ಬೆಳಗಾವಿ: ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸದನಕ್ಕೆ ತಪ್ಪು ಮಾಹಿತಿ ನೀಡಿದ್ದರೆ ಹಕ್ಕುಚ್ಯುತಿ ಮಂಡಿಸಲಿ ಎಂದು ಬಿಜೆಪಿ ಜೆಡಿಎಸ್ ಗೆ ಡಿಸಿಎಂ ಡಿಕೆ ಶಿವಕುಮಾರ್ ನೇರ ಸವಾಲೆಸೆದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಗೃಹಲಕ್ಷ್ಮಿ ಹಣದ ಬಗ್ಗೆ ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ವಿರೋಧ ಪಕ್ಷಗಳು ಪ್ರತಿಭಟನೆ ಮಾಡಿವೆ “ತಪ್ಪು ಮಾಹಿತಿ ನೀಡಿದ್ದರೆ ಹಕ್ಕುಚ್ಯುತಿ ಮಂಡಿಸಲಿ. ಗ್ಯಾರಂಟಿ ಯೋಜನೆಗಳನ್ನು ನಾವು ಘೋಷಣೆ ಮಾಡಿದ್ದು, ನಾವು ಅದನ್ನು ನೀಡುತ್ತೇವೆ. ಸಚಿವೆ ಲಕ್ಷ್ಮಿ ಹೆಚ್ಚಾಳ್ಕರ್ ಅವರು ಗೃಹಲಕ್ಷ್ಮಿ ಹಣವನ್ನು ತೆಗದುಕೊಂಡು ಹೋಗಿದ್ದಾರಾ? ಫಲಾನುಭವಿಗಳಲ್ಲಿ ಯಾರೊಬ್ಬರು ಒಂದು ರೂಪಾಯಿ ಹಣ ಲಂಚ ನೀಡದೇ, ನೇರವಾಗಿ ತಮ್ಮ ಹಣ ಪಡೆಯುತ್ತಿದ್ದಾರೆ. ಸರ್ಕಾರಕ್ಕೆ ಹಣ ಬಂದಂತೆ ಹಂತಹಂತವಾಗಿ ಫಲಾನುಭವಿಗಳಿಗೆ ನೀಡುತ್ತಿದ್ದೇವೆ. ಸ್ವಲ್ಪ ತಡವಾಗಬಹುದು, ಆದರೆ ಬರುತ್ತದೆ ಎಂದರು.
ಬಿಜೆಪಿಯವರು ಗ್ಯಾರಂಟಿ ಯೋಜನೆಗಳನ್ನು ವಿರೋಧ ಮಾಡಿದವರು. ಐದು ಬೆರಳು ಸೇರಿ ಕೈ ಮುಷ್ಟಿಯಾಯ್ತು, ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು. ಬಿಜೆಪಿಯವರು ಕೇಂದ್ರ ಸರ್ಕಾರದಿಂದ ಬರಬೇಕಾಗಿರುವ ಅನುದಾನ ಬಿಡುಗಡೆ ಮಾಡಿಸಲಿ”.ಅವರಿಗೆ ಮಾನ ಮರ್ಯಾದೆ ಇದ್ದರೆ ನರೇಗಾ ಅನುದಾನ ಬಾರದಿರುವ ಬಗ್ಗೆ ಧ್ವನಿ ಎತ್ತಲಿ. ನರೇಗಾ ಮಾತ್ರವಲ್ಲ, ನೀರಾವರಿ ಯೋಜನೆಗಳ ಅನುದಾನ, ಜಲ್ ಜಿವನ್ ಮಿಷನ್ ಅನುದಾನ ಬಂದಿಲ್ಲ. ಅವರು ಮೊದಲು ಮಾತನಾಡಲಿ,ಜಿಎಸ್ಟಿಯಿಂದ 15 ಕೋಟಿ ನಷ್ಟವಾಗಿದೆ. ಇದನ್ನು ನೀಡುವವರು ಯಾರು? ಎಂದು ಪ್ರಶ್ನಿಸಿದರು.
