ಬಾಳೆಹೊನ್ನೂರು: “ನಾನು ಒಕ್ಕಲಿಗನಾಗಿದ್ದರೂ ಗಂಗಾಧರ ಅಜ್ಜಯ್ಯನವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು ನನ್ನ ಅಚಲ ನಂಬಿಕೆ. ಅಜ್ಜಯ್ಯನವರು ನನಗೆ ನೀಡಿದ ಸಾಕ್ಷಾತ್ಕಾರವನ್ನು ಈಗ ಬಹಿರಂಗಪಡಿಸಲು ಸಾಧ್ಯವಿಲ್ಲ, ಸಮಯ ಬಂದಾಗ ಅದನ್ನು ಪುಸ್ತಕ ರೂಪದಲ್ಲಿ ಹೊರತರುತ್ತೇನೆ” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ಇಲ್ಲಿನ ರಂಭಾಪುರಿ ಪೀಠದಲ್ಲಿ ನಡೆದ ಜಗದ್ಗುರು ರೇಣುಕಾಚಾರ್ಯ ಜಯಂತಿ ಮತ್ತು ಕ್ಷೇತ್ರನಾಥ ಗಂಗಾಧರ ಅಜ್ಜಯ್ಯನವರ ಸಂಸ್ಮರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, “ನಾನು ಪಿಯುಸಿ ಶಿಕ್ಷಣವನ್ನು ವೀರಶೈವ ಸಂಸ್ಥೆಯಲ್ಲಿ ಹಾಗೂ ಪದವಿಯನ್ನು ವೀರ ಗಂಗಾಧರ ಅಜ್ಜಯ್ಯನವರು ಸ್ಥಾಪಿಸಿದ ರೇಣುಕಾಚಾರ್ಯ ಸಂಸ್ಥೆಯಲ್ಲಿ ಪೂರೈಸಿದೆ. ಅಂದಿನಿಂದಲೂ ವೀರಶೈವ ಸಮಾಜದೊಂದಿಗೆ ನನಗೆ ಅವಿನಾಭಾವ ಸಂಬಂಧವಿದೆ. ನಾನು ಗಂಗಾಧರ ಅಜ್ಜಯ್ಯನವರ ಪರಮ ಭಕ್ತ” ಎಂದು ತಿಳಿಸಿದರು.
ಭವನಕ್ಕೆ 5 ಕೋಟಿ ರೂ. ಅನುದಾನ:
ರಂಭಾಪುರಿ ಶ್ರೀಗಳ ಆಶಯದಂತೆ ಪೀಠದ ಅಪೂರ್ಣಗೊಂಡಿರುವ ಭವನದ ಕಾಮಗಾರಿಗೆ 5 ಕೋಟಿ ರೂಪಾಯಿ ಅನುದಾನ ನೀಡುವುದಾಗಿ ಡಿ.ಕೆ. ಶಿವಕುಮಾರ್ ಇದೇ ಸಂದರ್ಭದಲ್ಲಿ ಘೋಷಿಸಿದರು. “ಹಿಂದೆ ಕೆಲವು ತಾಂತ್ರಿಕ ಅಡಚಣೆಗಳಿಂದ ಈ ಕೆಲಸಕ್ಕೆ ತಡೆ ನೀಡಲು ಹೇಳಿದ್ದೆ. ಆದರೆ ಈಗ ಕಾಲ ಕೂಡಿ ಬಂದಿದೆ. ಶೀಘ್ರವೇ ಹಣ ಬಿಡುಗಡೆ ಮಾಡಿ, ನಾನೇ ಖುದ್ದಾಗಿ ಬಂದು ಭವನ ಉದ್ಘಾಟಿಸುತ್ತೇನೆ” ಎಂದು ಭರವಸೆ ನೀಡಿದರು.
ಧರ್ಮದ ವಿವಾದಕ್ಕೆ ಅಂತ್ಯ:
ಹಿಂದಿನ ವೀರಶೈವ-ಲಿಂಗಾಯತ ಧರ್ಮದ ಹೋರಾಟದ ಕುರಿತು ಪ್ರಸ್ತಾಪಿಸಿದ ಅವರು, “ಆ ಸಂದರ್ಭದಲ್ಲಿ ಶ್ರೀಗಳ ಪಾದಕ್ಕೆ ನಮಸ್ಕರಿಸಿ, ನಮ್ಮಿಂದ ತಪ್ಪಾಗಿದ್ದರೆ ಕ್ಷಮಿಸಿ ಎಂದು ಪ್ರಾರ್ಥಿಸಿದ್ದೆ. ಅದರ ಬಗ್ಗೆ ರಾಜ್ಯಾದ್ಯಂತ ಟೀಕೆಗಳು ವ್ಯಕ್ತವಾದರೂ ನಾನು ತಲೆಕೆಡಿಸಿಕೊಳ್ಳಲಿಲ್ಲ. ಯಾರಿಗೂ ಹೆದರದೆ ಆತ್ಮಸಾಕ್ಷಿಗೆ ಅನುಗುಣವಾಗಿ ಬದುಕಬೇಕು ಎಂಬುದು ನನ್ನ ಸಿದ್ದಾಂತ” ಎಂದರು.
