ಬೆಂಗಳೂರು, ಮೇ.21: ರಾತ್ರಿ ಮತ್ತು ಬೆಳಗಿನ ಜಾವ ಲ್ಯಾಪ್ ಟಾಪ್ ಗಳನ್ನು ಕಳ್ಳತನ ಮಾಡುತ್ತಿದ್ದ ಅಂತರ ರಾಜ್ಯ ಕಳ್ಳನನ್ನು ಬಂಧಿಸುವಲ್ಲಿ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿಯಿಂದ ಒಟ್ಟು 25 ಲ್ಯಾಪ್ ಟಾಪ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ 8ನೇ ಕ್ರಾಸ್,ದಯಾನಂದ ಸಾಗರ ಕಾಲೇಜ್ ರೋಡ್ ನಲ್ಲಿ ಅದೇ ಕಾಲೇಜಿನ 3ವಿದ್ಯಾರ್ಥಿಗಳು ರೂಮ್ ಮಾಡಿಕೊಂಡು ಕಾಲೇಜಿಗೆ ಹೋಗುತ್ತಿದ್ದರು.
ಮೇ.5 ರಂದು ರಾತ್ರಿ ಪೂರಾ ಕೆಲಸ ಮಾಡಿ,ಬೆಳಗಿನ ಜಾವ ಅಡುಗೆ ಮಾಡುವ ಕೆಲಸದವನು ಬಂದು ಅಡುಗೆ ಮಾಡುತ್ತಾನೆಂದು ತಿಳಿದು ರೂಮಿನ ಬಾಗಿಲನ್ನು ಲಾಕ್ ಮಾಡದೆ ಹಾಗೆಯೇ ನಿದ್ರೆ ಮಾಡಿದ್ದರು.
ಬೆಳಿಗ್ಗೆ ಎದ್ದು ನೋಡಿದಾಗ ರೂಂ ನಲ್ಲಿದ್ದ ಮೂರು ಲ್ಯಾಪ್ ಟಾಪ್ ಗಳು, ಒಂದು ಮೊಬೈಲ್ ಫೋನ್ ಕಳವಾಗಿರುವುದು ಗೊತ್ತಾಗಿ ತಕ್ಷಣ ಕೆ.ಎಸ್.ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ.
ಪ್ರಕರಣ ದಾಖಲಿಸಿದ ಪೊಲೀಸರು,ಸಿಸಿಟಿವಿ ಯಿಂದ ಮಾಹಿತಿ ಕಲೆಹಾಕಿ, ಕಾಟನ್ ಪೇಟೆಯಲ್ಲಿರುವ ಪಿಜಿ ಯೊಂದರಲ್ಲಿ ತಂಗಿದ್ದ ಆರೋಪಿಯನ್ನು ಪತ್ತೆ ಮಾಡಿದರು. ಆದರೆ ಆತ ಅಲ್ಲಿ ಇರಲಿಲ್ಲ.
ನಂತರ ಇಂದಿರಾ ನಗರದ ಮೆಟ್ರೊ ಪಿಲ್ಲರ್ ಕೆಳಗೆ ಆಂಧ್ರಪ್ರದೇಶದಿಂದ ಬಂದಿರುವ ಅವರ ಸಂಬಂಧಿಕರ ಜೊತೆ ಇದ್ದುದನ್ನು ಕಂಡುಹಿಡಿದು ಆತನನ್ನು ಬಂಧಿಸಿದ್ದಾರೆ.
ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಲ್ಯಾಪ್‌ಟಾಪ್ ಕಳ್ಳತನ ಮಾಡಿದ್ದಾಗಿ ಬಾಯಿಬಿಟ್ಟಿದ್ದಾನೆ,ಜತೆಗೆ ತಾನು ಕಳವು ಮಾಡುತ್ತಿದ್ದ ಲ್ಯಾಪ್‌ಟಾಪ್ ಗಳನ್ನು ತಮಿಳುನಾಡಿನ ಶಂಕರಪುರದ ವ್ಯಕ್ತಿಗೆ ಕೊಟ್ಟಿರುವುದಾಗಿ ಮಾಹಿತಿ ನೀಡಿದ.
ತಕ್ಷಣ ಪೊಲೀಸರು ಆ ವ್ಯಕ್ತಿ ಯನ್ನು ಹಿಡಿದು ಒಟ್ಟು 25 ಲ್ಯಾಪ್ ಟಾಪ್ ಗಳನ್ನು ವಶ ಪಡಿಸಿಕೊಂಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್ ತಿಳಿಸಿದರು.
ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಲೋಕೇಶ್ ಭರಮಪ್ಪ ಜಗಲಾಸರ್ ಮಾರ್ಗದರ್ಶನದಲ್ಲಿ ಸುಬ್ರಹ್ಮಣ್ಯ ಪುರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಗಿರೀಶ್ ಎಸ್.ಬಿ.ನೇತೃತ್ವದಲ್ಲಿ ಕುಮಾರಸ್ವಾಮಿ ಲೇಔಟ್ ಠಾಣೆ ಇನ್ಸ್‌ಪೆಕ್ಟರ್ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.