ರಾಜಕೀಯ ಪ್ರೇರಿತ ಪ್ರಕರಣಗಳನ್ನು ಪರಿಗಣಿಸದೇ ನ್ಯಾಯಾಲಯದಿಂದ ಬಿಜೆಪಿ, ಇಡಿಗೆ ದೊಡ್ಡ ಸಂದೇಶ:
ನ್ಯಾಷನಲ್ ಹೆರಾಲ್ಡ್ ಪ್ರಕರಣದ ಬಗ್ಗೆ ನ್ಯಾಯಾಲಯದ ತೀರ್ಪಿನ ಬಗ್ಗೆ ಕೇಳಿದಾಗ, “ರಾಜಕೀಯ ಪ್ರೇರಿತ ಪ್ರಕರಣಗಳನ್ನು ನ್ಯಾಯಾಲಯ ಪರಿಗಣಿಸದೇ ಇರುವುದು ಬಿಜೆಪಿ ಮತ್ತು ಇ.ಡಿಗೆ ನೀಡಿರುವ ದೊಡ್ಡ ಸಂದೇಶ. ನ್ಯಾಯಾಲಯದ ತೀರ್ಪಿನಿಂದ ನನಗೆ ಸಂತೋಷವಾಗಿದೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಇ.ಡಿಯ ಚಾರ್ಜ್‌ಶೀಟ್ ಅನ್ನು ಪರಿಗಣನೆಗೆ ತೆಗೆದುಕೊಳ್ಳಲು ನ್ಯಾಯಾಲಯ ನಿರಾಕರಿಸಿದೆ. ಇದು ನನಗೆ ಸಂತೋಷ ಉಂಟುಮಾಡಿದೆ. ಇ.ಡಿ ತನ್ನ ಅಧಿಕಾರ ದುರ್ಬಳಕೆ ಮಾಡಿಕೊಂಡು ತನ್ನ ವರ್ಚಸ್ಸನ್ನು ಕಳೆದುಕೊಂಡಿದೆ. ಇ.ಡಿ ವಿವಿಧ ಪಕ್ಷಗಳ ನಾಯಕರ ಮೇಲೆ ಅನೇಕ ಪ್ರಕರಣಗಳನ್ನು ದಾಖಲಿಸಿದೆ. ಅವರು ಆಡಳಿತರೂಡ ಬಿಜೆಪಿ ವಿರುದ್ಧ ಏಕೆ ಪ್ರಕರಣ ದಾಖಲಿಸಿಲ್ಲ? ಅಂತಿಮವಾಗಿ ನ್ಯಾಯ ಗೆದ್ದಿದೆ. ಸತ್ಯವನ್ನು ಎತ್ತಿ ಹಿಡಿದಿದ್ದಕ್ಕೆ ನ್ಯಾಯಸ್ಥಾನದಲ್ಲಿ ಕುಳಿತಿರುವವರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ” ಎಂದು ಉತ್ತರಿಸಿದರು.
ನೀವು ಗಾಂಧಿ ಕುಟುಂಬದ ಬೆನ್ನಿಗೆ ನಿಂತಿರುವ ಕಾರಣ ನಿಮ್ಮನ್ನು ಗುರಿಯಾಗಿಸಲಾಗುತ್ತಿದೆಯೇ ಎಂದು ಕೇಳಿದಾಗ, “ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದು, ನಮ್ಮನ್ನು ಬೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಮ್ಮನ್ನು ಜೈಲಿಗೆ ಹಾಕಲು ನೋಡುತ್ತಿದ್ದಾರೆ. ನಾವು ಜೈಲು ನೋಡಿದ್ದೇವೆ. ಗಾಂಧಿ ಕುಟುಂಬ ಎಲ್ಲವನ್ನು ಅನುಭವಿಸಿದೆ. ಇಡೀ ದೇಶ ನಮ್ಮ ಪರ ನಿಲ್ಲಲಿದೆ. ಬಿಜೆಪಿ ಅದರಿಂದ ಪಾಠ ಕಲಿತು, ದ್ವೇಷ ರಾಜಕಾರಣ ನಿಲ್ಲಿಸಲಿ. ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ನಿಲ್ಲಿಸಲಿ. ಪ್ರಜಾಪ್ರಭುತ್ವದಲ್ಲಿ ಯಾವುದೂ ಶಾಶ್ವತವಲ್ಲ” ಎಂದು ತಿಳಿಸಿದರು.
