ಹುಣಸೂರು, ಏ.13: ಮೋದಿ ಹುಟ್ಟಿಸಿದ ಭ್ರಮೆಗಳೆಲ್ಲಾ ಬೆತ್ತಲಾಗಿವೆ,ನೀವಿನ್ನೂ ಮೋದಿ ಭ್ರಮೆಯಲ್ಲಿದ್ದೀರಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಜನಧ್ವನಿ-2 ಬೃಹತ್ ಜನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು,ದೇಶದ ಜನತೆ ಹೇಗೆ ಭ್ರಮೆಗೆ ಒಳಗಾಗಿ ಮೋಸಹೋದರು ಎಂಬುದನ್ನು ಬಿಚ್ಚಿಟ್ಟರು.
ಈ ಲೋಕಸಭಾ ಚುನಾವಣೆ ಭಾರತದ ಭವಿಷ್ಯದ ದೃಷ್ಟಿಯಿಂದ, ಭಾರತದ ಆರ್ಥಿಕತೆ ದೃಷ್ಟಿಯಿಂದ ಬಹಳ ನಿರ್ಣಾಯಕವಾಗಿದೆ ಎಂದು ಹೇಳಿದರು.
ಕಳೆದ ಹತ್ತು ವರ್ಷ ನೀವು ಬಿಜೆಪಿಗೆ ಓಟು ಹಾಕಿದ್ದು ಏಕೆ, ಯಾವ ಕಾರಣಗಳಿಂದ ಓಟು ಹಾಕಿದ್ರಿ ಎನ್ನುವುದನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಿ ಎಂದು ಜನರಿಗೆ ತಿಳಿಸಿದರು.
ಮೋದಿ ಹೇಳಿದ್ದರಲ್ಲಿ ಒಂದೇ ಒಂದನ್ನಾದರೂ ಈಡೇರಿಸಿದ್ದಾರಾ ಕಳೆದ ಹತ್ತು ವರ್ಷಗಳಲ್ಲಿ ಭಾರತೀಯರನ್ನು ಭಾವನಾತ್ಮಕವಾಗಿ ಕೆರಳಿಸಿ ವಂಚಿಸಿದ್ದು ಬಿಟ್ಟರೆ ಭಾರತೀಯರ ಬದುಕಿಗೆ ಬೇಕಾದ ಒಂದೇ ಒಂದು ಕೆಲಸವನ್ನಾದರೂ ಮಾಡಿದ್ದಾರಾ ಎನ್ನುವುದನ್ನು ನಿಮ್ಮ ಆತ್ಮಸಾಕ್ಷಿಗೆ ಕೇಳಿಕೊಳ್ಳಿ ಎಂದು ಸಿಎಂ ಹೇಳಿದ್ದರು.
ನೀವು ಬಿಜೆಪಿ ಮೇಲಿಟ್ಟಿದ್ದ ನಂಬಿಕೆಗಳಿಗೆ ಮೋಸ ಆಗಿದೆ ತಾನೇ ನಿಮ್ಮ ನಂಬಿಕೆಗಳಿಗೆ ಮೋಸ ಮಾಡಿ ವಂಚಿಸಿದ ಮೋದಿ ಮತ್ತು ಬಿಜೆಪಿಯ ಸುಳ್ಳುಗಳಿಗೆ ಮತ್ತೆ ಮತ್ತೆ ತಲೆ ಒತ್ತೆ ಇಟ್ಟು ಮರುಳಾಗಬೇಡಿ ಎಂದು ಕರೆ ನೀಡಿದರು.
ನಾವು ನುಡಿದಂತೆ ನಡೆದಿದ್ದೇವೆ. ನಿಮ್ಮ ನಂಬಿಕೆಗಳಿಗೆ, ನಾವು ಕೊಟ್ಟ ಮಾತಿಗೆ ಗೌರವ ಸಲ್ಲಿಸಿದ್ದೇವೆ. ನಿಮ್ಮ ಓಟಿಗೆ ಘನತೆ ತಂದಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಚಿವರಾದ ಹೆಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್, ಸತೀಶ್ ಜಾರಕಿಹೊಳಿ, ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್ ಸೇಠ್, ಆಶ್ರಯ ಸಮಿತಿ ಅಧ್ಯಕ್ಷ ಯತೀಂದ್ರ ಸಿದ್ದರಾಮಯ್ಯ, ಮಾಜಿ ಶಾಸಕ ಹುಣಸೂರು ಮಂಜುನಾಥ್ ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.