ಬೆಂಗಳೂರು:ಕೋಗಿಲು ಬಡಾವಣೆಯಲ್ಲಿ ನಿರಾಶ್ರಿತರಾದ ಒತ್ತುವರಿದಾರರಿಗೆ ಸೂರು ಕೊಡುವ ಸರ್ಕಾರದ ನಿರ್ಧಾರವನ್ನು ನೇರವಾಗಿಯೇ ವಿರೋಧ ಮಾಡಿದ್ದ ಬಿಜೆಪಿ ಇದೀಗ ಮತ್ತೊಂದ ಹಂತಕ್ಕೆ ಹೆಜ್ಜೆ ಇಟ್ಟಿದ್ದು,ಬೆಂಗಳೂರಿನಲ್ಲಿ ನೆಲೆಸಿರುವ ಉತ್ತರ ಕರ್ನಾಟಕದ ಬಡ ವಲಸೆ ಕಾರ್ಮಿಕರಿಗೆ ವಾಸಯೋಗ್ಯ ಮನೆಗಳನ್ನು ಹಂಚಿಕೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದೆ.
ಈ ಕುರಿತು ಸಿಎಂ ಸಿದ್ದರಾಮಯ್ಯಗೆ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪತ್ರ ಬರೆದಿದ್ದು,ನಮ್ಮ ರಾಜ್ಯದ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ ಸಾವಿರಾರು ಕುಟುಂಬಗಳು ಕಳೆದ ಎರಡು-ಮೂರು ದಶಕಗಳಿಂದ ಜೀವನೋಪಾಯಕ್ಕಾಗಿ ತಮ್ಮ ಹುಟ್ಟೂರನ್ನು ಬಿಟ್ಟು ರಾಜಧಾನಿ ಬೆಂಗಳೂರಿಗೆ ವಲಸೆ ಬಂದಿದ್ದಾರೆ. ಬೆಂಗಳೂರು ಇಂದು ‘ಜಾಗತಿಕ ನಗರ’ವಾಗಿ ಬೆಳೆಯಲು ಈ ಕಾರ್ಮಿಕರ ಬೆವರು ಮತ್ತು ಶ್ರಮದ ಕೊಡುಗೆ ಅಪಾರವಾಗಿದೆ. ಕಟ್ಟಡ ನಿರ್ಮಾಣ, ಸಾರಿಗೆ ಮತ್ತು ಇತರ ಅಸಂಘಟಿತ ವಲಯಗಳಲ್ಲಿ ದಿನವಿಡೀ ದುಡಿಯುವ ಇವರು ನಗರದ ಆರ್ಥಿಕತೆಯ ಬೆನ್ನೆಲುಬಾಗಿದ್ದಾರೆ. ಆದರೆ ದುರದೃಷ್ಟವಶಾತ್, ದಶಕಗಳಿಂದ ಇಲ್ಲಿಯೇ ನೆಲೆಸಿದ್ದರೂ ಇವರಿಗೆ ಕನಿಷ್ಠ ಮೂಲಭೂತ ಸೌಕರ್ಯಗಳಿರುವ ಸ್ವಂತ ಮನೆಯಿಲ್ಲ. ಇಂದಿಗೂ ಇವರು ಪ್ಲಾಸ್ಟಿಕ್ ಶೆಡ್ಗಳಲ್ಲಿ, ಕೊಳಚೆ ಪ್ರದೇಶಗಳಲ್ಲಿ ಅಥವಾ ಬಾಡಿಗೆಯ ಸಣ್ಣ ಕೊಠಡಿಗಳಲ್ಲಿ ಅತ್ಯಂತ ಅಸಹನೀಯ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ಕಡು ಬಡವರಾಗಿದ್ದು, ದಿನದ ದುಡಿಮೆ ಜೀವನ ನಿರ್ವಹಣೆಗೇ ಸಾಕಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸ್ವಂತ ಮನೆಯನ್ನು ಹೊಂದುವುದು ಇವರಿಗೆ ಕನಸಿನ ಮಾತಾಗಿದೆ. ತಮ್ಮ ತಮ್ಮ ಜಿಲ್ಲೆಗಳನ್ನು ಬಿಟ್ಟು ಬಂದು ಬೆಂಗಳೂರನ್ನೇ ನಂಬಿಕೊಂಡಿರುವ ಈ ‘ನಮ್ಮವರ’ ಹಿತರಕ್ಷಣೆ ಕಾಪಾಡುವುದು ರಾಜ್ಯ ಸರ್ಕಾರದ ಆದ್ಯ ಕರ್ತವ್ಯವಾಗಿದೆ ಎಂದು ಉಲ್ಲೇಖಿಸಿದ್ದಾರೆ.
