Sat. Mar 14th, 2026

ಪ್ರಕೃತಿ ಪ್ರೇಮಿಗಳ ಹೊಸ ತಾಣ: ಚಿಂಚೋಳಿಯ ಪೋಲಕಪಳ್ಳಿಯಲ್ಲಿ ಅರಳಿದೆ ‘ಹಸಿರು ಮಲೆನಾಡು’!

Share this with Friends

ಕಲಬುರಗಿ: ಬಿಸಿಲ ನಾಡು ಕಲಬುರಗಿಯ ಮಡಿಲಲ್ಲಿ ಈಗ ಹಸಿರು ಮಲೆನಾಡಿನ ಅನುಭವ ನೀಡುವ ಅದ್ಭುತ ಲೋಕವೊಂದು ತೆರೆದುಕೊಂಡಿದೆ. ಚಿಂಚೋಳಿ ತಾಲೂಕಿನ ಪೋಲಕಪಳ್ಳಿ ಗ್ರಾಮದ 20 ಎಕರೆ ವಿಸ್ತಾರವಾದ ಪ್ರದೇಶದಲ್ಲಿ ₹1.5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ‘ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ’ ಇಂದು ಲೋಕಾರ್ಪಣೆಗೊಂಡಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಕಣ್ಮನ ಸೆಳೆಯುವ ಕಲ್ಲಿನ ಕಲಾಕೃತಿಗಳು:

ಈ ಉದ್ಯಾನವನ ಕೇವಲ ಗಿಡಗಂಟೆಗಳ ತಾಣವಲ್ಲ; ಇದೊಂದು ಶಿಲ್ಪಕಲೆಯ ಆಗರ. ಬೆಂಗಳೂರಿನ ಸಾರದಹಳ್ಳಿಯ ಕಲ್ಲುಗಳಿಂದ ನಿರ್ಮಿಸಲಾದ ಭವ್ಯ ಮಂಟಪಗಳು ಮತ್ತು ಗೋಪುರಗಳು ಇಲ್ಲಿನ ವಿಶೇಷ. ಉದ್ಯಾನವನದ ಸ್ವಾಗತ ಕಮಾನು ದಾಟುತ್ತಿದ್ದಂತೆ ಕಲ್ಲಿನಲ್ಲಿ ಕೆತ್ತಲಾದ ಚಿರತೆ, ಜಿಂಕೆ ಸೇರಿದಂತೆ ವಿವಿಧ ವನ್ಯಜೀವಿಗಳ ನೈಜ ಪ್ರತಿಮೆಗಳು ಪ್ರವಾಸಿಗರನ್ನು ಸ್ವಾಗತಿಸುತ್ತವೆ.

ಬಿಸಿಲ ನಾಡಿನಲ್ಲಿ ‘ಮಿಯಾವಾಕಿ’ ಮ್ಯಾಜಿಕ್:

ಗುಂಡಗುರ್ತಿಯ ಲುಂಬಿನಿ ಉದ್ಯಾನವನದ ಯಶಸ್ಸಿನ ನಂತರ, ಪೋಲಕಪಳ್ಳಿಯಲ್ಲೂ ದಟ್ಟ ಕಾಡನ್ನು ಬೆಳೆಸುವ ‘ಮಿಯಾವಾಕಿ’ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಇದು ಬಿಸಿಲ ಬೇಗೆಯಲ್ಲೂ ತಂಪು ನೀಡುವ ಹಸಿರು ಹೊದಿಕೆಯಾಗಲಿದೆ. ಇದರೊಂದಿಗೆ 50ಕ್ಕೂ ಹೆಚ್ಚು ಅಪರೂಪದ ಸ್ಥಳೀಯ ಗಿಡಮೂಲಿಕೆಗಳನ್ನು ಅವುಗಳ ಹೆಸರು ಮತ್ತು ಆರೋಗ್ಯಕಾರಿ ಪ್ರಯೋಜನಗಳ ಮಾಹಿತಿ ಫಲಕಗಳೊಂದಿಗೆ ನೆಡಲಾಗಿದೆ. ಇದು ವಿದ್ಯಾರ್ಥಿಗಳಿಗೆ ಮತ್ತು ಸಸ್ಯಶಾಸ್ತ್ರ ಆಸಕ್ತರಿಗೆ ಜ್ಞಾನದ ಭಂಡಾರವಾಗಲಿದೆ.

ಸಚಿವ ಪ್ರಿಯಾಂಕ್ ಖರ್ಗೆ ಅವರ ಆಶಯ:

ಈ ವಿಶೇಷ ಯೋಜನೆಯ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, “ಪ್ರವಾಸಿಗರಿಗಾಗಿ ಎಲ್ಲ ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಈ ಸುಂದರ ತಾಣವನ್ನು ಕಣ್ತುಂಬಿಕೊಳ್ಳಲು ಬರುವ ಪ್ರವಾಸಿಗರು ಸ್ವಚ್ಛತೆಯನ್ನು ಕಾಪಾಡಬೇಕು ಮತ್ತು ಗಿಡಗಳನ್ನು ಸ್ಪರ್ಶಿಸದೆ ಪ್ರಕೃತಿಯನ್ನು ಗೌರವಿಸಬೇಕು” ಎಂದು ಮನವಿ ಮಾಡಿದ್ದಾರೆ.

ಪ್ರವಾಸೋದ್ಯಮಕ್ಕೆ ಹೊಸ ಕಳೆ:

ಚಿಂಚೋಳಿ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಈ ವೃಕ್ಷೋದ್ಯಾನವು ಜಿಲ್ಲೆಯ ಪ್ರಮುಖ ಆಕರ್ಷಣೆಯಾಗಿ ಹೊರಹೊಮ್ಮಲಿದೆ. ವಾರಾಂತ್ಯದ ರಜೆಯಲ್ಲಿ ಕುಟುಂಬದೊಂದಿಗೆ ಸಮಯ ಕಳೆಯಲು ಇದು ಅತ್ಯುತ್ತಮ ತಾಣವಾಗಿದೆ.


Share this with Friends

Related Post