ಮೈಸೂರು, ಮೇ.9: ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಮೈಸೂರಿನ ಕೆಆರ್ ಮೋಹಲದ ಅಗ್ರಹಾರದ ಬಳಿ ಶ್ರೀ ಮಹಾ ಗಣಪತಿ ದೇವಸ್ಥಾನದ ಮೇಲೆ ದೊಡ್ಡ ಮರ ಬಿದ್ದಿದೆ.
ಆದರೆ ಪೂರ್ಣ ಮರ ದೇವಸ್ಥಾನದ ಮೇಲೆ ಬೀಳದೆ ರೆಂಬೆ,ಕೊಂಬೆಗಳು ಬಿದ್ದುದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ.
ಆದರೆ ದೇವಾಲಯದ ಮುಂಭಾಗದಲ್ಲಿ ನಿಲ್ಲಿಸಿದ್ದ ಆಟೋ ಸಂಪೂರ್ಣ ನಜ್ಜುಗೊಜ್ಜಾಗಿದೆ,ಒಂದು ಕಾರಿಗೂ ಹಾನಿಯಾಗಿದೆ.
ಅದೃಷ್ಟವಶಾತ್ ಯಾರಿಗೂ ಯಾವುದೇ ಅಪಾಯವಾಗಿಲ್ಲ.ಆಟೋಚಾಲಕ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.ದೇವಾಲಯದಲ್ಲಿ ಇನ್ನೂ ಅರ್ಚಕರು,ಕೆಲ ಭಕ್ತರು ಇದ್ದರು.ಭಾರೀ ಮರ ಉರುಳಿದ ಕೂಡಲೆ ಬೆಚ್ಚಿಬಿದ್ದಿದ್ದಾರೆ.
ಸಧ್ಯ ಆ ಪರಮೇಶ್ವರ ಯಾರಿಗೂ ತೊಂದರೆ ಮಾಡಿಲ್ಲ ಎನ್ನುತ್ತಾರೆ ದೇವಸ್ಥಾನದ ಹಿರಿಯ ಅರ್ಚಕರಾದ ಯೋಗಾನಂದ ಅವರು.
ನಿನ್ನೆ ರಾತ್ರಿ8.20ಕ್ಕೆ ಮಳೆ ಪ್ರಾರಂಭವಾದಾಗಿನಿಂದ ಇಂದು ಮಧ್ಯಾಹ್ನದ ತನಕ ವಿದ್ಯುತ್ ಇರಲಿಲ್ಲ ಹಾಗಾಗಿ ಕೆಆರ್ ಮಿಹಲ್ಲಾ ನಿವಾಸಿಗಳಿಗೆ ತೊಂದರೆಯಾಯಿತು.
ಭಾರೀ ಮರ ರಸ್ತೆಯನ್ನೂ ಆವರಿಸಿದ್ದರಿಂದ ನಗರ ಸಾರಿಗೆ ಬಸ್ ಗಳು ಸೇರಿದಂತೆ ವಾಹನ ಸಂಚಾರಕ್ಕೆ ಅಡಚಣೆಯಾಯಿತು.ಈ ದೇವಸ್ಥಾನಕ್ಕೆ ಹೊಂದಿಕೊಂಡಂತಿರುವ ಕೆಆರ್ ಠಾಣೆ ಪೊಲೀಸರು ತಕ್ಷಣ ಧಾವಿಸಿ ಬೇರೆ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಇಂದು ಬೆಳಿಗಿನಿಂದಲೇ ಪಾಲಿಕೆ ಸಿಬ್ಬಂದಿ, ಅರಣ್ಯ ಇಲಾಖೆ ಹಾಗೂ ಹೆಸ್ಕಾಂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೃಹತ್ ಗಾತ್ರದ ಮರವನ್ನು ಕತ್ತರಿಸಿ ವಿದ್ಯುತ್ ಸಂಪರ್ಕವನ್ನು ಕಲ್ಪಿಸುವ ಕಾರ್ಯದಲ್ಲಿ ತೊಡಗಿದರು.