ಕಾರವಾರ,ಫೆ.24: ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿರುವವರು ದೇಶದ್ರೋಹಿಗಳು, ರೈತರೇ ಅಲ್ಲ ಎಂದು ಸಂಸದ ಅನಂತಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮುಂಡಗೋಡಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಲ್ಲಿ ಪ್ರತಿಭಟನೆಗೆ ದೊಡ್ಡ ದೊಡ್ಡ ಗಾಡಿಗಳಲ್ಲಿ ಟೊಯೋಟಾ ಕಾರಿನಲ್ಲಿ ಬರುತ್ತಾರೆ, ರೈತರ ಬಳಿ ಅಷ್ಟೆಲ್ಲಾ ದುಡ್ಡಿರುತ್ತದಾ ಎಂದು ಪ್ರಶ್ನಿಸಿದರು.
ಪ್ರತಿಭಟನೆ ಮಾಡುತ್ತಿರುವವರು ರೈತರೇ ಅಲ್ಲ, ಇದು ರೈತರ ಹೋರಾಟ ಅಲ್ಲ ದೇಶದ್ರೋಹಿಗಳ ಹೋರಾಟ. ಖಲಿಸ್ತಾನಿಗಳ ಹೋರಾಟ, ರೈತರ ಹೆಸರಿಟ್ಟುಕೊಂಡಿದ್ದಾರೆ,
ಅವರಿಗೆ ಬೇರೆ ದೇಶದವರು ಹಣ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಸಿದ್ದರಾಮುಲ್ಲಾ ಖಾನ್ ಬಳಿ ಹಣವಿಲ್ಲ, ಅಭಿವೃದ್ಧಿ ಯೋಜನೆಗಳಿಗೆ ಶಾಸಕರಿಗೆ ಕೊಡಲು ಹಣ ಇಲ್ಲ, ಹಿಂದುಳಿದವರು, ಎಸ್ಸಿ, ಎಸ್ಟಿ ವರ್ಗದವರಿಗೆ ನೀಡಿದ್ದ 11 ಸಾವಿರ ಕೋಟಿ ರೂ. ನಾಪತ್ತೆಯಾಗಿದೆ. ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.
ಸಿಎಂಗೆ ದುರಹಂಕಾರ, ಓಸಿ ಚೀಟಿ ಬರೆದಂತೆ ಫೈಲ್ ಬರೆಯುತ್ತಾರೆ. ಓಸಿ ಚೀಟಿಗಾದರೂ ಬೆಲೆ ಇರುತ್ತೆ,1 ರೂ. ಕೊಟ್ಟರೆ 80 ರೂ. ಕೊಡುತ್ತಾರೆ. ಲೆಟರ್‌ಗೆ ದುರಹಂಕಾರದಿಂದ ಸಹಿ ಹಾಕುತ್ತಾರೆ ಎಂದು ಅನಂತ್ ಕುಮಾರ್ ಹೆಗಡೆ ವಾಗ್ದಾಳಿ ನಡೆಸಿದರು.