ಬೆಂಗಳೂರು : ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದು ಎಫ್ ಎಸ್ ಎಲ್ ತನಿಖಾ ವರದಿಯಲ್ಲಿ ಸಾಬೀತಾದರೆ ಅಂತಹವರಿಗೆ ಕಠಿಣ ಶಿಕ್ಷೆ ನೀಡಲು ನಾವು ಬದ್ಧ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಭರವಸೆ ನೀಡಿದರು. ವಿಧಾನಸಭೆಯಲ್ಲಿ ಘಟನೆಯ ಬಗ್ಗೆ ನಡೆದ ಚರ್ಚೆಗೆ ಉತ್ತರ ನೀಡಿದ ಅವರು, ರಾಜಕೀಯ ಚರ್ಚೆ ಮಾಡಲು ಇಂತಹ ಗಂಭೀರವಾದ ವಿಚಾರ ಉಪಯೋಗ ಮಾಡ್ತಿದ್ದೇವೆ. ಇಂತಹ ವಿಚಾರ ಚರ್ಚೆ ಮಾಡುವಾಗ ನೈಜ ವಿಚಾರವಾಗಿ ಚರ್ಚೆ ಮಾಡಬೇಕು. ಹಾಗಾದಾಗ ಈ ರೀತಿಯ ಘಟನೆಗಳು ಮರುಕಳಿಸಲ್ಲ ಎಂದರು.
ಕಾಂಗ್ರೆಸ್ ಪಕ್ಷಕ್ಕೆ ದೇಶಪ್ರೇಮದ ಪಾಠದ ಅಗತ್ಯ ಇಲ್ಲ. ದೇಶದ ಸ್ವಾತಂತ್ರ್ಯಕ್ಕೆ ಎಷ್ಟು ಜನರನ್ನು ಬಲಿ ಕೊಟ್ಟಿಲ್ಲ? ಸ್ವಾತಂತ್ರ್ಯ ಪೂರ್ವ ಕಾಂಗ್ರೆಸ್ ಹಾಗೂ ಇಂದಿನ ಕಾಂಗ್ರೆಸ್ ಬೇರೆ ಆಗಿರಬಹುದು. ಆದರೆ, ನಮ್ಮ ಬದ್ಧತೆ, ನಿಲುವುಗಳಲ್ಲಿ ಬದಲಾವಣೆ ಆಗಿಲ್ಲ. ಹಾಗಾಗಿ ಕಾಂಗ್ರೆಸ್ ಗೆ ದೇಶ ಪ್ರೇಮದ ಪಾಠ ಮಾಡುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದರು. ಪ್ರಧಾನಿ ಮೋದಿ ಪಾಕಿಸ್ತಾನಕ್ಕೆ ಹೋದಾಗ ನಾವು ತಪ್ಪು ತಿಳಿದುಕೊಂಡಿದ್ದೆವಾ? ಎಂದರು.
ಈ ಘಟನೆ ಆಗಬಾರದಿತ್ತು. ಮಾಧ್ಯಮಗಳಲ್ಲಿ ಎರಡು ಅಭಿಪ್ರಾಯವಿದೆ. ಈ ನಿಟ್ಟಿನಲ್ಲಿ ಸ್ವಯಂಪ್ರೇರಿತ ಕೇಸ್ ದಾಖಲಾಗಿದೆ. ಗೆದ್ದಾಗ ಅವರವರ ಅಭಿಮಾನಿಗಳು ಬಂದಿದ್ದಾರೆ. ಆದರೆ ಯಾರಿಗೂ ಬಿಡಬಾರದಿತ್ತು. ಪಾಕಿಸ್ತಾನ ಘೋಷಣೆ ಕೂಗಿದರೆ ಅದನ್ನು ತಾಂತ್ರಿಕವಾಗಿ ತನಿಖೆ ಆಗಬೇಕು. ಘೋಷಣೆ ಕೂಗಿದ್ದರೆ ಅವನಿಗೆ ಒಂದು ಕ್ಷಣ ಬಿಡಲ್ಲ. ಕಾನೂನಿನಲ್ಲಿ ಏನು ಶಿಕ್ಷೆ ಕೊಡಬೇಕೋ ಅದನ್ನು ನೀಡುತ್ತೇವೆ ಎಂದು ಹೇಳಿದರು.
ಪಾಕ್ ಪರ ಘೋಷಣೆ ಸಾಬೀತಾದರೆ ಕ್ರಮ: ಸಿಎಂ
ಪಾಕಿಸ್ತಾನ ಪರ ಘೋಷಣೆ ಕೂಗಿರುವುದು ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ದೇಶ ದ್ರೋಹಿಗಳನ್ನು ಮಟ್ಟಹಾಕಬೇಕಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆಯೇ ಎಂಬ ಬಗ್ಗೆ ಮೊದಲು ತನಿಖೆಯಾಗಬೇಕಿದೆ. ಅದಕ್ಕೆ ಸಂಬಂಧಿಸಿದ ವಿಡಿಯೋ ತುಣುಕುಗಳನ್ನು ಈಗಾಗಲೇ ವಿಧಿವಿಜ್ಞಾನ ಪ್ರಯೋಗಾಯಕ್ಕೆ ತನಿಖೆಗೆ ಕಳುಹಿಸಿಕೊಟ್ಟಿದ್ದೇವೆ. ಘೋಷಣೆ ಕೂಗಿದ್ದು ನಿಜವೇ ಆಗಿದ್ದರೆ ಕ್ರಮ ಕೈಗೊಳ್ಳುತ್ತೇವೆ. ತಪ್ಪಿತಸ್ಥರು ಯಾರೇ ಆಗಿರಲಿ, ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.