Sun. Mar 8th, 2026

ಕರ್ನಾಟಕಕ್ಕೆ ಮಹಿಳಾ ಮುಖ್ಯಮಂತ್ರಿ:ಹೆಚ್.ಡಿ. ಕುಮಾರಸ್ವಾಮಿ

Share this with Friends

ಬೆಂಗಳೂರು: ಶೀಘ್ರದಲ್ಲೇ ಜಾರಿಗೆ ಬರಲಿರುವ ಮಹಿಳಾ ಮೀಸಲಾತಿಯು ಕರ್ನಾಟಕದಲ್ಲಿ ಐತಿಹಾಸಿಕ ಬದಲಾವಣೆಗೆ ನಾಂದಿ ಹಾಡಲಿದೆ.”ಎಲ್ಲಾ ಪಕ್ಷಗಳ ಮಹಿಳಾ ಪ್ರತಿನಿಧಿಗಳು ಮನಸ್ಸು ಮಾಡಿದರೆ, ರಾಜ್ಯದಲ್ಲಿ ಮಹಿಳೆಯೇ ಮುಖ್ಯಮಂತ್ರಿಯಾಗುವ ಕಾಲ ದೂರವಿಲ್ಲ” ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದರು.

ನಗರದ ಡಾ. ಬಾಬು ಜಗಜೀವನ ರಾಮ್ ಭವನದಲ್ಲಿ ಜೆಡಿಎಸ್ ಮಹಿಳಾ ಘಟಕ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ನೀಡಲಾಗಿರುವ ಶೇ. 33ರಷ್ಟು ಮೀಸಲಾತಿಯು ಮುಂಬರುವ ದಿನಗಳಲ್ಲಿ ಭಾರತದ ಸಂಸದೀಯ ವ್ಯವಸ್ಥೆಯ ಗೌರವವನ್ನು ಹೆಚ್ಚಿಸಲಿದೆ.ತಮಗಿರುವ ಮಾಹಿತಿ ಪ್ರಕಾರ, 2032-33ರ ಅವಧಿಯಲ್ಲಿ ಮಹಿಳಾ ಮೀಸಲಾತಿಯು ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಲಿದೆ ಎಂದು ಅವರು ಭವಿಷ್ಯ ನುಡಿದರು.

ಮಹಿಳಾ ಮುಖ್ಯಮಂತ್ರಿ ಸಾಧ್ಯ:

“ಮಹಿಳಾ ಮೀಸಲಾತಿ ಜಾರಿಯಾದರೆ ಕರ್ನಾಟಕ ವಿಧಾನಸಭೆಯಲ್ಲಿ 75 ಮಹಿಳಾ ಶಾಸಕಿಯರು ಇರಲಿದ್ದಾರೆ. ಎಲ್ಲಾ ಪಕ್ಷಗಳ ಮಹಿಳಾ ಪ್ರತಿನಿಧಿಗಳು ಒಗ್ಗೂಡಿದರೆ ರಾಜ್ಯದಲ್ಲಿ ಮಹಿಳೆಯೇ ಮುಖ್ಯಮಂತ್ರಿಯಾಗುವ ಅವಕಾಶ ಸೃಷ್ಟಿಯಾಗಲಿದೆ. ಇಂತಹ ದೊಡ್ಡ ಬದಲಾವಣೆಗೆ ಮೀಸಲಾತಿ ಮುನ್ನುಡಿ ಬರೆಯಲಿದೆ,” ಎಂದು ಅವರು ಆಶಯ ವ್ಯಕ್ತಪಡಿಸಿದರು.

ದೇವೇಗೌಡರ ಕನಸು – ಮೋದಿಯವರ ಸಂಕಲ್ಪ:

ಪ್ರಧಾನಿ ನರೇಂದ್ರ ಮೋದಿ ಅವರ ದೃಢ ಸಂಕಲ್ಪದಿಂದ ಇಂದು ಮಹಿಳಾ ಮೀಸಲಾತಿ ಹಾದಿ ಸುಗಮವಾಗಿದೆ. ಆದರೆ ಇದರ ಮೊದಲ ಕನಸು ಕಂಡವರು ಹೆಚ್.ಡಿ. ದೇವೇಗೌಡರು. ಅವರು ಪ್ರಧಾನಿಯಾಗಿದ್ದ ಕಾಲದಲ್ಲೇ 33% ಮೀಸಲಾತಿ ವಿಧೇಯಕ ಮಂಡಿಸಿದ್ದರು. ಅಂದು ಕೆಲವು ಪಕ್ಷಗಳ ವಿರೋಧದಿಂದ ಅದು ಸಾಧ್ಯವಾಗಲಿಲ್ಲ. ಆದರೆ ಇಂದು ಎನ್‌ಡಿಎ ಮೈತ್ರಿಕೂಟದ ಮೂಲಕ ದೇವೇಗೌಡರ ಕನಸನ್ನು ಮೋದಿ ನನಸು ಮಾಡಿದ್ದಾರೆ ಎಂದು ಸ್ಮರಿಸಿದರು. ರಾಜ್ಯದಲ್ಲಿ ಶೇ. 70ರಷ್ಟು ಮಹಿಳಾ ಶಿಕ್ಷಕರ ನೇಮಕ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಶೇ. 50ರಷ್ಟು ಮೀಸಲಾತಿ ನೀಡಿದ ಕೀರ್ತಿ ದೇವೇಗೌಡರಿಗೆ ಸಲ್ಲುತ್ತದೆ ಎಂದರು.

