ಹಾವೇರಿ(ಹಾನಗಲ್): ಗುಜರಾತ್ ಹಾಗೂ ಮಹಾರಾಷ್ಟ್ರದಂತೆ ರಾಜ್ಯದಲ್ಲಿ ಸಹಕಾರಿ ರಂಗದಲ್ಲಿ ದೊಡ್ಡ ಕ್ರಾಂತಿಯಾಗಬೇಕಾಗಿದೆ. ಅದು ಉತ್ತರ ಕರ್ನಾಟಕದಲ್ಲಿಯೇ ಆಗಲು ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟರು.
ಇಂದು ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಮಾರನಬೀಡ ಗ್ರಾಮದಲ್ಲಿ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿ, ಮೂರ್ತಿ ಅನಾವರಣಗೊಳಿಸಿ ಮಾತನಾಡಿದ ಅವರು, ಕೇಂದ್ರದಲ್ಲಿ ಮೋದಿಯವರು ಸಹಕಾರಿ ಇಲಾಖೆ ಸ್ಥಾಪನೆ ಮಾಡಿದ್ದಾರೆ. ಅಮಿತ್ ಶಾ ಅವರು ಅದರ ಸಚಿವರಿದ್ದಾರೆ. ಪ್ರತಿಯೊಂದು ಗ್ರಾಮದಲ್ಲಿ ಸಹಕಾರ ಸಂಘ ಇರಬೇಕು ಅನ್ನುವ ಉದ್ದೇಶ ಇದೆ. ಸಹಕಾರ ಬಹಳ ದೊಡ್ಡ ಕ್ಷೇತ್ರ ಇದೆ ಮಹಾರಾಷ್ಟ್ರ ಮತ್ತು ಗುಜರಾತ್ ನಲ್ಲಿ ಸಹಕಾರ ಸರ್ಕಾರವನ್ನು ಆಳುತ್ತದೆ. ಇಲ್ಲಿ ಸರ್ಕಾರ ಸಹಕಾರವನ್ನು ಆಳಲು ಹೊರಟಿದ್ದಾರೆ. ಅಲ್ಲಿ ಸರ್ಕಾರವನ್ನು ಆಳಬೇಕೆಂದರೆ ಸಹಕಾರಿಗಳು ಸಿಎಂಗಳು ಆಗುತ್ತಾರೆ. ಅಷ್ಟು ಪ್ರಬಲವಾಗಿದೆ. ಗುಜರಾತ್ ನಲ್ಲಿ ವಾರ್ದಾ ನಗರ ಅಂತ ಇದೆ ಅಲ್ಲಿ ನಾವು ಚಾ ಕುಡಿದಿದ್ದೆ ಆ ಚಹಾ ಅಂಗಡಿಯನ್ನ ಸಹಕಾರಿ ಸಂಘದವರು ನಡೆಸುತ್ತಿದ್ದರು . ಪಾನ್ ಅಂಗಡಿ, ಸಲೂನ್ ಎಲ್ಲವನ್ನೂ ಸಹಕಾರಿ ಸಂಘದಿಂದ ನಡೆಸುತ್ತಾರೆ. ಸಹಕಾರ ರಂಗ ಎಲ್ಲ ರಂಗದಲ್ಲೂ ಬಂದಿದೆ. ಪ್ರತಿ ವರ್ಷ ಸರ್ಕಾರಕ್ಕೆ ಸಾವಿರಾರು ಕೋಟಿ ರೂ. ಸಹಕಾರ ರಂಗದಿಂದ ಸರ್ಕಾರಕ್ಕೆ ಹೋಗುತ್ತದೆ ಎಂದರು.
