Fri. Mar 6th, 2026

ಮಳೆಗಾಲಕ್ಕೂ ಮುನ್ನವೇ ರಾಜಕಾಲುವೆ ಕಾಮಗಾರಿ ಚುರುಕು: ಅಧಿಕಾರಿಗಳಿಗೆ ಆಯುಕ್ತರ ಡೆಡ್‌ಲೈನ್

Share this with Friends

ಬೆಂಗಳೂರು: ನಗರದಲ್ಲಿ ಮಳೆಗಾಲದ ವೇಳೆ ಎದುರಾಗುವ ಪ್ರವಾಹ ಮತ್ತು ಜಲಾವೃತ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಬೆಂಗಳೂರು ಪೂರ್ವ ವಲಯದ ಪಾಲಿಕೆ ಅಧಿಕಾರಿಗಳು ಕಮರ್ ಕಟ್ಟಿ ನಿಂತಿದ್ದಾರೆ. ವಲಯದ ವಿವಿಧೆಡೆ ನಡೆಯುತ್ತಿರುವ ಬೃಹತ್ ರಾಜಕಾಲುವೆ ಹಾಗೂ ತಡೆಗೋಡೆ ನಿರ್ಮಾಣ ಕಾಮಗಾರಿಗಳನ್ನು ಪಾಲಿಕೆ ಆಯುಕ್ತರಾದ ಡಿ.ಎಸ್. ರಮೇಶ್ ಅವರು ಅಧಿಕಾರಿಗಳೊಂದಿಗೆ ಖುದ್ದಾಗಿ ಪರಿಶೀಲಿಸಿದರು.

ನಗರದ ಪ್ರಮುಖ ತಾಣಗಳಲ್ಲಿ ಹೂಳೆತ್ತುವಿಕೆ ಮತ್ತು ತಡೆಗೋಡೆ ಕಾಮಗಾರಿಗಳಲ್ಲಿ ವಿಳಂಬ ಧೋರಣೆ ತೋರುವಂತಿಲ್ಲ ಎಂದು ಎಚ್ಚರಿಸಿದ ಆಯುಕ್ತರು, ಮಳೆನೀರು ಸರಾಗವಾಗಿ ಹರಿಯುವಂತೆ ಮಾಡಲು ಕಾಲಮಿತಿಯೊಳಗೆ ಕೆಲಸ ಮುಗಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸ್ಥಳದಲ್ಲೇ ಪರಿಶೀಲನೆ – ಕಟ್ಟುನಿಟ್ಟಿನ ಆದೇಶ:

ಪರಿಶೀಲನೆ ವೇಳೆ ಗೆದ್ದಲಹಳ್ಳಿ ರೈಲ್ವೆ ವೆಂಟ್ ಬಳಿಯ ಬಾಕ್ಸ್ ಪುಷಿಂಗ್ ಕಾಮಗಾರಿಯನ್ನು ಏಪ್ರಿಲ್ ಅಂತ್ಯದೊಳಗೆ ಮುಗಿಸುವಂತೆ ನಿರ್ದೇಶನ ನೀಡಲಾಯಿತು. ಬಳಗೆರೆ ಎಸ್‌ಟಿಪಿ ಪ್ಲಾಂಟ್ ಬಳಿಯ ತಡೆಗೋಡೆ ಕಾಮಗಾರಿಯ ಗುಣಮಟ್ಟವನ್ನು ಪರೀಕ್ಷಿಸಿದ ಅವರು, ಮಾರ್ಚ್ ಅಂತ್ಯದೊಳಗೆ ಬಾಕಿ ಉಳಿದಿರುವ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಲು ಗಡುವು ವಿಧಿಸಿದರು.

ಒತ್ತುವರಿ ತೆರವಿಗೆ ಸೂಚನೆ:

ಸಿದ್ದಾಪುರ ಹಾಗೂ ವರ್ತೂರು ಕೆರೆ ಕಾಲುವೆಗಳ ಬಳಿ ಅತಿಕ್ರಮಣ ತೆರವುಗೊಳಿಸಿದ ನಂತರ ನಿರ್ಮಿಸಲಾಗುತ್ತಿರುವ ರಿಟೈನಿಂಗ್ ವಾಲ್ ಕಾಮಗಾರಿಯನ್ನು ಆಯುಕ್ತರು ವೀಕ್ಷಿಸಿದರು. ಗೆದ್ದಲಹಳ್ಳಿ ಡೌನ್‌ಸ್ಟ್ರೀಮ್ ಭಾಗದಲ್ಲಿ ಒತ್ತುವರಿ ತೆರವುಗೊಳಿಸಿ ಕಾಮಗಾರಿಗೆ ವೇಗ ನೀಡುವಂತೆ ಇಂಜಿನಿಯರ್‌ಗಳಿಗೆ ಆದೇಶಿಸಿದರು. ಪ್ರೆಸ್ಟೀಜ್ ಓಜೋನ್ ಹಾಗೂ ಬಿಳಿಶಿವಾಲೆ ರಾಜಕಾಲುವೆ ಕಾಮಗಾರಿಗಳೂ ಕೂಡ ಏಪ್ರಿಲ್ ವೇಳೆಗೆ ಸಾರ್ವಜನಿಕರ ಬಳಕೆಗೆ ಸಿದ್ಧವಾಗಬೇಕಿದೆ ಎಂದು ಅವರು ತಿಳಿಸಿದರು.

ನಗರದ ಜನತೆಗೆ ಮಳೆಗಾಲದಲ್ಲಿ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಈ ಅಭಿವೃದ್ಧಿ ಕೆಲಸಗಳಿಗೆ ಮೊದಲ ಆದ್ಯತೆ ನೀಡಲಾಗಿದೆ ಎಂದು ಪಾಲಿಕೆ ಸ್ಪಷ್ಟಪಡಿಸಿದೆ. ಈ ಸಂದರ್ಭದಲ್ಲಿ ಅಪರ ಆಯುಕ್ತರಾದ ಲೋಖಂಡೆ ಸ್ನೇಹಲ್ ಸುಧಾಕರ್ ಹಾಗೂ ಬಿಬಿಎಂಪಿಯ ಹಿರಿಯ ತಾಂತ್ರಿಕ ಅಧಿಕಾರಿಗಳು ಉಪಸ್ಥಿತರಿದ್ದರು.


Share this with Friends

Related Post