ಮೈಸೂರು, ಫೆ.27: ಸಕಾರಾತ್ಮಕ ಶಕ್ತಿ ಆತ್ಮಭಿಮಾನ,ಆತ್ಮಗೌರವ ಹೆಚ್ಚಲು ಸಹಕಾರಿ ಎಂದು ಬ್ರಹ್ಮಕುಮಾರಿ ಬಿ. ಕೆ. ಮಂಜುಳಾ ಹೇಳಿದರು.
ಮೈಸೂರಿನ ಟಿ ಟಿ ಎಲ್ ಟ್ರಸ್ಟ್, ಟಿಟಿಎಲ್ ವಾಣಿಜ್ಯ ವ್ಯವಹಾರ ನಿರ್ವಹಣಾ ಕಾಲೇಜು, ಟಿಟಿಎಲ್ ಸ್ವತಂತ್ರ ಪದವಿ ಪೂರ್ವ ಕಾಲೇಜು ಮತ್ತು ಯುವ ರೆಡ್ ಕ್ರಾಸ್ ಘಟಕ, ರಾಷ್ಟ್ರೀಯ ಸೇವಾ ಯೋಜನೆ ಘಟಕ, ಐಕ್ಯೂಎ ಸಿ ಜಂಟಿಯಾಗಿ ಆಯೋಜಿಸಿದ್ದ ಸಕಾರಾತ್ಮಕತೆಯ ಶಕ್ತಿ’ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಕಾರಾತ್ಮಕ ಶಕ್ತಿ ಹಾಗೂ ನಕಾರಾತ್ಮಕ ಶಕ್ತಿ ಎರಡು ನಮ್ಮಲ್ಲಿಯೇ ಇರುತ್ತದೆ. ಸಕಾರಾತ್ಮಕ ಚಿಂತನೆ ಎಂದರೆ ಒಳ್ಳೆಯ ಕೆಲಸ, ಪ್ರೀತಿ, ವಿಶ್ವಾಸ, ನಂಬಿಕೆ,ಒಳ್ಳೆಯತನ ಇವೆಲ್ಲವೂ ನಮ್ಮನ್ನು ಬೆಳಕಿನೆಡೆಗೆ ಕರೆದೊಯ್ಯುತ್ತದೆ ಎಂದು ತಿಳಿಸಿದರು.
ಮನುಷ್ಯನೇ ಒಂದು ಶಕ್ತಿ, ಎಲ್ಲರಲ್ಲಿಯೂ ಆ ಶಕ್ತಿ ಇರುತ್ತದೆ ಅದನ್ನು ಲೈಟ್ ಎಂಬ ಬೆಳಕಿನಿಂದ ನಾವು ಜಾಗೃತಗೊಳಿಸಬೇಕು, ಲೈಟ್ ಎಂದರೆ ‘ಲೆಟ್ ಇಟ್ ಗೋ’ ಬೇಡವಾದ ವಿಚಾರಗಳಿಗೆ ತಲೆಕೆಡಿಸಿಕೊಳ್ಳಬಾರದು ಎಂದು ವಿದ್ಯಾರ್ಥಿಗಳಿಗೆ ಮಂಜುಳಾ ಸಲಹೆ ನೀಡಿದರು.
ಹಿರಿಯ ಪ್ರಾಧ್ಯಾಪಕರಾದ ಪ್ರೊ. ಎನ್.ಎಂ ರಾಮಚಂದ್ರಯ್ಯ ಅವರು ಧ್ಯಾನ ಮತ್ತು ಸಮರ್ಪಣಾ ಭಾವವನ್ನು ವಿದ್ಯಾರ್ಥಿಗಳು ಹೊಂದಬೇಕೆಂದು ಕಿವಿ ಮಾತು ಹೇಳಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟಿ.ಟಿ.ಎಲ್ ಪದವಿ ಕಾಲೇಜು ಪ್ರಾಂಶುಪಾಲರಾದ ಡಾ. ಬಿ ವಿ ಪ್ರಶಾಂತ್ ವಹಿಸಿದ್ದರು.
ವಿಶೇಷ ಆಹ್ವಾನಿತರಾಗಿ ಮೈಸೂರಿನ ಕೆಎಂಪಿ ಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಆಗಮಿಸಿದ್ದರು.
ಟಿಟಿಎಲ್ ಕಾಲೇಜಿನ ಟ್ರಸ್ಟಿ ಗೀತಾ ರಾಮದಾಸ್, ಬ್ರಹ್ಮಕುಮಾರಿಸ್ ಸರಸ್ವತಿಪುರಂ ಸೆಂಟರನ ಸುಮಿತ್ರ ಸ್ವಾಮಿ, ವಾಣಿಜ್ಯ ಶಾಸ್ತ್ರ ವಿಭಾಗದ ಅಧಿಕಾರಿ ಡಾಕ್ಟರ್ ಆಶಾ, ಗ್ರಂಥ ಪಾಲಕರಾದ ರಮ್ಯಶ್ರೀ ಎಸ್. ಹೆಚ್, ಯುವ ರೆಡ್ ಕ್ರಾಸ್ ಘಟಕದ ಸಂಚಾಲಕ ಗಿರೀಶ ಹೆಚ್ ಆರ್, ಉಪನ್ಯಾಸಕರಾದ ಕರುಣ್ ಶರ್ಮ ಮತ್ತಿತರರು ಹಾಜರಿದ್ದರು.