ವಿಶ್ವಶಾಂತಿಗೆ ಮಾನವ ಧರ್ಮವೇ ಹಾದಿ:
“ದೇವನೊಬ್ಬ ನಾಮ ಹಲವು ಎಂಬ ತತ್ವದಂತೆ ಪೂಜೆಗಳು ಬೇರೆಯಾದರೂ ಭಕ್ತಿ ಒಂದೇ ಆಗಿರಬೇಕು. ಮಾನವ ಧರ್ಮಕ್ಕೆ ಜಯವಾಗಲಿ, ಮಾನವ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಅಜ್ಜಯ್ಯನವರ ಸಂದೇಶದಂತೆ ನಾವೆಲ್ಲರೂ ನಡೆಯಬೇಕು. ಧರ್ಮಕ್ಕಾಗಿ ನಾವು ಏಳಬೇಕು, ಬಾಳಬೇಕು ಮತ್ತು ಆಳಬೇಕು” ಎಂದು ಅವರು ಕರೆ ನೀಡಿದರು.
ರಂಭಾಪುರಿ ಮಠ ಮಾನವ ಧರ್ಮದ ಆಸ್ತಿ;
“ಅಕ್ಕಿ ಮತ್ತು ಅರಿಶಿನ ಸೇರಿದರೆ ಹೇಗೆ ಮಂತ್ರಾಕ್ಷತೆಯಾಗುತ್ತದೆಯೋ, ಹಾಗೆಯೇ ಇಂದು ಮಠದ ಸಾನ್ನಿಧ್ಯದಲ್ಲಿ ಶುಭ ಕಾರ್ಯಗಳು ನೆರವೇರಿವೆ. ಜಗದ್ಗುರು ರೇಣುಕಾಚಾರ್ಯರ ಪ್ರತಿಮೆಯನ್ನು ಉದ್ಘಾಟಿಸುವ ಅವಕಾಶ ಸಿಕ್ಕಿದ್ದು ನನ್ನ ಪೂರ್ವಜನ್ಮದ ಪುಣ್ಯ” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾವುಕರಾಗಿ ನುಡಿದರು.
ಹೆಸರಿನ ಹಿಂದಿನ ಶಿವನ ಮಹಿಮೆ:
ತಮ್ಮ ಹೆಸರಿನ ಹಿಂದಿನ ಸ್ವಾರಸ್ಯವನ್ನು ಹಂಚಿಕೊಂಡ ಅವರು, “ನಮ್ಮ ಕುಟುಂಬದಲ್ಲಿ ಎಲ್ಲರಿಗೂ ಕೆಂಪೇಗೌಡ ಎಂದು ಹೆಸರಿಡುವುದು ರೂಢಿ. ಆದರೆ ನನ್ನ ತಂದೆ-ತಾಯಿಗೆ ಮಕ್ಕಳಾಗುವುದು ತಡವಾದಾಗ ಶಿವಾಲ್ದಾಪ್ಪ ಬೆಟ್ಟದ ಶಿವನಿಗೆ ಹರಕೆ ಹೊತ್ತಿದ್ದರು. ಆ ಶಿವನ ಕೃಪೆಯಿಂದ ಜನಿಸಿದ ಕಾರಣ ನನಗೆ ‘ಶಿವಕುಮಾರ’ ಎಂದು ನಾಮಕರಣ ಮಾಡಿದರು” ಎಂದು ಸ್ಮರಿಸಿದರು.
ಮಠಗಳು ಮಾನವ ಧರ್ಮದ ಆಸ್ತಿ:
“ಯಾರೂ ಸಹ ಇಂತಹುದೇ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿ ಹುಟ್ಟುವುದಿಲ್ಲ. ರಂಭಾಪುರಿ ಮಠವು ಕೇವಲ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ, ಅದು ಮಾನವ ಧರ್ಮದ ಆಸ್ತಿ. ಧರ್ಮವನ್ನು ನಾವು ಕಾಪಾಡಿದರೆ, ಧರ್ಮ ನಮ್ಮನ್ನು ಕಾಪಾಡುತ್ತದೆ. ಈ ಹುಟ್ಟು-ಸಾವಿನ ಮಧ್ಯೆ ನಾವು ಸಮಾಜಕ್ಕೆ ಉಪಯುಕ್ತವಾದ ಸಾಕ್ಷಿಗುಡ್ಡೆಗಳನ್ನು (ಕೊಡುಗೆಗಳನ್ನು) ಬಿಟ್ಟು ಹೋಗಬೇಕು” ಎಂದು ಅಭಿಪ್ರಾಯಪಟ್ಟರು.
“ಪುರಂದರದಾಸರ ಕೀರ್ತನೆಯಂತೆ ಪದುಮನಾಭನ ಪಾದ ಭಜನೆಯೇ ಪರಮ ಸುಖ. ರೇಣುಕಾಚಾರ್ಯರ ಮಾರ್ಗದರ್ಶನದಲ್ಲಿ ನಡೆಯುವುದು ಮತ್ತು ಅವರ ಆಶೀರ್ವಾದ ಪಡೆಯುವುದು ನನ್ನ ಭಾಗ್ಯ” ಎಂದು ಡಿ.ಕೆ. ಶಿವಕುಮಾರ್ ಅವರು ಕಾರ್ಯಕ್ರಮದಲ್ಲಿ ಹೇಳಿದರು.

