Sat. Mar 14th, 2026

ಯುಕೆಪಿ ಯೋಜನೆಗೆ ಆಂಧ್ರ ತಗಾದೆ: ದೆಹಲಿಯಲ್ಲಿ ರಾಜ್ಯದ ಸಂಸದರ ಸಭೆ ಕರೆದ ಡಿ.ಕೆ. ಶಿವಕುಮಾರ್

Share this with Friends

ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) 3ನೇ ಹಂತದ ಅನುಷ್ಠಾನಕ್ಕೆ ಆಂಧ್ರಪ್ರದೇಶ ಸರ್ಕಾರ ಅಡ್ಡಗಾಲು ಹಾಕುತ್ತಿರುವುದನ್ನು ಖಂಡಿಸಿ, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಕುರಿತು ಚರ್ಚಿಸಲು ದೆಹಲಿಯ ಕರ್ನಾಟಕ ಭವನದಲ್ಲಿ ಮಂಗಳವಾರ ರಾಜ್ಯದ ಎಲ್ಲಾ ಸಂಸದರ ಮಹತ್ವದ ಸಭೆ ಕರೆಯಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಶನಿವಾರ ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಯುಕೆಪಿ ಯೋಜನೆಯಡಿ ಭೂಸ್ವಾಧೀನ ಪ್ರಕ್ರಿಯೆ ನಡೆಸದಂತೆ ಆಂಧ್ರಪ್ರದೇಶವು ಕೇಂದ್ರಕ್ಕೆ ಪತ್ರ ಬರೆದು ಆಕ್ಷೇಪಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ರಾಜ್ಯದ ಸ್ಪಷ್ಟನೆ ಕೇಳಿದೆ. ಆದರೆ, ನಾವು ನ್ಯಾಯಾಧೀಕರಣದ ತೀರ್ಪಿನ ಅನ್ವಯವೇ ನಮ್ಮ ಪಾಲಿನ ನೀರನ್ನು ಬಳಸಿಕೊಳ್ಳಲು ಮುಂದಾಗಿದ್ದೇವೆ. ಈಗಾಗಲೇ ಸುಮಾರು 26 ಸಾವಿರ ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ,” ಎಂದು ಸ್ಪಷ್ಟಪಡಿಸಿದರು.

ತುಂಗಭದ್ರಾ ನೀರಿನ ಪೋಲಿಗೂ ಅಸಹಕಾರ:

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಿಸುವ ಮುನ್ನವೇ ನೀರು ಬಳಕೆಗಾಗಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಆದರೆ ಇದಕ್ಕೆ ಆಂಧ್ರ ಸರ್ಕಾರ ಅನಗತ್ಯ ತಗಾದೆ ತೆಗೆಯುತ್ತಿದೆ. ಅಷ್ಟೇ ಅಲ್ಲದೆ, ತುಂಗಭದ್ರಾ ಅಣೆಕಟ್ಟೆಯಿಂದ ಪ್ರತಿ ವರ್ಷ ವ್ಯರ್ಥವಾಗುತ್ತಿರುವ ಸುಮಾರು 30 ಟಿಎಂಸಿ ನೀರನ್ನು ಉಳಿಸಲು ಪರ್ಯಾಯ ಮಾರ್ಗ ಕಂಡುಕೊಳ್ಳುವ ವಿಚಾರದಲ್ಲೂ ಆಂಧ್ರ ಸಹಕರಿಸುತ್ತಿಲ್ಲ ಎಂದು ಡಿಸಿಎಂ ಅಸಮಾಧಾನ ವ್ಯಕ್ತಪಡಿಸಿದರು.

ಈ ಗಂಭೀರ ವಿಷಯಗಳ ಬಗ್ಗೆ ಕೇಂದ್ರದ ಗಮನ ಸೆಳೆಯಲು ತಾವು ಮತ್ತು ಸಚಿವರಾದ ಎಂ.ಬಿ. ಪಾಟೀಲ್, ಎಚ್.ಕೆ. ಪಾಟೀಲ್ ಹಾಗೂ ಬೋಸರಾಜು ಅವರು ಮಂಗಳವಾರ ದೆಹಲಿಗೆ ತೆರಳುತ್ತಿದ್ದು, ಸಂಸದರ ಬೆಂಬಲದೊಂದಿಗೆ ಕೇಂದ್ರದ ಮೇಲೆ ಒತ್ತಡ ಹೇರಲಾಗುವುದು ಎಂದು ಅವರು ಹೇಳಿದರು.

 


Share this with Friends

Related Post