ಸಮಗ್ರ ಬದಲಾವಣೆ ಅಗತ್ಯ:
ರಾಜ್ಯದಲ್ಲಿ ಸಹಕಾರಿ ರಂಗದಲ್ಲಿ ದೊಡ್ಡ ಕ್ರಾಂತಿಯಾಗಬೇಕಾಗಿದೆ. ಅದು ಉತ್ತರ ಕರ್ನಾಟಕದಲ್ಲಿಯೇ ಆಗಲು ಸಾಧ್ಯ. ಇಲ್ಲಿ ಸಹಕಾರ ಸಂಘಗಳು ಮತ್ತು ಅವುಗಳ ಚಟುವಟಿಕೆಗಳು ತುಂಗಭದ್ರಾ ದಾಟಿದ ನಂತರ ಇಲ್ಲ. ಅಲ್ಲಿ ಸಾಹುಕಾರರಿದ್ದಾರೆ. ಉತ್ತರ ಕರ್ನಾಟಕದಲ್ಲಿ ಸಹಕಾರಿಗಳು, ಬೆವರು ಸುರಿಸಿ ದುಡಿಯುವ ರೈತರು ಇದ್ದಾರೆ. ದಕ್ಷಿಣ ಕರ್ನಾಟಕದಲ್ಲಿ ಭೂಮಿಗೆ ಬಹಳ ಬೆಲೆ ಇದೆ. ಉತ್ತರ ಕರ್ನಾಟಕದಲ್ಲಿ ದುಡಿಮೆಗೆ ಬಹಳ ಬೆಲೆ ಇದೆ. ರೈತನಿಗೆ ಬೆವರಿಗೆ ಬೆಲೆ ಇಲ್ಲ ಅದಕ್ಕಾಗಿ ಇಲ್ಲಿ ಹೋರಾಟಗಳು ನಡೆಯುತ್ತವೆ. ಅಮೂಲಾಗ್ರ ಬದಲಾವಣೆ ಆಗಬೇಕು. ಗ್ರಾಮೀಣ ಹಣಕಾಸು ವ್ಯವಸ್ಥೆ ಸಂಪೂರ್ಣ ಬದಲಾಗಬೇಕು. ಈ ದೇಶದಲ್ಲಿ ಸ್ವಾತಂತ್ರ್ಯ ಬಂದು ಎಪ್ಪತ್ತೆಂಟು ವರ್ಷ ಆಗಿದೆ. ಇಷ್ಟು ವರ್ಷದಲ್ಲಿ ಕೃಷಿಯಲ್ಲಿ ನಾವು ಹಾಕಿದ ಬಂಡವಾಳ ಮತ್ತು ಉದ್ಯೋಗದಲ್ಲಿ ಹಾಕಿರುವ ಬಂಡವಾಳ ನೋಡಿದಾಗ ಅಜಗಜಾಂತರ ಇದೆ. ಭೂಮಿ ಆಕಾಶದಷ್ಟು ಅಂತರ ಇದೆ. ಇಲ್ಲಿ ಎಷ್ಟೇ ಸಹಾಯ ಮಾಡಿದರೂ ರೈತನಿಗೆ ಬೆಳೆ ಸಾಲ ನೀಡುವುದಷ್ಟೇ ಸಹಾಯ ಮಾಡಬೇಕು. ಕೃಷಿಯಲ್ಲಿ ಬಂಡವಾಳ ಹೂಡಿಕೆ ಕಡಿಮೆ ಇದೆ. ಯಾವಾಗ ಕೃಷಿಯಲ್ಲಿ ಬಂಡವಾಳ ಹೂಡಿಕೆ ಹೆಚ್ಚಾಗುತ್ತದೆ ಆಗ ಕೃಷಿ ಉತ್ಪಾದನೆ ಹೆಚ್ಚಾಗುತ್ತದೆ. ಆಗ ಸುಧಾರಿಸಲು ಸಾಧ್ಯವಾಗುತ್ತದೆ. ಹಸಿರು ಕ್ರಾಂತಿಯಿಂದ ಕೃಷಿ ಬೆಳೆದಿದೆ. ಆದರೆ ಕೃಷಿ ಬೆಳೆಸಿದ ರೈತ ಬೆಳವಣಿಗೆ ಆಗದಿರುವ ನೋವು ಕಾಡುತ್ತದೆ ಎಂದರು.
