Mon. Mar 9th, 2026

ಔಷಧ ಪೂರೈಕೆಗೆ ಸಾಕಷ್ಟು ಅನುದಾನ; ಪಾರದರ್ಶಕ ವ್ಯವಸ್ಥೆಗೆ ಕ್ರಮ: ದಿನೇಶ್ ಗುಂಡೂರಾವ್

Share this with Friends

ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಿಗೆ ಸಮರ್ಪಕವಾಗಿ ಔಷಧ ಪೂರೈಸಲು ಸರ್ಕಾರ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಸಾಕಷ್ಟು ಅನುದಾನ ಮೀಸಲಿಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕೆ.ಎಸ್.ಎಂ.ಸಿ.ಎಲ್ (KSMCL) ಮುಖಾಂತರ ಆಗಸ್ಟ್ ತಿಂಗಳಿನಲ್ಲೇ ಔಷಧಗಳ ಪಟ್ಟಿ ಸಿದ್ಧಪಡಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಸದನಕ್ಕೆ ವಿವರಿಸಿದರು.

ಈ ಹಿಂದಿನ ವ್ಯವಸ್ಥೆಯಲ್ಲಿ ಔಷಧಗಳು ಸರಿಯಾದ ತಪಾಸಣೆಯಿಲ್ಲದೆ ವಿತರಣೆಯಾಗುತ್ತಿದ್ದವು ಹಾಗೂ ಕಡಿಮೆ ಬಳಕೆಯ ಔಷಧಗಳನ್ನು ಅತಿ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಲಾಗುತ್ತಿತ್ತು. ಈ ಲೋಪದೋಷಗಳನ್ನು ಸರಿಪಡಿಸಿರುವ ಸರ್ಕಾರ, ಈಗ ಕೇವಲ ಅವಶ್ಯಕ ಔಷಧಗಳನ್ನು ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತಿದೆ. ಈ ಖರೀದಿ ಪ್ರಕ್ರಿಯೆಯನ್ನು ಸುಧಾರಿಸಲು ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳ ಮಾದರಿಗಳನ್ನು ಅಧ್ಯಯನ ಮಾಡಲಾಗಿದ್ದು, ಅನಗತ್ಯ ಟೆಂಡರ್ ನಿಯಮಗಳನ್ನು ಸಡಿಲಿಸಿ ಹೆಚ್ಚು ಬಿಡ್‌ದಾರರು ಪಾಲ್ಗೊಳ್ಳುವಂತೆ ಪಾರದರ್ಶಕ ವ್ಯವಸ್ಥೆ ರೂಪಿಸಲಾಗಿದೆ ಎಂದರು.

ಔಷಧಗಳ ಗುಣಮಟ್ಟದ ವಿಚಾರದಲ್ಲಿ ರಾಜಿ ಮಾಡಿಕೊಳ್ಳದ ಸರ್ಕಾರ, ಖರೀದಿಸಿದ ನಂತರ ಉಗ್ರಾಣಗಳಲ್ಲಿಯೂ ಮತ್ತೊಮ್ಮೆ ತಪಾಸಣೆ ನಡೆಸುವ ಪ್ರಕ್ರಿಯೆ ಜಾರಿಗೆ ತಂದಿದೆ. ಇದರಿಂದ ಪೂರೈಕೆಯಲ್ಲಿ ಸ್ವಲ್ಪ ವಿಳಂಬವಾಗಿದ್ದರೂ, ಗುಣಮಟ್ಟ ಖಾತ್ರಿಯಾಗುತ್ತಿದೆ. ತುರ್ತು ಸಂದರ್ಭಗಳಿಗಾಗಿ ಎಬಿಆರ್‌ಕೆ ಅಡಿಯಲ್ಲಿ ಜಿಲ್ಲೆಗಳಲ್ಲಿರುವ 300 ಕೋಟಿ ರೂ. ಅನುದಾನದ ಜೊತೆಗೆ ಹೆಚ್ಚುವರಿಯಾಗಿ 30 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಸ್ಥಳೀಯ ಮಟ್ಟದಲ್ಲೇ ಔಷಧ ಖರೀದಿಸಲು ಜಿಲ್ಲಾಡಳಿತಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಸಂಸ್ಥೆಯ ಆಡಳಿತಾತ್ಮಕ ಸುಧಾರಣೆಗಾಗಿ ಕೆ.ಎಸ್.ಎಂ.ಸಿ.ಎಲ್ ಎಂಡಿ ಹುದ್ದೆಗೆ ಐಎಎಸ್ ಅಧಿಕಾರಿಯನ್ನು ನೇಮಿಸಲಾಗಿದೆ. ಮೊದಲು ವರ್ಷಕ್ಕೊಮ್ಮೆ ಔಷಧ ಪೂರೈಕೆಯಾಗುತ್ತಿದ್ದುದರಿಂದ ಹೆಚ್ಚಿನ ದಾಸ್ತಾನು ವ್ಯರ್ಥವಾಗುತ್ತಿತ್ತು. ಇದನ್ನು ತಪ್ಪಿಸಲು ಈಗ ಪ್ರತಿ ಮೂರು ತಿಂಗಳಿಗೊಮ್ಮೆ ಅಗತ್ಯಕ್ಕೆ ತಕ್ಕಂತೆ ಪೂರೈಕೆ ಮಾಡುವ ಹೊಸ ಕ್ರಮ ಜಾರಿಗೆ ತರಲಾಗಿದೆ. ಜನರಿಗೆ ಉಚಿತವಾಗಿ ಗುಣಮಟ್ಟದ ಔಷಧ ನೀಡುವುದು ಸರ್ಕಾರದ ಆದ್ಯ ಕರ್ತವ್ಯವಾಗಿದ್ದು, ಆರೋಗ್ಯ ಇಲಾಖೆ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.


Share this with Friends

Related Post