ಅಹಮದ್ ನಗರ. ಮಾ.22: ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರು ತಮ್ಮ ಕೃತ್ಯಗಳಿಂದಲೇ ಬಂಧನಕ್ಕೆ ಒಳಗಾಗಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅಭಿಪ್ರಾಯಪಟ್ಟಿದ್ಧಾರೆ.ಮಹಾರಾಷ್ಟ್ರದ ಅಹಮದ್ ನಗರದಲ್ಲಿ ಮಾತನಾಡಿದ ಅಣ್ಣಾ ಹಜಾರೆ, ನಾನು ಅರವಿಂದ ಕೇಜ್ರಿವಾಲ್ ಅವರ ವಿಚಾರವಾಗಿ ತುಂಬಾನೇ ಬೇಸರಗೊಂಡಿದ್ಧೇನೆ. ಆತ ನನ್ನೊಂದಿಗೆ ಸೇರಿ ಮದ್ಯದ ವಿರುದ್ಧ ದನಿ ಎತ್ತಿದ್ದರು. ಆದರೆ ತಮ್ಮದೇ ಸರ್ಕಾರ ರಚಿಸಿದ ಬಳಿಕ ಮದ್ಯದ ನೀತಿ ಜಾರಿಗೆ ತರಲು ಹೊರಟರು. ಹೀಗಾಗಿ ಅವರ ಕೆಲಸಗಳೇ ಅವರನ್ನು ಬಂಧನ ಆಗುವಂತೆ ಮಾಡಿದೆ ಎಂದು ಅಣ್ಣಾ ಹಜಾರೆ ಹೇಳಿದ್ದಾರೆ.
ಈ ಕುರಿತು ಇಂದು ಮಹಾರಾಷ್ಟ್ರದ ಅಹಮದ್‌ನಗರದಲ್ಲಿ ಅಣ್ಣಾ ಹಜಾರೆ ಮಾತನಾಡಿ, ಅರವಿಂದ್ ಕೇಜ್ರಿವಾಲ್ ನನ್ನೊಂದಿಗೆ ಕೆಲಸ ಮಾಡುತ್ತಿದ್ದರು. ಅಲ್ಲದೇ, ಸ್ವತಃ ತಾವೇ ಮದ್ಯದ ವಿರುದ್ಧ ದನಿ ಎತ್ತುತ್ತಿದ್ದರು. ಈಗ ಅದೇ ಅರವಿಂದ್ ಕೇಜ್ರಿವಾಲ್ ಮದ್ಯ ನೀತಿಗಳನ್ನು ಮಾಡಿರುವುದಕ್ಕೆ ನನಗೆ ತುಂಬಾ ಬೇಸರವಾಗಿದೆ. ಅವರ ಬಂಧನಕ್ಕೆ ಅವರದೇ ಆದ ಕೃತ್ಯಗಳೇ ಕಾರಣ ಎಂದು ತಿಳಿಸಿದ್ದಾರೆ.
ಅಲ್ಲದೇ, ಮದ್ಯ ನೀತಿ ಬಗ್ಗೆ ಕೇಜ್ರಿವಾಲ್ ಅವರಿಗೆ ನಾನು ಎರಡು ಬಾರಿ ಪತ್ರ ಬರೆದಿದ್ದೆ ಎಂದು ಹಜಾರೆ ಮಾಹಿತಿ ನೀಡಿದ್ದಾರೆ. ಆ ನೀತಿ ಕೆಟ್ಟದ್ದೋ ಅಥವಾ ಒಳ್ಳೆಯದೋ ಎಂಬುದು ಬೇರೆ ವಿಷಯ. ಆದರೆ, ಮದ್ಯಪಾನ ಕೆಟ್ಟದ್ದಾಗಿರುವುದರಿಂದ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚುತ್ತಿದೆ. ಅದೇ ಮದ್ಯ ಕೊಲೆಗೂ ಕಾರಣವಾಗುತ್ತಿದೆ. ಈಗ ಅವರನ್ನೇ ಬಂಧಿಸಲಾಗಿದ್ದು, ಇದನ್ನು ಅವರು ಮತ್ತು ಅವರ ಸರ್ಕಾರ ನೋಡಿಕೊಳ್ಳಲಿದೆ. ಹಾಗಾಗಿ ಬಂಧಿಸಿದ್ದಕ್ಕೆ ನನಗೆ ಬೇಸರವಿಲ್ಲ ಎಂದು ವಿವರಿಸಿದ್ದಾರೆ.