ಬೇಡಿಕೆಗಳು:
1) ವಸತಿ ಯೋಜನೆಗಳಲ್ಲಿ ಆದ್ಯತೆ ನೀಡಬೇಕು ಹಾಗೂ ರಾಜ್ಯ ಸರ್ಕಾರದಿಂದ ನಿರ್ಮಿಸಲಾಗುವ ಮನೆಗಳಲ್ಲಿ ದಶಕಗಳಿಂದ ಬೆಂಗಳೂರಿನಲ್ಲಿ ನೆಲೆಸಿರುವ ಉತ್ತರ ಕರ್ನಾಟಕದ ಕಾರ್ಮಿಕರಿಗೆ ವಿಶೇಷ ಕೋಟಾದಡಿ ಮನೆಗಳನ್ನು ನೀಡಬೇಕು.
2) ಇವರಿಗಾಗಿ ಪ್ರತ್ಯೇಕವಾಗಿ ‘ಕಾರ್ಮಿಕ ವಸತಿ ಸಮುಚ್ಚಯ’ಗಳನ್ನು ನಿರ್ಮಿಸಿ, ಅತ್ಯಂತ ಕಡಿಮೆ ದರದಲ್ಲಿ ಅಥವಾ ಸುಲಭ ಕಂತುಗಳಲ್ಲಿ ಪಡೆಯುವಂತೆ ಹಂಚಿಕೆ ಮಾಡಬೇಕು.
3) ಇವರು ಪ್ರಸ್ತುತ ವಾಸಿಸುತ್ತಿರುವ ಸ್ಥಳಗಳಲ್ಲಿ ಕನಿಷ್ಠ ಕುಡಿಯುವ ನೀರು, ರಸ್ತೆ, ಶಾಲೆ, ಆಸ್ಪತ್ರೆ, ಶೌಚಾಲಯ ಮತ್ತು ವಿದ್ಯುತ್ ಸೌಲಭ್ಯಗಳನ್ನು ತಕ್ಷಣವೇ ಒದಗಿಸಬೇಕು.
ಬೆಂಗಳೂರಿನ ಒಟ್ಟು ಜನಸಂಖ್ಯೆಯಲ್ಲಿ ವಲಸಿಗರೇ ದೊಡ್ಡ ಭಾಗವಾಗಿದ್ದು, ಕರ್ನಾಟಕದ ಇತರ ಜಿಲ್ಲೆಗಳಿಂದ ಬರುವವರೇ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. 2011ರ ಜನಗಣತಿ ಪ್ರಕಾರ, ಸುಮಾರು 9.33 ಲಕ್ಷ ಜನರು ರಾಜ್ಯದ ಇತರ ಜಿಲ್ಲೆಗಳಿಂದ ಬೆಂಗಳೂರಿಗೆ ವಲಸೆ ಬಂದಿದ್ದರು, ಮತ್ತು ಒಟ್ಟಾರೆ ವಲಸಿಗರು ನಗರದ 40% ಕ್ಕಿಂತ ಹೆಚ್ಚು ಜನಸಂಖ್ಯೆಯಲ್ಲಿದ್ದಾರೆ. ಬೆಂಗಳೂರನ್ನು ಕಟ್ಟಿದ ಈ ಕೈಗಳಿಗೆ ಒಂದು ಸುಭದ್ರವಾದ ಚಾವಣಿಯನ್ನು ಒದಗಿಸುವುದು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಅತ್ಯಗತ್ಯವಾಗಿದೆ. ತಾವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಶೀಘ್ರವಾಗಿ ವಿಶೇಷ ಯೋಜನೆಯಡಿ ಇವರಿಗೆ ಮನೆಗಳನ್ನು ಹಂಚಿಕೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಪೂರ್ವಕವಾಗಿ ಮನವಿಯನ್ನು ಸಲ್ಲಿಸುತ್ತಿದ್ದೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

