ಬೆಂಗಳೂರು: ವ್ಯಕ್ತಿಯೊಬ್ಬ ಜನರಿಂದ ಹಣ ಸಂಗ್ರಹಿಸಿ ಕೋಗಿಲು ಬಡಾವಣೆ ತ್ಯಾಜ್ಯ ವಿಲೇವಾರಿಗೆ ಮೀಸಲಿರುವ ಸರ್ಕಾರಿ ಜಾಗದಲ್ಲಿ ಶೆಡ್ ಹಾಕಿಕೊಳ್ಳಲು ಹೇಳಿದ್ದಾನೆ ಎನ್ನುವ ಮಾಹಿತಿ ಸಿಕ್ಕಿದೆ,ಕಾನೂನು ಎಲ್ಲರಿಗೂ ಒಂದೇ. ಸಿಎಂ ನಾಳೆ ಈ ವಿಚಾರವಾಗಿ ಸಭೆ ಕರೆದಿದ್ದು ಅಲ್ಲಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಗಿಲು ಅಕ್ರಮ ಮನೆ ತೆರವು ಸಂಬಂಧ ವೇಣುಗೋಪಾಲ್ ಅವರ ಟ್ವೀಟ್ ವಿಚಾರವಾಗಿ ಬಿಜೆಪಿ ಟೀಕೆ ಮಾಡಿದೆ ಆದರೆ “ವೇಣುಗೋಪಾಲ್ ಅವರು ನಮ್ಮ ಆಡಳಿತದಲ್ಲಿ ಎಂದಿಗೂ ಹಸ್ತಕ್ಷೇಪ ಮಾಡಿಲ್ಲ. ಅವರು ನಮ್ಮ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾಗಿದ್ದು, ನಮಗೆ ಸಲಹೆ ನೀಡಲು ಅವರಿಗೆ ಎಲ್ಲಾ ಅಧಿಕಾರ ಇದೆ. ಬಿಜೆಪಿ ರಾಷ್ಟ್ರೀಯ ನಾಯಕರು ಬಂದು ರಾಜ್ಯ ನಾಯಕರಿಗೆ ಸಲಹೆ ನೀಡುವುದಿಲ್ಲವೇ? ಎಂದು ಪ್ರಶ್ನಿಸಿದರು.
ನಮ್ಮದು ರಾಷ್ಟ್ರೀಯ ಪಕ್ಷ, ನಮಗೆ ನಮ್ಮದೇ ಜವಾಬ್ದಾರಿ ಇದೆ. ನಾವು ಜಾತಿ, ಧರ್ಮದ ಮೇಲೆ ಹೋಗುವುದಿಲ್ಲ. ಅಲ್ಲಿ ಅಕ್ರಮವಾಗಿ ಶೆಡ್ ಹಾಕಿಕೊಂಡವರಲ್ಲಿ ಯಾವ ಸಮುದಾಯದವರು ಎಷ್ಟಿದ್ದರು ಎಂಬ ಮಾಹಿತಿ ತರಿಸಿದ್ದೇನೆ. ಕಾನೂನು ಎಲ್ಲರಿಗೂ ಒಂದೇ. ಸಿಎಂ ನಾಳೆ ಈ ವಿಚಾರವಾಗಿ ಸಭೆ ಕರೆದಿದ್ದಾರೆ. ಈ ಪ್ರಕರಣದ ಬಗ್ಗೆ ನಾನು ಪರಿಶೀಲನೆ ಮಾಡಿದ್ದು, ವ್ಯಕ್ತಿಯೊಬ್ಬ ಜನರಿಂದ ಹಣ ಸಂಗ್ರಹಿಸಿ ಸರ್ಕಾರಿ ಜಾಗದಲ್ಲಿ ಶೆಡ್ ಹಾಕಿಕೊಳ್ಳಲು ಹೇಳಿದ್ದಾನೆ” ಎಂದರು.
ವೇಣುಗೋಪಾಲ್ ಅವರು ರಾಜ್ಯದ ವಿಚಾರದಲ್ಲಿ ಹಸ್ತಕ್ಷೇಪ ಮಾಡಬಾರದು ಎಂಬ ಬಿಜೆಪಿ ನಾಯಕ ಅಶ್ವಥ್ ನಾರಾಯಣ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಅವರ ಪಕ್ಷದಲ್ಲಿ ಸ್ಪರ್ಧೆ ಹೆಚ್ಚಾಗಿದೆ. ಹೀಗಾಗಿ ಸುದ್ದಿಯಲ್ಲಿರಲು ಕೆಲವರು ಹೇಳಿಕೆ ನೀಡುತ್ತಾರೆ. ನೀವುಗಳು ಅವರಿಗೆ ಗೌರವ ಕೊಡುತ್ತೀರಲ್ಲಾ ಅದಕ್ಕೆ ಅವರು ನಿತ್ಯ ಒಂದೊಂದು ಹೇಳಿಕೆ ನೀಡುತ್ತಾರೆ. ಅವರ ಹೇಳಿಕೆಗಳಿಗೆ ನಾವು ಸೊಪ್ಪು ಹಾಕುವುದಿಲ್ಲ” ಎಂದರು.