ರೈತ ಯಾವುದೇ ಪಕ್ಷಕ್ಕೆ ಸೇರಿಲ್ಲ ಆದರೆ ಎಲ್ಲ ರಾಜಕೀಯ ಪಕ್ಷಗಳು ರೈತನಿಗೆ ಸೇರಿವೆ. ರೈತನ ಬದುಕು ಕಷ್ಟವಾಗಿದೆ. ಮನೆಯಲ್ಲಿ ಮದುವೆ ಮಾಡಿದರೂ ಸಾಲ ಮಾಡಿ, ಹೊಲ ಒತ್ತೆ ಇಡುವ ಪರಿಸ್ಥಿತಿ ಇದೆ. ಅವನಿಗೆ ಸಾಮಾಜಿಕ ಭದ್ರತೆ, ಆರ್ಥಿಕ ನೆರವು ಸಿಗಬೇಕಿದೆ. ಅದಕ್ಕಾಗಿ ನಾನು ಸಿಎಂ ಆಗಿದ್ದಾಗ ರೈತರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿದ್ಯಾನಿಧಿ ಯೋಜನೆ ಜಾರಿಗೆ ತಂದೆ. 8 ನೇ ತರಗತಿಯಿಂದ ಪಿಜಿ ವರೆಗೆ ವಿದ್ಯಾರ್ಥಿ ವೇತನ ನೀಡುತ್ತಿದ್ದೇವು. ರೈತನ ಮಕ್ಕಳು ವಿದ್ಯಾವಂತರಾಗಿ ಬೇರೆ ಬೇರೆ ಕ್ಷೇತ್ರದಲ್ಲಿ ಕೆಲಸ ಮಾಡಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರ ರಾಜಕಾರಣ ಬಿಟ್ಟು ಒಂದೇ ಮನಸ್ಥಿತಿಯಲ್ಲಿ ಬರಬೇಕು ಆಗ ಮಾತ್ರ ರೈತರ ಉದ್ದಾರ ಸಾಧ್ಯ. ಈ ದೇಶವನ್ನು ಟಾಟಾ ಬಿರ್ಲಾ, ಅದಾನಿ ಅಂಬಾನಿ ಕಟ್ಟುತ್ತಾರೆ ಎನ್ನುವ ಭಾವನೆ ಇದೆ. ಆದರೆ, ದೇಶವನ್ನು ಕಟ್ಟುವವರು ದುಡಿಯುವ ಜನರು. ಉದಾಹರಣೆಗೆ ನಾನು ಸಿಎಂ ಆಗಿ ನೂರು ಕೊಟಿ ಬಿಡುಗಡೆ ಮಾಡಿದರೆ ಏನೂ ವ್ಯತ್ಯಾಸ ಆಗುವುದಿಲ್ಲ. ಆದರೆ, ಆ ದುಡ್ಡನ್ನು ದುಡಿಯುವ ವ್ಯಕ್ತಿ ತನ್ನ ಬೆವರು ಸುರಿಸಿ ಆ ರಸ್ತೆಗೆ ಡಾಂಬರ್ ಹಾಕಿದಾಗ ಬದಲಾವಣೆ ಆಗುತ್ತದೆ. ನಾವು ಸಮಸ್ಯೆಗಳನ್ನು ಚರ್ಚೆ ಮಾಡುತ್ತೇವೆ. ಅವರು ಸಮಸ್ಯೆಗಳ ಜೊತೆ ಜೀವನ ಮಾಡುತ್ತಾರೆ. ಇದನ್ನು ಅರ್ಥ ಮಾಡಿಕೊಂಡು ಮುಂದೆ ಹೋಗಬೇಕಾಗುತ್ತದೆ. ಸಹಕಾರ ಕ್ಷೇತ್ರ ಒಬ್ಬ ವ್ಯಕ್ತಿ ಸಮಾಜ ಮತ್ತು ನಾಡಿನಲ್ಲಿ ಬದಲಾವಣೆ ತರುವ ಕ್ಷೇತ್ರ ನೂರು ವರ್ಷ ಕಳೆದಿರುವ ಈ ಸಂಸ್ಥೆ ಇತರರಿಗೆ ಪ್ರೇರಣೆ ಆಗಿದೆ. ಈ ಸಂಸ್ಥೆಯನ್ನು ಮಾದರಿ ಸಂಸ್ಥೆಯನ್ನಾಗಿ ಮಾಡುವ ವಿಶ್ವಾಸ ಇದೆ ಎಂದು ಹೇಳಿದರು.