ನರೇಗಾ ಯೋಜನೆಯಲ್ಲಿ ಗಾಂಧಿ ಅವರ ಹೆಸರು ತೆಗೆದಿರುವ ಬಗ್ಗೆ ಕೇಳಿದಾಗ, “ಮಹಾತ್ಮಾ ಗಾಂಧಿ ಅವರ ಹೆಸರು ತೆಗೆಯಲು ಸಾಧ್ಯವಿಲ್ಲ. ಅವರಿಗೆ ಧೈರ್ಯವಿದ್ದರೆ ನೋಟಿನಲ್ಲಿರುವ ಗಾಂಧಿ ಭಾವಚಿತ್ರ ತೆಗೆದುಹಾಕಲಿ. ಇವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ದೇಶದ ಸ್ವಾತಂತ್ರ್ಯದ ಹೋರಾಟವನ್ನು ಮುನ್ನಡೆಸಿದರು. ಮಹಾತ್ಮಾ ಗಾಂಧಿ ಅವರ ಹೆಸರನ್ನು ಅಳಿಸಿಹಾಕಲು ಬಿಜೆಪಿಯವರು ಪ್ರಯತ್ನಿಸುತ್ತಿದ್ದಾರೆ. ಅದು ಸಾಧ್ಯವಿಲ್ಲ. ಇದು ದೇಶದ ಅತಿ ಹೆಚ್ಚು ಖ್ಯಾತಿ ಪಡೆದಿರುವ ಯೋಜನೆ. ಇದರಿಂದ ಗ್ರಾಮೀಣ ಭಾಗದ ಜನರಿಗೆ ಉದ್ಯೋಗ, ಅಭಿವೃದ್ಧಿ, ಆರ್ಥಿಕ ಶಕ್ತಿ ಸಿಗುತ್ತಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದ ವಿರುದ್ಧ ನಾವು ಬೀದಿಗಿಳಿದು ಹೋರಾಟ ಮಾಡುತ್ತೇವೆ. ಬಿಜೆಪಿಯ ಕೊನೆ ದಿನಗಳು ಆರಂಭವಾಗಿದೆ. ಈ ದೇಶದಲ್ಲಿ ಸಂವಿಧಾನ, ರಾಷ್ಟ್ರಗೀತೆ, ರಾಷ್ಟ್ರಧ್ವಜ, ಪ್ರಜಾಪ್ರಭುತ್ವ ತೆಗೆದು ಹಾಕಲು ಸಾಧ್ಯವಿಲ್ಲ” ಎಂದು ಸವಾಲು ಹಾಕಿದರು.
ಗಾಂಧಿಜಿ ಅವರ ದೇವರು ರಾಮನನ್ನು ಸ್ಮರಿಸಲಾಗುತ್ತಿದೆ ಎಂಬ ಬಿಜೆಪಿ ಹೇಳಿಕೆ ಬಗ್ಗೆ ಕೇಳಿದಾಗ, “ರಾಮನನ್ನು ನಾವು ಪೂಜಿಸುತ್ತೇವೆ. ರಾಮಾಯಣದಲ್ಲಿ ನನಗೆ ರಾಮನಿಗಿಂತ ಸೀತೆ ಬಹಳ ಅಚ್ಚುಮೆಚ್ಚು. ರಾಮನಿಗಿಂತ ಸೀತೆ ಹೆಚ್ಚು ಶಕ್ತಿಶಾಲಿ. ಕೆಲವರು ರಾವಣನನ್ನು ಪೂಜಿಸಿದರೆ, ಮತ್ತೆ ಕೆಲವರು ಆಂಜನೇಯನನ್ನು ಪೂಜಿಸುತ್ತಾರೆ. ರಾಮನ ತಂದೆ ದಶರಥನ ದೇವಾಲಯ ಇಲ್ಲ. ಆದರೆ ರಾಮನ ಭಂಟ ಹನುಮಂತನ ದೇವಾಲಯ ಎಲ್ಲೆಡೆ ಇದೆ. ನಾವು ಕಾಂಗ್ರೆಸಿಗರು ಗಾಂಧಿಜಿ ಅವರ ಕುಟುಂಬದವರು. ನಮಗೆ ಸ್ವಾತಂತ್ರ್ಯ ತಂದುಕೊಟ್ಟವರು ಯಾರು? ರಾಷ್ಟ್ರಧ್ವಜ, ರಾಷ್ಟ್ರಗೀತೆ, ಸಂವಿಧಾನ ಕೊಟ್ಟವರು ಯಾರು?” ಎಂದು ಪ್ರಶ್ನಿಸಿದರು.

