ಮೈಸೂರು,ಮೇ.29: ಮಹಿಳೆಯ ಶೀಲದ ಬಗ್ಗೆ ಅಪಪ್ರಚಾರ ಮಾಡಿದ್ದರಿಂದ ಆಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಗಾಂಧಿನಗರದ ನಿವಾಸಿ ವಿಜಯಲಕ್ಷ್ಮಿ(40) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ
ಮಹಿಳೆಯ ಬಗ್ಗೆ ಅಪಪ್ರಚಾರ ಮಾಡಿದ ದಡದಹಳ್ಳಿ ಗ್ರಾಮದ ನಿವಾಸಿ ನಾಗರಾಜು ಸೇರಿದಂತೆ 7 ಮಂದಿ ವಿರುದ್ದ ಮೈಸೂರಿನ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯಲಕ್ಷ್ಮಿ ಹಾಗೂ ಕುಟುಂಬ ದಡದಹಳ್ಳಿ ಗ್ರಾಮದ ನಿವಾಸಿಗಳು.ಅದೇ ಗ್ರಾಮದ ನಾಗರಾಜು ಆಗಾಗ ವಿಜಯಲಕ್ಷ್ಮಿ ಮೇಲೆ ಕಾಮದೃಷ್ಟಿ ಬೀರಿ ಆಕೆಯೊಂದಿಗೆ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದ, ಪಾನಮತ್ತನಾಗಿ ವಿಜಯಲಕ್ಷ್ಮಿ ವಿರುದ್ದ ಅಪಪ್ರಚಾರ ಮಾಡುವುದು,ಬಹಿರಂಗವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ.
ಈ ವಿಚಾರದಲ್ಲಿ ವಿಜಯಲಕ್ಷ್ಮಿ ಮಗ ಅಭಿ ಗಲಾಟೆ ಮಾಡಿದಾಗ ನಾಗರಾಜ್ ಸೇರಿದಂತೆ ಹಲವರು ಮನೆಗೆ ನುಗ್ಗಿ ಧ್ವಂಸ ಮಾಡಿದ್ದರು.ಈ ಗಲಾಟೆ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದೆ.
ಜತೆಗೆ ವಿಜಯಲಕ್ಷ್ಮಿ ಕುಟುಂಬ ದಡದಹಳ್ಳಿ ಗ್ರಾಮಕ್ಕೆ ಪ್ರವೇಶ ಮಾಡದಂತೆ ನಿರ್ಭಂಧ ಕೂಡಾ ಹೇರಲಾಗಿದೆ.ಹಾಗಾಗಿ ವಿಜಯಲಕ್ಷ್ಮಿ ಕುಟುಂಬ ಶಿವಮೊಗ್ಗಕ್ಕೆ ತೆರಳಿತ್ತು,ಮೂರು ದಿನಗಳ ಹಿಂದೆ ತಮ್ಮ ಸ್ವಗ್ರಾಮ ದಡದಹಳ್ಳಿಗೆ ಹೋಗಲು ವಿಜಯಲಕ್ಷ್ಮಿಮನೆಯವರು ಪ್ರಯತ್ನಿಸಿದ್ದಾರೆ,ಅದಕ್ಕಾಗಿ ಗ್ರಾಮಾಂತರ ಠಾಣೆ ಪೊಲೀಸರ ನೆರವು ಕೋರಿದ್ದಾರೆ.
ಗ್ರಾಮದ ಮುಖಂಡರ ಜೊತೆ ಕಡಕೊಳ ಗ್ರಾಮಕ್ಕೆ ತೆರಳುವಂತೆ ಗ್ರಾಮಾಂತರ ಠಾಣೆ ಪೊಲೀಸರು ಸೂಚಿಸಿದ್ದಾರೆ.ಈ ಸೂಚನೆ ಮೇರೆಗೆ ಕಡಕೊಳ ಪೊಲೀಸ್ ಠಾಣೆಗೆ ತೆರಳಿದಾಗ ನಾಗರಾಜ್ ಸೇರಿದಂತೆ ಹಲವರು ವಿರೋಧಿಸಿ ಮತ್ತೆ ವಿಜಯಲಕ್ಷ್ಮಿ ವಿರುದ್ದ ಅಪಪ್ರಚಾರ ಮಾಡಿ ಮಾನಸಿಕವಾಗಿ ಹಿಂಸಿಸಿದ್ದಾರೆ.
ಇಷ್ಟೆಲ್ಲಾ ಆದರೂ ಗ್ರಾಮಕ್ಕೆ ತೆರಳಲು ಸಾಧ್ಯವಾಗದೆ ಮೈಸೂರಿನ ಗಾಂಧಿನಗರದಲ್ಲಿರುವ ಸಂಭಂಧಿಕರ ಮನೆಯಲ್ಲಿ ತಂಗಿದ್ದಾರೆ.ಶೀಲದ ಬಗ್ಗೆ ಅಪಪ್ರಚಾರ ಮಾಡಿದ ಹಿನ್ನಲೆ ಮನನೊಂದ ವಿಜಯಲಕ್ಷ್ಮಿ ಗಾಂಧಿನಗರದ ಬಳಿ ಇರುವ ಸಿದ್ದಾರ್ಥ ಪಾರ್ಕ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಿಜಯಲಕ್ಷ್ಮಿ ವಿರುದ್ಧ ಅಪಪ್ರಚಾರ ಮಾಡಿದ ನಾಗರಾಜ್ ಸೇರಿದಂತೆ ರಾಜಮ್ಮ,
ಗೋವಿಂದರಾಜು,ನಂಜುಂಡ,
ನಾರಾಯಣ,ನಂಜಪ್ಪ ಹಾಗೂ ಸ್ವಾಮಿ ಎಂಬುವರ ವಿರುದ್ದ ನರಸಿಂಹರಾಜ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.