ಮೈಸೂರು, ಫೆ.11: ಬಂಡೀಪುರ ಅರಣ್ಯ ವನ್ಯ ಜೀವಿಗಳ ಆವಾಸಸ್ಥಾನವಾಗಿದ್ದು, ಪ್ರಾಣಿಗಳ ಸಂಚಾರಕ್ಕೆ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಮೈಸೂರಿನ ಅರಣ್ಯ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಬಂಡೀಪುರ ಅರಣ್ಯದೊಳಗೆ ರಸ್ತೆ ಮಾರ್ಗವಾಗಿ ಕೇರಳಕ್ಕೆ ಹೋಗಲು ಬೆಳಗ್ಗೆ 6ರಿಂದ ರಾತ್ರಿ 9ರವರೆಗೆ ಅವಕಾಶ ನೀಡಲಾಗಿದೆ,ರಾತ್ರಿ ಸಂಚಾರ ನಿರ್ಬಂಧ ಮುಂದುವರಿಯಲಿದೆ ಎಂದು ಹೇಳಿದರು.
ಬಂಡಿಪುರದಲ್ಲಿ ರೈಲು ಮಾರ್ಗ ಅಥವಾ ಮೇಲ್ಸೇತುವೆ ನಿರ್ಮಾಣ ಕುರಿತಂತೆ ಸಮೀಕ್ಷೆ ನಡೆಸಿಲ್ಲ ಎಂದು ತಿಳಿಸಿದರು.
ಮಾನವ-ವನ್ಯಜೀವಿ ಸಂಘರ್ಷ ತಡೆಗೆ ಕ್ರಮ ಅತ್ಯಗತ್ಯವಿದೆ,ಬೆಳೆ ಹಾನಿ ಆಗದಂತೆ ಮತ್ತು ಜೀವ ಹಾನಿ ಆಗದ ರೀತಿ ರೈಲ್ವೆ ಬ್ಯಾರಿಕೇಡ್ ನಿರ್ಮಿಸಲಾಗುತ್ತಿದೆ,ಅಲ್ಲದೆ ಅರಣ್ಯ ವಿಸ್ತರಣೆಗೂ ಆದ್ಯತೆ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಸ್ವಾತಂತ್ರ್ಯ ಪೂರ್ವದಲ್ಲಿ 7500 ಎಕರೆ ಅರಣ್ಯ ಭೂಮಿಯನ್ನು ಬ್ರಿಟಿಷರು ಕೆಲವು ಎಸ್ಟೇಟ್ ಕಂಪನಿಗಳಿಗೆ ದೀರ್ಘ ಕಾಲದ ಅವಧಿಗೆ ಗುತ್ತಿಗೆ ನೀಡಿದ್ದರಿಂದಾಗಿ ಪ್ರಾಣಿಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ.ಆದ್ದರಿಂದ ಈ ಭೂಮಿಯನ್ನು ಮರಳಿ ಪಡೆದು ಅರಣ್ಯ ವಿಸ್ತರಿಸಲು ಕಾನೂನು ಹೋರಾಟ ಮುಂದುವರಿಸಲಾಗುವುದು ಎಂದು ತಿಳಿಸಿದರು.
ಕರ್ನಾಟಕದ ಅರಣ್ಯ ಇಲಾಖೆ ಸೆರೆಹಿಡಿದು ರೇಡಿಯೋ ಕಾಲರ್ ಅಳವಡಿಸಿದ್ದ ಆನೆಯೊಂದು ಕೇರಳದಲ್ಲಿ ದಾಳಿ ಮಾಡಿದ್ದು, ವ್ಯಕ್ತಿಯೊಬ್ಬರು ಸಾವಿಗೀಡಾಗಿರುವುದು ಅತ್ಯಂತ ದುಃಖ ಮತ್ತು ದುರ್ದೈವದ ಸಂಗತಿಯಾಗಿದೆ ಎಂದು ಈಶ್ವರ ಖಂಡ್ರೆ ವಿಷಾದಿಸಿದರು.
ಬರುವ ಬೇಸಿಗೆಯಲ್ಲಿ ಕಾಡ್ಗಿಚ್ಚಿನಿಂದ ಅರಣ್ಯಕ್ಕೆ ಹಾನಿ ಆಗದ ರೀತಿಯಲ್ಲಿ ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ,ಅಗ್ನಿ ಶಾಮಕ ದಳದೊಂದಿಗೆ ಕೂಡ ಈ ಬಗ್ಗೆ ಮಾತುಕತೆ ನಡೆಸಲಾಗಿದೆ ಎಂದು ಸಚಿವರು ತಿಳಿಸಿದರು.
ಯಾರೇ ಅರಣ್ಯ ಒತ್ತುವರಿ ಮಾಡಿದ್ದರೂ ಅದನ್ನು ವಾಪಸು ಪಡೆಯಲು ಎಲ್ಲಾ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಖಂಡ್ರೆ ಸ್ಪಷ್ಟಪಡಿಸಿದರು.