ಬೆಳಗಾವಿ:ಬಗರ್ ಹುಕುಂ ಸಾಗುವಳಿ ಚೀಟಿ ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳು-ಭೂ ಮಾಫಿಯಾ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಿದ್ದು, ಭೂ ಕಬಳಿಕೆದಾರರ ವಿರುದ್ಧ ಎಫ್ಐಆರ್ ದಾಖಲಿಸಲಾಗುತ್ತದೆ, 2018ರಿಂದ ಸಂಬಂಧಿತ ಎಲ್ಲಾ ಅಧಿಕಾರಿಗಳ ವಿರುದ್ಧ ಕೇಸ್ ಮಾಡಲಾಗುತ್ತದೆ,ವರದಿ ಬರುತ್ತಿದ್ದಂತೆ, ಕ್ರಿಮಿನಲ್ ಕೇಸ್ ಮತ್ತು ಶಿಸ್ತುಕ್ರಮ ಖಚಿತ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ವಿಧಾನ ಪರಿಷತ್ನಲ್ಲಿ ಶುಕ್ರವಾರ ಶೂನ್ಯವೇಳೆ ಚರ್ಚೆಯ ಸಂದರ್ಭ ಶಾಸಕರಾದ ರಮೇಶ್ ಬಾಬು ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವ ಕೃಷ್ಣ ಬೈರೇಗೌಡ, “ರೈತರ ಹೆಸರಲ್ಲಿ ನಕಲಿ ಭೂ ಸಾಗುವಳಿ ಚೀಟಿ ನೀಡುತ್ತಿರುವ ವಿಚಾರ ನಮ್ಮ ಗಮನಕ್ಕೆ ಬಂದ ಕೂಡಲೇ ಕಳೆದ ನವೆಂಬರ್ 13 ರಂದೇ ತನಿಖಾ ತಂಡವನ್ನು ರೂಪಿಸಿ ಚಿಕ್ಕನಾಯಕನಹಳ್ಳಿಗೆ ಕಳುಹಿಸಲಾಗಿದೆ. ತನಿಖೆ ಪ್ರಗತಿಯಲ್ಲಿದೆ. ಅಭಿಲೇಖಾಲಯದ ಅಧಿಕಾರಿಗಳ ಸಹಾಯ ಇಲ್ಲದೆ ಕಡತಗಳನ್ನು ತಿದ್ದಲು ಸಾಧ್ಯವಿಲ್ಲ. ಹೀಗಾಗಿ 2018 ರಿಂದ ಈವರೆಗೆ ಚಿಕ್ಕನಾಯಕನಹಳ್ಳಿ ತಾಲೂಕಿನ ಅಭಿಲೇಖಾಲಯದ ಉಸ್ತುವಾರಿ ವಹಿಸಿದ್ದ ಎಲ್ಲಾ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ” ಎಂದರು.
“ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಭೂ ಕಬಳಿಕೆದಾರರಿಗೆ ನೀಡುವ ಪ್ರವೃತ್ತಿಯನ್ನು ಯಾವ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಈ ಅಕ್ರಮದಲ್ಲಿ ಕೆಲ ಅಧಿಕಾರಿಗಳು ಭಾಗಿಯಾಗಿದ್ದಾರೆ. ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಸುಮಾರು 98 ಜನರಿಗೆ ರೈತರ ಹೆಸರಿನಲ್ಲಿ ಸಾಗುವಳಿ ಚೀಟಿ ನೀಡಿರುವ ಪ್ರಕರಣ ಇಲಾಖೆ ಗಮನದಲ್ಲಿದೆ. ಈ ನಕಲಿ ಸಾಗುವಳಿ ಚೀಟಿ ಮೇಲೆ ಖಾತೆಗೆ ಅರ್ಜಿ ಸಲ್ಲಿಸಿದ ಭೂ ಕಬಳಿಕೆದಾರರ ವಿರುದ್ಧ ಈಗಾಗಲೇ ಎಫ್ಐಆರ್ ದಾಖಲಿದಲಾಗಿದೆ ಎಂದರು.
“ನಕಲಿ ಸಾಗುವಳಿ ಚೀಟಿಯಲ್ಲಿರುವ ಅಧಿಕಾರಿಗಳ ಸಹಿ ಪೈಕಿ ಯಾರ ಸಹಿ ಅಸಲಿ, ಯಾರ ಸಹಿ ನಕಲಿ ಎಂದು ಪತ್ತೆ ಹಚ್ಚುವ ಕೆಲಸದಲ್ಲಿ ತನಿಖಾ ತಂಡ ನಿರತವಾಗಿದೆ. ನಿಜವಾದ ಸಹಿ ತಾಳೆಗೆ ಸಂಬಂಧಿಸಿದ ವರದಿ ನೀಡಲು ಅಧಿಕಾರಿಗಳು ಇನ್ನೂ ಒಂದು ವಾರ ಸಮಯ ಕೇಳಿದ್ದಾರೆ. ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ವರದಿ ಕೈಸೇರುತ್ತಿದ್ದಂತೆ ಅಕ್ರಮದಲ್ಲಿ ಶಾಮೀಲಾಗಿರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವ ಜೊತೆಗೆ ಇಲಾಖೆ ಶಿಸ್ತುಕ್ರಮವನ್ನೂ ಜರುಗಿಸಲಾಗುವುದು” ಎಂದರು.

