ಬೆಂಗಳೂರು,ಜೂ.29: ಸಿಎಂ, ಡಿಸಿಎಂ ವಿಚಾರವಾಗಿ ಸಾರ್ವಜನಿಕವಾಗಿ ಹಾಗೂ ಮಾಧ್ಯಮಗಳ ಮುಂದೆ ಮಾತನಾಡಿದರೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಎಚ್ಚರಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಬಹಿರಂಗ ಹೇಳಿಕೆ ನೀಡುವವರು ಎಐಸಿಸಿ ಮತ್ತು ರಾಜ್ಯ ಘಟಕದಿಂದ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಹೇಳಿದರು.
ನಮ್ಮ ಪಕ್ಷಕ್ಕೆ ಶಿಸ್ತು ಮುಖ್ಯ, ಪಕ್ಷವನ್ನು ಅಧಿಕಾರಕ್ಕೆ ತರಲು ಎಷ್ಟು ಕಷ್ಟ ಪಟ್ಟಿದ್ದೇವೆ ಎಂಬುದು ನಮಗೆ ಗೊತ್ತಿದೆ,ಈಗ ಸುಮ್ಮನೆ ಏನೋ ಮಾತನಾಡೋ ಅವಷ್ಯವಿಲ್ಲ ಎಂದು ತಿಳಿಸಿದರು.
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ನಾನು, ಸಿದ್ದರಾಮಯ್ಯ ಅವರು ಪಕ್ಷದ ಹಿತ ದೃಷ್ಟಿಯಿಂದ ಹೇಗೆ ಕೆಲಸ ಮಾಡಬೇಕು ಎಂಬ ಬಗ್ಗೆ ತೀರ್ಮಾನಕ್ಕೆ ಬಂದಿದ್ದೇವೆ. ಈ ವಿಚಾರವಾಗಿ ಯಾವುದೇ ಮಂತ್ರಿಗಳು, ಶಾಸಕರು, ಸ್ವಾಮೀಜಿಗಳು ಮಾತನಾಡುವ ಅವಶ್ಯಕತೆ ಇಲ್ಲ ಎಂದು ಮುಗುಮ್ಮಾಗಿ ಹೇಳಿದರು.
ಹೈಕಮಾಂಡ್ ಬಳಿ ಡಿಸಿಎಂ, ಸಿಎಂ ಬದಲಾವಣೆ ಬಗ್ಗೆ ಚರ್ಚೆಯಾಗಿದೆಯಾ ಎಂಬ ಪ್ರಶ್ನೆಗೆ ಬಗ್ಗೆ ಖಂಡಿತಾ ಚರ್ಚೆಯಾಗಿಲ್ಲ, ಸ್ವಾಮೀಜಿಗಳು ಅಭಿಮಾನಪೂರ್ವಕವಾಗಿ ಮಾತನಾಡಿದ್ದಾರೆ, ಸ್ವಾಮೀಜಿಗಳ ಆಶೀರ್ವಾದ ಇದ್ದರೆ ಸಾಕು, ಅವರು ಒಳಗಿನಿಂದಲೇ ಹರಸಿದರೆ ಸಾಕು,ನಾನು ಸಿಎಂ ಆಗಲು ಯಾರೂ ಶಿಫಾರಸ್ಸು ಮಾಡುವುದು ಬೇಡ,ನನ್ನ ಕೆಲಸವನ್ನು ನೋಡಿ ನಮ್ಮ ಪಕ್ಷದ ಹೈಕಮಾಂಡ್ ಸೂಕ್ತ ತೀರ್ಮಾನ ಮಾಡುತ್ತದೆ. ದಯವಿಟ್ಟು ಈ ವಿಚಾರ ಇಲ್ಲಿಗೆ ಬಿಟ್ಟುಬಿಡಿ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.