ಬೆಂಗಳೂರು: ರಾಜ್ಯದ ಕೈಗಾರಿಕಾ ಮತ್ತು ತಾಂತ್ರಿಕ ನಕ್ಷೆಯಲ್ಲಿ ಬೆಂಗಳೂರು ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ನಗರದ ಕಾಡುಗೋಡಿ ಸಮೀಪದ ಟೈಟಾನಿಯಂ ಟೆಕ್ ಪಾರ್ಕ್‌ನಲ್ಲಿ ನಿರ್ಮಿಸಲಾಗಿರುವ ಅತ್ಯಾಧುನಿಕ ‘ಏರ್ ಬಸ್ ಇಂಡಿಯಾ ಟೆಕ್ನಾಲಜಿ ಸೆಂಟರ್’ಅನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಉದ್ಘಾಟಿಸಿದರು.
ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಅವರು ವರ್ಚುವಲ್ ವೇದಿಕೆಯ ಮೂಲಕ ಸಮಾರಂಭದಲ್ಲಿ ಪಾಲ್ಗೊಂಡು ಶುಭ ಹಾರೈಸಿದರು.
ಜಾಗತಿಕ ಮಟ್ಟದ 3ನೇ ಕೇಂದ್ರ:
ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಎಂ.ಬಿ. ಪಾಟೀಲ, “ಈ ನೂತನ ಕೇಂದ್ರವು ಏರ್ ಬಸ್ ಕಂಪನಿಯ ಜಾಗತಿಕ ಮಟ್ಟದ ಮೂರನೇ ಅತಿದೊಡ್ಡ ನಾವೀನ್ಯತಾ ಕೇಂದ್ರವಾಗಿದೆ. ಇಲ್ಲಿ ಸುಮಾರು 5,000ಕ್ಕೂ ಹೆಚ್ಚು ವೃತ್ತಿಪರರಿಗೆ ಉದ್ಯೋಗಾವಕಾಶ ಲಭಿಸಲಿದೆ. ವೈಮಾಂತರಿಕ್ಷ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಕರ್ನಾಟಕದ ಪ್ರಾಬಲ್ಯವನ್ನು ಇದು ಮತ್ತಷ್ಟು ಹೆಚ್ಚಿಸಲಿದೆ” ಎಂದರು.
2033ಕ್ಕೆ ಎರಡನೇ ವಿಮಾನ ನಿಲ್ದಾಣ:
ನಗರದ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು 2033ರ ವೇಳೆಗೆ ಬೆಂಗಳೂರಿಗೆ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬರಲಿದೆ ಎಂದು ಸಚಿವರು ಇದೇ ವೇಳೆ ಘೋಷಿಸಿದರು. “ಹೊಸ ವಿಮಾನ ನಿಲ್ದಾಣವು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಷ್ಟೇ ಬೃಹತ್ ಪ್ರಮಾಣದಲ್ಲಿರಲಿದ್ದು, ಇದಕ್ಕೆ ಕೇಂದ್ರ ಸರ್ಕಾರವೂ ಪೂರ್ಣ ಸಹಕಾರ ನೀಡುವ ಭರವಸೆ ನೀಡಿದೆ. ಮುಖ್ಯಮಂತ್ರಿಗಳು ಈಗಾಗಲೇ ಈ ಬಗ್ಗೆ ವಿಸ್ತೃತ ಕಾರ್ಯಸಾಧ್ಯತಾ ವರದಿ (FSR) ಸಿದ್ಧಪಡಿಸಲು ಸೂಚಿಸಿದ್ದಾರೆ,” ಎಂದು ಮಾಹಿತಿ ನೀಡಿದರು.
ಪ್ರಮುಖ ಅಂಶಗಳು:
ದೇಶದ ವೈಮಾಂತರಿಕ್ಷ ಮತ್ತು ರಕ್ಷಣಾ ವಲಯಕ್ಕೆ ಕರ್ನಾಟಕದಿಂದ ಶೇ. 60ರಷ್ಟು ಕೊಡುಗೆ.
ವೇಮಗಲ್ ಘಟಕದಿಂದ 2027ರ ವೇಳೆಗೆ ಮೊದಲ ಹೆಲಿಕಾಪ್ಟರ್ ಮಾರುಕಟ್ಟೆಗೆ ಬಿಡುಗಡೆ.
ಭಾರತದೊಂದಿಗೆ ಏರ್ ಬಸ್ ಕಂಪನಿಯ ವಾರ್ಷಿಕ ವಹಿವಾಟು 1.5 ಬಿಲಿಯನ್ ಡಾಲರ್ ತಲುಪಿದೆ.
ಕಾರ್ಯಕ್ರಮದಲ್ಲಿ ಏರ್ ಬಸ್ ಇಂಡಿಯಾದ ಮುಖ್ಯಸ್ಥ ಜರ್ಗನ್ ವೆಸ್ಟರ್ಮೀಯರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

