Fri. Mar 6th, 2026

ಬೆಂಗಳೂರು ದಕ್ಷಿಣದಲ್ಲಿ ಪೈಪ್‌ಡ್ ನ್ಯಾಚುರಲ್ ಗ್ಯಾಸ್ ಯೋಜನೆ ತ್ವರಿತಗೊಳಿ: ಸಂಸದ ತೇಜಸ್ವಿ ಸೂರ್ಯ ಸೂಚನೆ

Share this with Friends

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಪೈಪ್‌ಡ್ ನ್ಯಾಚುರಲ್ ಗ್ಯಾಸ್ (PNG) ಯೋಜನೆ ತ್ವರಿತಗೊಳಿಸುವಂತೆ ಸ್ಥಳೀಯ ಸಂಸದ ತೇಜಸ್ವಿ ಸೂರ್ಯ ಸೂಚನೆ ನೀಡಿದ್ದಾರೆ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಮನೆಮನೆಗೆ ಪೈಪ್ ಮೂಲಕ ಅಡುಗೆ ಅನಿಲ ತಲುಪಿಸುವ ‘ಪೈಪ್‌ಡ್ ನ್ಯಾಚುರಲ್ ಗ್ಯಾಸ್’ (PNG) ಯೋಜನೆಯ ಪ್ರಗತಿಯನ್ನು ಸಂಸದ ತೇಜಸ್ವಿ ಸೂರ್ಯ ಅವರು ಇಂದು ಗೇಲ್ (GAIL) ಇಂಡಿಯಾ ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಪರಿಶೀಲಿಸಿದರು.

ಬೆಂಗಳೂರಿನ ಜಯನಗರ ಮತ್ತು ಬಸವನಗುಡಿ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಷನ್ (CGD) ಯೋಜನೆಗಳ ಪ್ರಸ್ತುತ ಸ್ಥಿತಿಗತಿಯ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಯಿತು.

ಸಭೆಯ ಪ್ರಮುಖಾಂಶಗಳು ಈ ಕೆಳಗಿನಂತಿವೆ:

ಕಾಲಮಿತಿಯೊಳಗೆ ಕಾಮಗಾರಿ ಪೂರ್ಣ: ನಗರದ ವಿವಿಧ ಬಡಾವಣೆಗಳಲ್ಲಿ ಬಾಕಿ ಇರುವ ಪೈಪ್‌ಲೈನ್ ಅಳವಡಿಕೆ ಕಾರ್ಯವನ್ನು ಯುದ್ಧೋಪಾದಿಯಲ್ಲಿ ಪೂರ್ಣಗೊಳಿಸಿ, ಆದಷ್ಟು ಬೇಗ ನಾಗರಿಕರಿಗೆ ಗ್ಯಾಸ್ ಸಂಪರ್ಕ ಕಲ್ಪಿಸಬೇಕು ಎಂದು ಸಂಸದರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಇಲಾಖೆಗಳ ಸಮನ್ವಯ: ರಸ್ತೆ ಅಗೆಯುವಿಕೆ ಮತ್ತು ಮರುಸ್ಥಾಪನೆ ಕಾರ್ಯಗಳಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಬಿಬಿಎಂಪಿ (BBMP) ಹಾಗೂ ಇತರ ಸ್ಥಳೀಯ ಸಂಸ್ಥೆಗಳೊಂದಿಗೆ ಹೆಚ್ಚಿನ ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸಲು ಸೂಚಿಸಲಾಯಿತು.

ಗ್ರಾಹಕರಿಗೆ ಆರ್ಥಿಕ ಲಾಭ: ಈ ಯೋಜನೆಯಿಂದಾಗಿ ಸಾಮಾನ್ಯ ಎಲ್‌ಪಿಜಿ ಸಿಲಿಂಡರ್‌ಗಳಿಗೆ ಹೋಲಿಸಿದರೆ ಗ್ರಾಹಕರಿಗೆ ಪ್ರತಿ ಸಿಲಿಂಡರ್ ಮೇಲೆ ಸುಮಾರು ₹200 ರಿಂದ ₹300 ವರೆಗೆ ಉಳಿತಾಯವಾಗಲಿದೆ. ಇದು ಜನಸಾಮಾನ್ಯರ ಆರ್ಥಿಕ ಹೊರೆಯನ್ನು ಗಣನೀಯವಾಗಿ ತಗ್ಗಿಸಲಿದೆ ಎಂದು ತೇಜಸ್ವಿ ಸೂರ್ಯ ತಿಳಿಸಿದರು.

ಮಾದರಿ ಯೋಜನೆ: ಜೆ.ಪಿ. ನಗರದ ಎಸ್‌ಬಿಐ ಕಾಲೋನಿಯಲ್ಲಿ ಕೇವಲ 100 ದಿನಗಳಲ್ಲಿ ಯೋಜನೆ ಪೂರ್ಣಗೊಳಿಸಿದ ಮಾದರಿಯನ್ನೇ ಕ್ಷೇತ್ರದಾದ್ಯಂತ ಅನುಸರಿಸಲು ಅಧಿಕಾರಿಗಳಿಗೆ ಸಲಹೆ ನೀಡಲಾಯಿತು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಬೆಂಗಳೂರನ್ನು ಶೇ.100 ರಷ್ಟು PNG ವ್ಯಾಪ್ತಿಗೆ ತರಲು ಬದ್ಧವಾಗಿದೆ. ಈಗಾಗಲೇ ಬೊಮ್ಮನಹಳ್ಳಿ ಮತ್ತು ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರಗಳಲ್ಲಿ ಸಾವಿರಾರು ಕುಟುಂಬಗಳು ಈ ಯೋಜನೆಯ ಲಾಭ ಪಡೆಯುತ್ತಿದ್ದು, ಶೀಘ್ರದಲ್ಲೇ ಇಡೀ ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಈ ಸೌಲಭ್ಯ ವಿಸ್ತರಣೆಯಾಗಲಿದೆ ಎಂದು ಸಂಸದರು ವಿಶ್ವಾಸ ವ್ಯಕ್ತಪಡಿಸಿದರು.

ಸಭೆಯಲ್ಲಿ ಗೇಲ್ ಇಂಡಿಯಾದ ಮುಖ್ಯ ಜನರಲ್ ಮ್ಯಾನೇಜರ್ ಸಂಜಯ್ ಸಿಂಗ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.


Share this with Friends

Related Post