಿದೆ. ಎಲ್ಲಕ್ಕೂ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಲಾಗುತ್ತಿದೆ. ಆದ್ದರಿಂದ ಈ ಬಗ್ಗೆ ಮೊದಲಿಗೆ ನಿಲುವಳಿ ಸೂಚನೆ ತರುತ್ತೇವೆ ಎಂದರು.

ಸದ್ಯಕ್ಕೆ ನಾಟಿ ಕೋಳಿ ಸಾರು ತಿಂದಿರುವುದು ಇಂಟರ್ವೆಲ್‌ನಂತೆ ಬಂದಿದೆ. ಸದನದ ಬಳಿಕ ಅಧಿಕಾರ ಹಂಚಿಕೆ ಕಿತ್ತಾಟ ಮುಂದುವರಿಯಲಿದೆ. ಬೆಂಗಳೂರಿನಲ್ಲಿ ಮಾದಕ ವಸ್ತುಗಳ ಮಾರಾಟ ಅಧಿಕವಾಗಿದೆ. ಗಡಿಭಾಗದಲ್ಲಿ ಬಂದೋಬಸ್ತ್‌ ಬಿಗಿ ಮಾಡಿದರೆ ಇದನ್ನು ತಡೆಗಟ್ಟಬಹುದು. ಜೈಲುಗಳಲ್ಲೇ ಗಾಂಜಾ, ಅಫೀಮು ಮಾರಾಟವಾಗುತ್ತಿದೆ. ಸರ್ಕಾರ ಕೂಡಲೇ ಸಭೆ ಕರೆದು ಎಲ್ಲ ಕಡೆ ಮಾದಕ ವಸ್ತುಗಳ ಬಳಕೆಯನ್ನು ನಿಯಂತ್ರಿಸಬೇಕು. ಇಲ್ಲವಾದರೆ ಕರ್ನಾಟಕ ರಾಜ್ಯ ಡ್ರಗ್‌ ಮಾಫಿಯಾದ ಹೆದ್ದಾರಿಯಾಗಲಿದೆ ಎಂದರು.

ಅರಣ್ಯ ಇಲಾಖೆಗೆ ಅನುದಾನ ಕಡಿಮೆಯಾಗಿ ವನ್ಯಜೀವಿ-ಮಾನವ ಸಂಘರ್ಷ ಹೆಚ್ಚಿದೆ. ಆನೆಗಳ ಸಾವು ಅಧಿಕವಾಗಿದೆ. ಜಂಗಲ್‌ ಸಫಾರಿಯಿಂದಾಗಿ ವನ್ಯಜೀವಿಗಳು ಕಾಡಿಂದ ನಾಡಿಗೆ ಬರುತ್ತಿವೆ ಎನ್ನುವುದಕ್ಕೆ ಅರ್ಥವಿಲ್ಲ. ಅರಣ್ಯ ಪ್ರವಾಸೋದ್ಯಮಕ್ಕೆ ಕಲ್ಲು ಹಾಕಲಾಗಿದೆ. ಈ ಬಗ್ಗೆಯೂ ಚರ್ಚೆ ಮಾಡುತ್ತೇವೆ ಎಂದರು.


Share this with Friends

Related Post