ನಂಜನಗೂಡು,ಜು.16: ದಕ್ಷಿಣಕಾಶಿ ನಂಜನಗೂಡಿನ ಕಪಿಲಾ ನದಿಯಲ್ಲಿ ಶ್ರೀ ನಂಜುಂಡೇಶ್ವರ ಸ್ವಾಮಿಯ ತೆಪ್ಪೋತ್ಸವ ವಿಜೃಂಭಣೆಯಿಂದ ನೆರವೇರಿತು.
ನಂಜುಂಡೇಶ್ವರ ಸ್ವಾಮಿ ದೇವಾಲಯದಲ್ಲಿ ಗಿರಿಜಾ ಕಲ್ಯಾಣ ಮಹೋತ್ಸವ ನಡೆಯುತ್ತಿರುವ ಹಿನ್ನಲೆಯಲ್ಲಿ
ಕಪಿಲಾ ನದಿ ತೀರದ ಸ್ನಾನಘಟ್ಟದಲ್ಲಿ ಶ್ರೀ ನಂಜುಂಡೇಶ್ವರ ಸ್ವಾಮಿಯ ತೆಪ್ಪೋತ್ಸವ ನಡೆಯಿತು.
ನಿನ್ನೆ ರಾತ್ರಿ ದೇವಾಲಯದಿಂದ ಕಪಿಲಾ ಸ್ನಾನಘಟ್ಟದವರೆಗೆ ಮಂಗಳವಾದ್ಯದೊಂದಿಗೆ ಶ್ರೀ ನಂಜುಂಡೇಶ್ವರ ಸ್ವಾಮಿಯ ಉತ್ಸವಮೂರ್ತಿನ್ನು ಮೆರವಣಿಗೆ ಮಾಡಲಾಯಿತು.
ಪುಷ್ಪಾಲಂಕಾರ ಹಾಗೂ ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿದ್ದ ತೇಲುವ ತೆಪ್ಪದಲ್ಲಿ ಉತ್ಸವಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು.
ದೇಗುಲದ ಆಗಮಿಕ ಜೆ.ನಾಗಚಂದ್ರ ದೀಕ್ಷಿತ್ ನೇತೃತ್ವದಲ್ಲಿ ಪೂಜೆ ಸಲ್ಲಿಸಿ ತೆಪ್ಪೋತ್ಸವಕ್ಕೆ ಚಾಲನೆ ನೀಡಲಾಯಿತು.
ಕಪಿಲಾ ಸ್ನಾನಘಟ್ಟದ ಆವರಣದಲ್ಲಿ ಪ್ರದಕ್ಷಿಣೆ ಹಾಕಿದ ಬಳಿಕ ತೆಪ್ಪೋತ್ಸವ ಸ್ವಸ್ಥಾನಕ್ಕೆ ಮರಳಿತು.ತುಂತುರು ಮಳೆಯ ನಡುವೆಯೂ ಸಾವಿರಾರು ಭಕ್ತರು ತೆಪ್ಪೋತ್ಸವ ಕಣ್ ತುಂಬಿಕೊಂಡರು.
ಗಿರಿಜಾ ಕಲ್ಯಾಣ ಮಹೋತ್ಸವ ಮಂಗಳವಾರ ರಾತ್ರಿ ಶಯನೋತ್ಸವದೊಂದಿಗೆ ಸಂಪರ್ಣಗೊಳ್ಳಲಿದೆ.