Fri. Mar 6th, 2026

ಪುತ್ತೂರಿನಲ್ಲಿ ಹೊಸ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ: ದಿನೇಶ್ ಗುಂಡೂರಾವ್

Share this with Friends

ಬೆಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಕನಸು ನನಸಾಗುತ್ತಿದ್ದು, ಪುತ್ತೂರಿನಲ್ಲಿ ಹೊಸ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಲು ಸರ್ಕಾರ ತೀರ್ಮಾನಿಸಿದೆ ಈ ಸಂಬಂಧ ಸರ್ಕಾರಿ ಆದೇಶವೂ ಹೊರಬಿದ್ದಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಸಚಿವರು,ದಕ್ಷಿಣ ಕನ್ನಡ ಜಿಲ್ಲೆ ಶೈಕ್ಷಣಿಕವಾಗಿ ಸಾಕಷ್ಟು ಮುಂದಿದ್ದರೂ ಸರ್ಕಾರಿ ವೈದ್ಯಕೀಯ ಕಾಲೇಜು ಮಾತ್ರ ಇರಲೇ ಇಲ್ಲ. ಆ ಪ್ರದೇಶಕ್ಕೆ ಒಂದು ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕೆನ್ನುವ ಕೂಗು ಹಲವಾರು ವರ್ಷಗಳಿಂದ ಕೇಳಿಬಂದಿದ್ದರೂ ಇದುವರೆಗೂ ಅದು ಸಾಧ್ಯವಾಗಿರಲಿಲ್ಲ. ಆದರೆ, ಇದೇ ಮೊದಲ ಬಾರಿಗೆ ಜಿಲ್ಲೆಯ ಜನರ ಹಾಗೂ ಸಾರ್ವಜನಿಕರ ಆ ಕನಸು ಕೈಗೂಡುತ್ತಿದೆ. ಅದನ್ನು ಸಾಕಾರ ಮಾಡುವ ನಿಟ್ಟಿನಲ್ಲಿ ಕರಾವಳಿಯ ಉಸ್ತುವಾರಿ ಸಚಿವನಾಗಿ ನಾನು ಮಾಡಿದ ಪ್ರಾಮಾಣಿಕ ಪ್ರಯತ್ನ ಫಲ ನೀಡಿದೆ ಎಂದಿದ್ದಾರೆ.

2025-26ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ – 138 (iv) – “ಪುತ್ತೂರಿನಲ್ಲಿ ಹೊಸ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಲು ಸರ್ಕಾರ ತೀರ್ಮಾನಿಸಿದೆ. ಇದಕ್ಕಾಗಿ ಈಗಿರುವ 100 ಹಾಸಿಗೆ ಸಾಮರ್ಥ್ಯದ ತಾಲೂಕು ಆಸ್ಪತ್ರೆಯನ್ನು ಉನ್ನತೀಕರಿಸಲು ಪ್ರಸಕ್ತ ವರ್ಷದಲ್ಲಿ ಕ್ರಮವಹಿಸಲಾಗುತ್ತಿದ್ದು, ಯೋಜನೆ ಅನುಷ್ಟಾನಗೊಳಿಸಲು ವೈದ್ಯಕೀಯ ಶಿಕ್ಷಣ ಇಲಾಖೆಗೆ ವರ್ಗಾಯಿಸುವ ಬಗ್ಗೆ ಸರ್ಕಾರ ಆದೇಶ ಹೊರಡಿಸಿದೆ ಎಂದಿದ್ದಾರೆ.

ವಿದ್ಯಾರ್ಥಿ-ಯುವಜನರನ್ನು ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ, ಆರ್ಥಿಕವಾಗಿ ಪ್ರಬಲರನ್ನಾಗಿಸುವ ನಿಟ್ಟಿನಲ್ಲಿ ಅಭಿವೃದ್ಧಿ ರಾಜಕಾರಣ ಮಾಡಬೇಕೇ ವಿನಃ ಜಾತಿ-ಧರ್ಮದ ಹೆಸರಲ್ಲಿ ಪೆನ್ನು-ಪುಸ್ತಕ ಹಿಡಿಯುವ ಕೈಗೆ ಚಾಕು-ಚೂರಿ-ತ್ರಿಶೂಲ ಕೊಟ್ಟು ಕೇಸರಿ ಸಾಲು ಹಾಕಿ ಬೀದಿ ಹೆಣಗಳನ್ನಾಗಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕೊಳಕು ರಾಜಕಾರಣ ಮಾಡಬಾರದು ಎಂದು ಬಿಜೆಪಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ದಕ್ಷಿಣ ಕನ್ನಡದ ಎಲ್ಲ ಸಮುದಾಯಗಳ ವಿದ್ಯಾರ್ಥಿ ಯುವಜನರು ಶೈಕ್ಷಣಿಕವಾಗಿ ಪ್ರಗತಿ ಸಾಧಿಸುವತ್ತ ಹೆಜ್ಜೆ ಹಾಕಬೇಕು. ಆ ನಿಟ್ಟಿನಲ್ಲಿ ಬೇಕಾದ ಎಲ್ಲ ಸಹಕಾರವನ್ನು ನೀಡಲು ನಾವು ಬದ್ಧರಾಗಿದ್ದೇವೆ ಎಂದು ಭರವಸೆ ನೀಡಿದರು.

