Thu. Dec 26th, 2024

ಸರಕಾರದ ಸಂಭ್ರಮ;ರೈತರ ಬರ ಪರಿಹಾರದ ಹಣ ಬ್ಯಾಂಕ್ ಸಾಲಕ್ಕೆ ಜಮೆ:ಹೆಚ್ ಡಿ ಕೆ ಕಿಡಿ

Share this with Friends

ಬೆಂಗಳೂರು,ಮೇ.20: ರಾಜ್ಯ ಸರ್ಕಾರ ವರ್ಷಾಚರಣೆಯಲ್ಲಿದೆ ಆದರೆ, ಕೇಂದ್ರ ಸರ್ಕಾರ ನೀಡಿದ ಬೆಳೆ ಪರಿಹಾರ ಹಣ ಸಾಲಕ್ಕೆ ಜಮೆ ಆಗುತ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ

ಸರ್ಕಾರ ಎಲ್ಲಾ ಸಾಧನೆಗಳನ್ನು ಹೇಳಿಕೊಳ್ಳುತ್ತಿದೆ ಆದರೆ, ಪೆನ್ ಡ್ರೈವ್ ಸಾಧನೆ ಮಾತ್ರ ಹೇಳಿಕೊಳ್ಳುತ್ತಿಲ್ಲ, ವಿಶ್ವದಾದ್ಯಂತ ಸಂಚಲನ ಮೂಡಿಸಿದ ವಿಷಯವನ್ನು ಇವರು ಹೇಳೇ ಇಲ್ಲ ಎಂದು ವ್ಯಂಗ್ಯ ವಾಡಿದರು.

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಹೆಚ್ ಡಿಕೆ, ರೈತರು ಬರದಿಂದ ಕಂಗೆಟ್ಟು ಸಂಕಷ್ಟದಲ್ಲಿದ್ದಾರೆ, ರೈತರಿಗೆ ಈ ಸರ್ಕಾರದ ಕೊಡುಗೆ ಏನೂ ಇಲ್ಲ, ಬರ ಪರಿಹಾರ ಹಣವನ್ನು ಸಾಲಕ್ಕೆ ವಜಾ ಮಾಡಿದ್ದಾರೆ, ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ನೀಡಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಕಳೆದ ಒಂದು ವರ್ಷದಲ್ಲಿ ಎಷ್ಟು ಮಂತ್ರಿಗಳು ಜಿಲ್ಲೆಗಳಲ್ಲಿ ಸಭೆ ಮಾಡಿದ್ದಾರೆ. ಸಮಸ್ಯೆಗಳ ಬಗ್ಗೆ ಏನು ಸೂಚನೆಗಳನ್ನು ಕೊಟ್ಟಿದ್ದಾರೆ. ಜನರ ಕಷ್ಟಗಳನ್ನು ಬಗೆಹರಿಸಿದ್ದಾರೆಯೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಮುಖ್ಯಮಂತ್ರಿಗಳು ಸಭೆ ನಡೆಸಿ ಅಧಿಕಾರಿಗಳ ಮೇಲೆ ವಾಗ್ದಾಳಿ ನಡೆಸಿದ್ದರು. ಆದರೆ, ಜನರ ಕೆಲಸಗಳು ಏನಾಗಿವೆ ಅಭಿವೃದ್ಧಿ ಕೆಲಸಗಳು ಎಲ್ಲಾದರೂ ಆಗಿವೆಯೇ, ಕೇವಲ ಗ್ಯಾರಂಟಿಗಳ ಹೆಸರು ಹೇಳಿಕೊಂಡು ಅಭಿವೃದ್ಧಿಯನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದ ನೀರಾವರಿ ಯೋಜನೆಗಳ ಪರಿಸ್ಥಿತಿ ಏನಾಗಿದೆ ರಸ್ತೆಯ ಪರಿಸ್ಥಿತಿ ಹೇಗಾಗಿದೆ ಕಳೆದ ಒಂದು ವರ್ಷದಿಂದ ಬ್ರ್ಯಾಂಡ್ ಬೆಂಗಳೂರು ಏನಾಯ್ತು, ಮಳೆ ಬಂದು ಬೆಂಗಳೂರಿನ ಪರಿಸ್ಥಿತಿ ಏನಾಗಿದೆ ಎಂಬುದನ್ನು ಕಣ್ಣಾರೆ ನೋಡುತ್ತಿದ್ದೇವೆ. ಎರಡು ದಿನ ಸುರಿದ ಮಳೆಗೆ ಬೆಂಗಳೂರು ಜನರು ನರಕ ಕಂಡಿದ್ದಾರೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.

ಸರ್ಕಾರ ಹೇಗೆ ಕೆಲಸ ಮಾಡುತ್ತಿದೆ ಎನ್ನುವುದಕ್ಕೆ ಇಲಾಖೆಗಳ ಕೆಲಸ ನೋಡಿದರೆ ಅರ್ಥ ಆಗುತ್ತದೆ. ಎಂಟು ಪ್ರಮುಖ ಇಲಾಖೆಗಳಲ್ಲಿ 35,471 ಕಡತಗಳು ವಿಲೇವಾರಿ ಆಗಿಲ್ಲ ಎಂಬ ವರದಿಯನ್ನು ಓದಿದೆ,ಇದೇನಾ ಸರ್ಕಾರದ ಸಾಧನೆ ಎಂದು ಕಾರವಾಗಿ ಪ್ರಶ್ನಿಸಿದರು.

ಉಪ ಮುಖ್ಯಮಂತ್ರಿ ಅವರು ನಗರ ಪ್ರದಕ್ಷಿಣೆ ಮಾಡ್ತಿದ್ದಾರೆ. ಕಳೆದ ಬಾರಿಯೂ ಪ್ರದಕ್ಷಿಣೆ ಮಾಡಿದಿರಿ. ಏನು ಪ್ರಯೋಜನ ಆಯಿತು. ಬೆಂಗಳೂರು ನಗರಕ್ಕೆ ಏನಾದರೂ ಉಪಯೋಗ ಆಯಿತೆ ಎಷ್ಟು ಸಮಸ್ಯೆ ಪರಿಹಾರ ಆಗಿದೆ ಎಂದು ಮಾಹಿತಿ ಕೊಡಿ ಎಂದು ಹೆಚ್‌ ಡಿ ಕೆ ಆಗ್ರಹಿಸಿದರು.

ಮಾಜಿ ಸಚಿವರಾದ ಬಂಡೆಪ್ಪ ಕಾಶೆಂಪೂರ, ಬೆಂಗಳೂರು ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ಉಪಸ್ಥಿರಿದ್ದರು.


Share this with Friends

Related Post