ಅಧಿಕಾರ ಹಂಚಿಕೆಯಾಗದಿರಲಿ:

ಇದೇ ಸಂದರ್ಭದಲ್ಲಿ ಮಹಿಳಾ ಕಾರ್ಯಕರ್ತೆಯರಿಗೆ ಕಿವಿಮಾತು ಹೇಳಿದ ಸಚಿವರು, “ಮಹಿಳೆಯರಿಗೆ ಸಿಗುವ ಅಧಿಕಾರವನ್ನು ಮನೆಯವರು ಚಲಾಯಿಸುವಂತಾಗಬಾರದು. ನಿಮ್ಮ ಹಕ್ಕನ್ನು ನೀವೇ ಚಲಾಯಿಸಿ ಶಕ್ತಿಶಾಲಿಗಳಾಗಬೇಕು” ಎಂದರು. ಹಿಂದೆ ಮಹಿಳೆಯರು ಕೇವಲ ಅಡುಗೆ ಮನೆಗೆ ಸೀಮಿತ ಎಂಬ ಭಾವನೆಯಿತ್ತು. ಆದರೆ ಇಂದು ಬಾಹ್ಯಾಕಾಶ, ವಿಜ್ಞಾನ, ಸೇನೆ ಸೇರಿದಂತೆ ಸಕಲ ಕ್ಷೇತ್ರಗಳಲ್ಲೂ ಮಹಿಳೆಯರು ಸಾಧನೆ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದು ಹರ್ಷ ವ್ಯಕ್ತಪಡಿಸಿದರು

ಜಿಬಿಎ ಚುನಾವಣೆ: 180 ಮಹಿಳಾ ಅಭ್ಯರ್ಥಿಗಳ ತಯಾರಿ ಇಂದೇ ಆರಂಭಿಸಿ:

“ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಜಿಬಿಎ) ಚುನಾವಣೆಯಲ್ಲಿ ಶೇ. 50ರಷ್ಟು ಮೀಸಲಾತಿ ಇರುವುದರಿಂದ 170 ರಿಂದ 180 ಮಹಿಳೆಯರು ಸ್ಪರ್ಧಿಸುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಜೆಡಿಎಸ್ ಮಹಿಳಾ ಕಾರ್ಯಕರ್ತೆಯರು ಈಗಿನಿಂದಲೇ ಸನ್ನದ್ಧರಾಗಬೇಕು,” ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕರೆ ನೀಡಿದರು.

ಜಿಬಿಎ ಚುನಾವಣೆ ಯಾವ ಕ್ಷಣದಲ್ಲಾದರೂ ಘೋಷಣೆಯಾಗಬಹುದು. ಈ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಮಹಿಳೆಯರಿಗೆ ರಾಜಕೀಯ ತಿಳಿವಳಿಕೆ ಮೂಡಿಸುವ ಮತ್ತು ಅವರಲ್ಲಿ ಶಕ್ತಿ ತುಂಬುವ ಕೆಲಸ ಆಗಬೇಕಿದೆ. ಜೆಡಿಎಸ್‌ನಿಂದ ಅತಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಸ್ಪರ್ಧಿಸಿ, ಜಯಭೇರಿ ಬಾರಿಸಬೇಕು ಎಂಬುದು ನಮ್ಮ ಆಶಯ ಎಂದು ತಿಳಿಸಿದರು.

ಬೆಂಗಳೂರಿನ ಇಂದಿನ ದುಸ್ಥಿತಿಯ ಬಗ್ಗೆ ಮಾತನಾಡಿದ ಸಚಿವರು, “ನಗರದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ತಾಂಡವವಾಡುತ್ತಿದೆ. ಇಂತಹ ಅವ್ಯವಸ್ಥಿತ ಆಡಳಿತಕ್ಕೆ ಕಾರಣರಾದವರು ಯಾರು ಎಂಬುದನ್ನು ನಮ್ಮ ಕಾರ್ಯಕರ್ತೆಯರು ಮನೆಮನೆಗೆ ತಲುಪಿಸಿ ಜನರಲ್ಲಿ ಜಾಗೃತಿ ಮೂಡಿಸಬೇಕು. ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳುವ ಮಹಿಳೆಯರಿಗೆ ಪಕ್ಷದ ಮುಖಂಡರಿಂದ ಎಲ್ಲಾ ರೀತಿಯ ಬೆಂಬಲ ಮತ್ತು ಸಹಕಾರ ನೀಡಲಾಗುವುದು,” ಎಂದು ಭರವಸೆ ನೀಡಿದರು.

ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ರಾಮೇಗೌಡ, ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಎಂ. ಕೃಷ್ಣಾರೆಡ್ಡಿ, ಜೆಡಿಎಸ್ ಜಿಬಿಎ ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಟಿ.ಎ. ಶರವಣ, ಜವರಾಯಿ ಗೌಡ, ಮಾಜಿ ಸಚಿವ ವೆಂಕಟರಾವ್ ನಾಡಗೌಡ ಮುಂತಾದವರು ಹಾಜರಿದ್ದರು.


Share this with Friends

Related Post