ಮರಣ ಪ್ರಮಾಣಪತ್ರ:

ಮರಣ ಪ್ರಮಾಣಪತ್ರ (MCCD) ವಿತರಣಾ ವ್ಯವಸ್ಥೆಯನ್ನು ಪಾರದರ್ಶಕವಾಗಿಮತ್ತು ಕ್ರಮಬದ್ಧವಾಗಿ ಅನುಷ್ಠಾನಗೊಳಿಸುವ ಕುರಿತು ಆರೋಗ್ಯ ಇಲಾಖೆ ಮೂಲಕ ಪ್ರಮುಖ ಸುತ್ತೋಲೆಯನ್ನು ಹೊರಡಿಸಲಾಗಿದೆ.ಕೇಂದ್ರ ಸರ್ಕಾರದ ಅಧಿಸೂಚನೆಯಂತೆ, ಕರ್ನಾಟಕದಲ್ಲಿ ನೋಂದಣಿ ಮತ್ತು ಜನನ ಮತ್ತು ಮರಣ (ತಿದ್ದುಪಡಿ) ನಿಯಮಗಳು, 2024 ಅನ್ನು ದಿ: ಜನವರಿ 16, 2025 ರಿಂದ ಜಾರಿಗೆ ತರಲಾಗುತ್ತಿದೆ.ಪ್ರಸ್ತುತ ದೃಢೀಕರಿಸಿರುವ  26.73%  ಮರಣ ಪ್ರಮಾಣದ ನೋಂದಣಿಯ ವ್ಯಾಪ್ತಿಯನ್ನು ಹೆಚ್ಚಿಸುವುದು.ಈ ನೆಲದ ಯಾವುದೇ ನಾಗರಿಕರ ಸಹಜ ಅಥವಾ ಅಸಹಜ ಸಾವಾದರೂ ಅದನ್ನು ವೈದ್ಯಕೀಯ ಇಲಾಖೆಯ ನಿಯಮದನ್ವಯ ನೋಂದಣಿಯಲ್ಲಿ ಬಿಟ್ಟುಹೋಗದಂತೆ ದಾಖಲೆಗೆ ಸೇರಿಸುವ ಗುರಿ ಹೊಂದಲಾಗಿದೆ.ಈ ಕಾರಣದಿಂದ ಆರೋಗ್ಯ ಸಂಸ್ಥೆಗಳಿಗೆ ಕಡ್ಡಾಯ ನಿಯಮಗಳನ್ನು ಹೊರಡಿಸಲಾಗಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

1. ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿ ಸಂಭವಿಸುವ ಪ್ರತಿ ಮರಣಕ್ಕೂ ಕಡ್ಡಾಯವಾಗಿ MCCD (ಫಾರ್ಮ್ 4/4A) ನೀಡಬೇಕು.

2. MCCD ಅನ್ನು eJanMa ಮೂಲಕ ಸ್ಥಳೀಯ ರಿಜಿಸ್ಟರ್‌ಗೆ ಎಲೆಕ್ಟ್ರಾನಿಕ್ ರೂಪದಲ್ಲಿ ಸಲ್ಲಿಸಬೇಕು.

3. ಮರಣ ಸಂಭವಿಸಿದ 10 ದಿನಗಳ ಒಳಗೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.

4. ಯಾವುದೇ ಮರಣಗಳು ಸಂಭವಿಸದಿದ್ದರೂ ಸಹ (‘ಶೂನ್ಯ ವರದಿ’/Nil Report) ಮಾಸಿಕ ವರದಿಯನ್ನು ಕಡ್ಡಾಯವಾಗಿ ಸಲ್ಲಿಸುವುದು.


Share this with Friends

Related Post