ಮೈಸೂರು, ಜೂ.24: ಪಾಳು ಮನೆಯಲ್ಲಿ ಅವಿತುಕೊಂಡಿದ್ದ ಚಿರತೆಯನ್ನ ಸೆರೆಹಿಡಿಯುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ ಇದನ್ನ ನೋಡಲು ಜನ ಮುಗಿಬಿದ್ದರು.
ಆದರೆ ಸೆರೆಯಾದ ಚಿರತೆ ಜೊತೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಯುವಕ ಚಿರತೆಯ ದಾಳಿಗೊಳಗಾಗಿದ್ದಾನೆ.
ಇದರಿಂದ ಯುವಕ ತೀವ್ರ ಗಾಯಗೊಂಡಿದ್ದು, ಆತನನ್ನ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.
ನಂಜನಗೂಡು ತಾಲೂಕು ಯಾಲಹಳ್ಳಿ ಗ್ರಾಮದಲ್ಲಿ ಚಿರತೆ ಮಹದೇವಪ್ಪ ಎಂಬುವರಿಗೆ ಸೇರಿದ ಪಾಳು ಬಿದ್ದ ಮನೆಯಲ್ಲಿ ಅಡಗಿ ಕುಳಿತಿತ್ತು.
ಚಿರತೆಯ ಕೂಗಾಟ ಕೇಳಿ ಗ್ರಾಮಸ್ಥರು ಧಾವಿಸಿ,ಚಿರತೆ ಹೊರಬರಲು ಸಾಧ್ಯವಾಗದಂತೆ ಭದ್ರ ಮಾಡಿ, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಆರ್‌ಎಫ್ಒ ನಿತಿನ್ ಕುಮಾರ್ ಮತ್ತು ಜನಾರ್ಧನ್ ಅವರ ತಂಡ ಸ್ಥಳಕ್ಕೆ ಧಾವಿಸಿ, ಸುಮಾರು ಎರಡು ಗಂಟೆಗಳ ಕಾಲ ಶ್ರಮವಹಿಸಿ ಚಿರತೆ ಸೆರೆಗೆ ಅರವಳಿಕೆ ಚುಚ್ಚುಮದ್ದು ನೀಡಿದ್ದರು.
ಕಡೆಗೆ ಚಿರತೆ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.ಈ ವೇಳೆ ಸೆರೆಯಾದ ಚಿರತೆ ಬಳಿ ಬಂದ ಸ್ಥಳೀಯ ಯುವಕ ಜಯಶಂಕರ್ ಸೆಲ್ಫೀ ಚಿರತೆಯೊಂದಿಗೆ ಸೆಲ್ಫೀ ತೆಗೆದುಕೊಳ್ಳಲು ಮುಂದಾಗಿದ್ದಾನೆ.
ಆಗ ಏಕಾಏಕಿ ಚಿರತೆ ಯುವಕನ ಮೇಲೆ ದಾಳಿ ಮಾಡಿಬಿಟ್ಟಿದೆ. ಗಾಯಗೊಂಡ ಜಯಶಂಕರ್ ಈಗ ಮೈಸೂರಿನ ಕೆ ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ,ಇತ್ತ ಚಿರತೆಗೆ ನಂಜನಗೂಡಿನ ನರ್ಸರಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೈಸೂರಿನ ಡಿಸಿಎಫ್ ಬಸವರಾಜ್ ಅವರ ಆದೇಶದ ಮೇರೆಗೆ ಚೇತರಿಸಿಕೊಂಡ ಬಳಿಕ ಮತ್ತೆ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಚರಣೆಯಲ್ಲಿ ಆರ್‌ಎಫ್‌ಒ ನಿತಿನ್ ಕುಮಾರ್, ಜನಾರ್ಧನ್, ಚೇತನ್ ಕುಮಾರ್ ಸೇರಿದಂತೆ ಸಿಬ್ಬಂದಿ ಭಾಗವಹಿಸಿದ್ದರು.