ಹೆಚ್.ಡಿ.ಕೋಟೆ: ಅಂತ್ಯ ಸಂಸ್ಕಾರ ಪುಣ್ಯದ ಕೆಲಸ,ಆದರೆ ಹೆಚ್.ಡಿ.ಕೋಟೆ ತಾಲೂಕಿನ ಹಳ್ಳಿಯೊಂದರಲ್ಲಿ ಅದಕ್ಕಾಗಿ ಹರಸಾಹಸ ಪಡಬೇಕಿದೆ.
ಕಾಡುಪ್ರಾಣಿಗಳು ನಡೆಸುವ ದಾಳಿಯಿಂದ ರಕ್ಷಿಸಿಕೊಳ್ಳಲು ನಿರ್ಮಿಸಲಾದ ಆನೆಕಂದಕ,ಸೋಲಾರ್ ತಂತಿ,ರೈಲ್ವೆ ಹಳಿ ಬೇಲಿ ಯಿಂದಾಗಿ ಅಂತ್ಯ ಸಂಸ್ಕಾರಕ್ಕೆ ಹೋಗಲು ಕಸರತ್ತು ನಡೆಸುವಂತಾಗಿದೆ.
ಯಾರಾದರೂ ಮೃತಪಟ್ಟಾಗ ಮೃತದೇಹ ಸಾಗಿಸಲು ಆದಿವಾಸಿಗಳು ಹರಸಾಹಸ ಪಡುವಂತಾಗಿದೆ.
ಮೃತದೇಹವನ್ನ ಹೊತ್ತು ಭಾರಿ ಆಳವಿರುವ ಕಂದಕದಲ್ಲಿ ಇಳಿದು ಸೋಲಾರ್ ತಂತಿ ಅಳವಡಿಸಿರುವ ರೈಲ್ವೆ ಹಳಿ ಬೇಲಿಯನ್ನ ದಾಟಿ ಪಡಿಪಾಟಲು ಅನುಭವಿಸುತ್ತಿದ್ದಾರೆ.
ಇದು ಯಾವುದೊ ದೂರದ ಕಾಡು ಪ್ರದೇಶದ ಕಥೆಯಲ್ಲ,ಮುಖ್ಯ ಮಂತ್ರಿಗಳ ತವರು ಜಿಲ್ಲೆಯಲ್ಲೇ ಈ ವ್ಯಥೆ.ಆದರೂ ಇದುವರೆಗೂ ಸ್ಥಳೀಯ ಜನಪ್ರತಿನಿಧಿಗಳು ಇತ್ತ ಗಮನ ಹರಿಸದೆ ಇರುವುದು ದುರ್ದೈವದ ಸಂಗತಿ.
ಹೆಚ್.ಡಿ.ಕೋಟೆ ತಾಲೂಕು ಹಿರೆಹಳ್ಳಿ ಆದಿವಾಸಿಗಳ ಮನೆಯಲ್ಲಿ ಯಾರಾದರೂ ಮೃತಪಟ್ಟರೆ ಹೀಗೆ ಸಾಹಸ ಮಾಡಿಯೇ ಅಂತ್ಯ ಸಂಸ್ಕಾರ ಮಾಡಬೇಕಾಗುತ್ತದೆ.
ಆದಿವಾಸಿಗಳ ಸಂಪ್ರದಾಯದಂತೆ ಅರಣ್ಯ ಪ್ರದೇಶದಲ್ಲೇ ಶವಸಂಸ್ಕಾರ ಮಾಡಬೇಕಿದೆ.ಆನೆಕಂದಕ,ಸೋಲಾರ್ ಹಾಗೂ ರೈಲ್ವೆ ಹಳಿ ಬೇಲಿಯಿಂದಾಗಿ ಮೃತದೇಹವನ್ನ ಅರಣ್ಯ ಪ್ರದೇಶಕ್ಕೆ ಕೊಂಡೊಯ್ಯಲು ಸಾಧ್ಯವಾಗದೆ ತೀವ್ರ ತೊಂದರೆಗೆ ಒಳಗಾಗುತ್ತಿದ್ದಾರೆ.
ರೈಲ್ವೆ ಬೇಲಿಯ ನಡುವೆ ಒಂದು ಗೇಟ್ ನಿರ್ಮಿಸಿ ಅನುಕೂಲ ಮಾಡಿಕೊಡಬೇಕೆಂದು ಹಿರೆಹಳ್ಳಿ ಆದಿವಾಸಿಗಳು ಒತ್ತಾಯಿಸಿದ್ದಾರೆ.
ಒಂದು ವೇಳೆ ಗೇಟ್ ನಿರ್ಮಿಸದೆ ಇದ್ದರೆ ಮುಂದಿನ ದಿನಗಳಲ್ಲಿ ನಮ್ಮ ಗುಡಿಸಲುಗಳ ಮಧ್ಯಯೇ ಅಂತ್ಯ ಸಂಸ್ಕಾರ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.