Fri. Mar 6th, 2026

“ಬೆಂಗಳೂರಿನಲ್ಲಿ ಅಮೆಜಾನ್ ಬೃಹತ್ ಕಚೇರಿ ಉದ್ಘಾಟನೆ: ₹2.9 ಲಕ್ಷ ಕೋಟಿ ಹೂಡಿಕೆ, ಲಕ್ಷಾಂತರ ಉದ್ಯೋಗದ ಭರವಸೆ”

Share this with Friends

ಬೆಂಗಳೂರು: ಸಿಲಿಕಾನ್ ಸಿಟಿಯ ಐಟಿ ಭೂಪಟಕ್ಕೆ ಮತ್ತೊಂದು ಹೆಗ್ಗುರುತು ಸೇರ್ಪಡೆಯಾಗಿದೆ. ಅಮೆಜಾನ್ ಕಂಪನಿಯು ಯಲಹಂಕದ ವಿನಾಯಕ ನಗರದಲ್ಲಿ ನಿರ್ಮಿಸಿರುವ 11 ಲಕ್ಷ ಚದರ ಅಡಿ ವಿಸ್ತೀರ್ಣದ ಅತ್ಯಾಧುನಿಕ ಕಾರ್ಪೊರೇಟ್ ಕಚೇರಿಯನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಸೋಮವಾರ ಲೋಕಾರ್ಪಣೆ ಮಾಡಿದರು.

ಈ ವೇಳೆ ಮಾತನಾಡಿದ ಸಚಿವರು, “ಅಮೆಜಾನ್ ಸಂಸ್ಥೆಯು ಮುಂದಿನ ನಾಲ್ಕು ವರ್ಷಗಳಲ್ಲಿ ಭಾರತದ ಮಾರುಕಟ್ಟೆಯಲ್ಲಿ ಸುಮಾರು 35 ಬಿಲಿಯನ್ ಡಾಲರ್ ಹೂಡಿಕೆ ಮಾಡುವ ಬೃಹತ್ ಯೋಜನೆಯನ್ನು ಹೊಂದಿದೆ. ಈ ಹೂಡಿಕೆಯಿಂದ ದೇಶದ 1.5 ಕೋಟಿ ಸಣ್ಣ ಉದ್ಯಮಿಗಳಿಗೆ ಹೊಸ ಚೈತನ್ಯ ಸಿಗಲಿದ್ದು, ಲಕ್ಷಾಂತರ ಜನರಿಗೆ ಉದ್ಯೋಗದ ಹಾದಿ ಸುಗಮವಾಗಲಿದೆ. ಕರ್ನಾಟಕವು ಈ ಹೂಡಿಕೆಯಲ್ಲಿ ಪ್ರಮುಖ ಪಾಲನ್ನು ನಿರೀಕ್ಷಿಸುತ್ತಿದೆ” ಎಂದು ತಿಳಿಸಿದರು.

ಆರ್ಥಿಕ ಪ್ರಗತಿಯಲ್ಲಿ ಕರ್ನಾಟಕ ಮುಂಚೂಣಿ:

ರಾಜ್ಯದ ಆರ್ಥಿಕ ಸದೃಢತೆಯನ್ನು ಶ್ಲಾಘಿಸಿದ ಸಚಿವರು, ಕರ್ನಾಟಕವು 3.80 ಲಕ್ಷ ರೂ.ಗಳಿಗೂ ಅಧಿಕ ತಲಾ ಆದಾಯದೊಂದಿಗೆ ದೇಶದಲ್ಲೇ ಅಗ್ರಸ್ಥಾನದಲ್ಲಿದೆ ಎಂದರು. ಅಲ್ಲದೆ, ವಾರ್ಷಿಕ 1.6 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹಿಸುವ ಮೂಲಕ ದೇಶದ ಬೊಕ್ಕಸಕ್ಕೆ ಎರಡನೇ ಅತಿ ದೊಡ್ಡ ಕೊಡುಗೆ ನೀಡುವ ರಾಜ್ಯವಾಗಿ ಹೊರಹೊಮ್ಮಿದೆ. ಜಾಗತಿಕ ನಾವೀನ್ಯತಾ ಸೂಚ್ಯಂಕದಲ್ಲಿ ಬೆಂಗಳೂರು ವಿಶ್ವದ 21ನೇ ಸ್ಥಾನಕ್ಕೆ ಏರಿರುವುದು ಹೆಮ್ಮೆಯ ವಿಷಯ ಎಂದು ಅವರು ವಿವರಿಸಿದರು.

ಕೈಗಾರಿಕಾ ಸ್ನೇಹಿ ಮೂಲಸೌಕರ್ಯ:

ದೇಶದ ಒಟ್ಟು ಜಿಸಿಸಿ (GCC) ಕೇಂದ್ರಗಳಲ್ಲಿ ಶೇ. 35ರಷ್ಟು ಪಾಲು ಕರ್ನಾಟಕದ್ದಾಗಿದೆ. ಇ-ಕಾಮರ್ಸ್ ವಲಯಕ್ಕೆ ಅಗತ್ಯವಿರುವ ಗೋದಾಮು ಹಾಗೂ ಶೀತಲಗೃಹಗಳ ಸೌಲಭ್ಯದಲ್ಲಿ ರಾಜ್ಯವು ಮೊದಲ ಸ್ಥಾನದಲ್ಲಿದೆ. ಸರ್ಕಾರವು ರೈಲು ಕಾರಿಡಾರ್ ಮತ್ತು ಲಾಜಿಸ್ಟಿಕ್ಸ್ ಪಾರ್ಕ್‌ಗಳ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದು, ಅಮೆಜಾನ್‌ನಂತಹ ಜಾಗತಿಕ ಸಂಸ್ಥೆಗಳು ಇಲ್ಲಿಯೇ ಉತ್ಪಾದನೆ ನಡೆಸಿ ವಿದೇಶಗಳಿಗೆ ರಫ್ತು ಮಾಡುವಂತಾಗಬೇಕು ಎಂದು ಸಚಿವರು ಆಶಯ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ ಅಮೆಜಾನ್ ಆರಂಭಿಸಿರುವ ಈ 10ನೇ ಕಾರ್ಪೊರೇಟ್ ಕಚೇರಿಯು ರಾಜ್ಯದ ತಾಂತ್ರಿಕ ಮತ್ತು ಆರ್ಥಿಕ ವಲಯಕ್ಕೆ ಹೊಸ ವೇಗ ನೀಡಲಿದೆ ಎಂದು ವಿಶ್ಲೇಷಿಸಲಾಗಿದೆ.

 


Share this with Friends

Related Post