ಶಿವಮೊಗ್ಗ: ಚಿತ್ರದುರ್ಗದ ಸಮೀಪ ನಡೆದ ಖಾಸಗಿ ಸ್ಲೀಪರ್ ಕೋಚ್ ಬಸ್ ಅಗ್ನಿ ಅವಘಡ ಮಾಸುವ ಮುನ್ನವೇ ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೊಂದು ಖಾಸಗಿ ಸ್ಲೀಪರ್ ಬಸ್ ಹೊತ್ತಿ ಉರಿದ ಘಟನೆ ನಡೆದಿದೆ.ಅದೃಷ್ಟವಶಾತ್ ಎಲ್ಲಾ ಪ್ರಯಾಣಿಕರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸೂಡುರು ಬಳಿ ನಸುಕಿನ ವೇಳೆ ಶ್ರೀ ಅನ್ನಪೂರ್ಣೇಶ್ವರಿ ಟ್ರಾವೆಲ್ಸ್ ಹೆಸರಿನ ಖಾಸಗಿ ಸ್ಲೀಪರ್ ಬಸ್ ಅಗ್ನಿಗಾಹುತಿಯಾಗಿದೆ. ನಿಟ್ಟೂರಿನಿಂದ ಬೆಂಗಳೂರಿಗೆ ಹೊರಟಿದ್ದ ಈ ಬಸ್‌ನಲ್ಲಿ ಅರಸಾಳು ಮತ್ತು ಸೂಡೂರು ಗ್ರಾಮಗಳ ನಡುವೆ ಬೆಂಕಿ ಕಾಣಿಸಿಕೊಂಡಿದ್ದು, ಇದನ್ನು ಗಮನಿಸಿದ ಬಸ್ ಚಾಲಕ ಕೂಡಲೇ ಬಸ್ ನಿಲ್ಲಿಸುವ ಪ್ರಯತ್ನ ಮಾಡಿದಾಗ ಬಸ್ ಮರಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಬಸ್ ನಲ್ಲಿ ಚಾಲಕ,ಸಿಬ್ಬಂದಿ ಸೇರಿ ಅಂದಾಜು 40 ಜನರಿದ್ದರು ಎನ್ನಲಾಗಿದೆ, ಎಲ್ಲರೂ ಸುರಕ್ಷಿತವಾಗಿ ಬಸ್ ನಿಂದ ಕೆಳಗಿಳಿದಿದ್ದಾರೆ. ಮೂರ್ನಾಲ್ಕು ಜನರಿಗೆ ಮಾತ್ರ ಸಣ್ಣಪುಟ್ಟ ಸುಟ್ಟ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಖಾಸಗಿ ಬಸ್ ಸಂಪೂರ್ಣ ಹೊತ್ತಿ ಉರಿದಿದ್ದು, ಅಗ್ನಿಶಾಮಕ ದಳ ಬಂದು ಅಗ್ನಿ ನಂತಿಸಿತಾದರೂ ಅಷ್ಟರಲ್ಲಿ ಇಡೀ ಬಸ್ ಸುಟ್ಟು ಕರಕಲಾಗಿತ್ತು.ಈ ಸಂಬಂಧ ರಿಪ್ಪನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದ್ದು ತನಿಖೆ ಆರಂಭಿಸಲಾಗಿದೆ. ಘಟನೆ ಕುರಿತು ಇನ್ನು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

