ಬೆಂಗಳೂರು, ಮಾ.4: ಗುತ್ತಿಗೆದಾರರ ಬಾಕಿ ಬಿಲ್ ಬಿಡುಗಡೆ ಮಾಡಲು ನಾನು ಲಂಚ ಕೇಳಿದ್ದೇನೆ ಎಂದು ಯಾವುದೇ ಗುತ್ತಿಗೆದಾರ ಹೇಳಿದರೆ ಅಂದೇ ನಾನು ರಾಜೀನಾಮೆ ನೀಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಅರಮನೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಸಿಎಂ, ನನ್ನ ರಾಜಕೀಯ ಜೀವನದಲ್ಲಿ ಲಂಚ ಕೇಳಿದ್ದೇ ಇಲ್ಲ ಎಂದು ಖಡಕ್ಕಾಗಿ ಹೇಳಿದರು.
ಗುತ್ತಿಗೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿರುವುದನ್ನು ನಿಧಾನಕ್ಕೆ ಕಡಿಮೆ ಮಾಡಬೇಕಾಗುತ್ತದೆ ನಾಡಿನ ಅಭಿವೃದ್ಧಿಯಲ್ಲಿ ಗುತ್ತಿಗೆದಾರರ ಪಾತ್ರ ಪ್ರಮುಖವೂ ಹೌದು ಹಾಗಾಗಿ ಸರ್ಕಾರದ ಜೊತೆ ಗುತ್ತಿಗೆದಾರರು ಕೈಜೋಡಿಸಬೇಕು ಮತ್ತು ಕೆಲಸದಲ್ಲಿ ಪಾರದರ್ಶಕತೆಯನ್ನು ಪಾಲಿಸಬೇಕು ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ನನ್ನನ್ನು ಹಲವಾರು ಬಾರಿ ಭೇಟಿ ಮಾಡಿದ್ದಾರೆ ಮತ್ತು ಗುತ್ತಿಗೆಯಲ್ಲಿ ಪ್ಯಾಕೇಜ್ ಪದ್ಧತಿಯನ್ನು ರದ್ದು ಮಾಡಬೇಕು ಎಂದು ಪದೇಪದೇ ಮನವಿ ಮಾಡಿದ್ದಾರೆ ಎಂದು ಹೇಳಿದರು.
ಗುತ್ತಿಗೆದಾರರ ಬಾಕಿ ಬಿಲ್ಲನ್ನು ಹಂತ ಹಂತವಾಗಿ ಬಿಡುಗಡೆ ಮಾಡಲಾಗುವುದು, ಅವರು ಕೆಲಸ ಮಾಡಿದ್ದಾರೆ, ಕೆಲಸಕ್ಕೆ ಪ್ರತಿಫಲ ಇರಲೇಬೇಕು, ಆದರೆ ಹಣ ಇಲ್ಲದೆ ಇದ್ದರೂ ಕೆಲಸ ಮಾಡಲು ಹೋಗಬಾರದು ಮೂರನೇ ಒಂದು ಭಾಗ ಅನುದಾನ ಇದ್ದರೆ ಮಾತ್ರ ಕೆಲಸ ಮಾಡಬೇಕು ಇಲ್ಲದೆ ಹೋದರೆ ನಾನೇ ಹೇಳಿದರೂ ನೀವು ಕೆಲಸ ಮಾಡಬಾರದು ಎಂದು ಸಿಎಂ ಸಲಹೆ ನೀಡಿದರು.
ಶೇ 40ರಷ್ಟು ಕಮಿಷನ್ ವಿಚಾರಣೆ ಸಂಬಂಧ ನಾಗ ಮೋಹನ್ ದಾಸ್ ನೇತೃತ್ವದ ಆಯೋಗ ರಚನೆ ಮಾಡಲಾಗಿತ್ತು ಆದರೆ ಆಯೋಗ ಇನ್ನೂ ವರದಿ ನೀಡಿಲ್ಲ ವರದಿ ಬಂದ ನಂತರ ಶೇ 40ರಷ್ಟು ಕಮಿಷನ್ ಪಡೆದಿರುವುದು ಗೊತ್ತಾದರೆ ಕ್ರಮ ಖಚಿತ ಎಂದು ಸಿದ್ದರಾಮಯ್ಯ ತಿಳಿಸಿದರು.
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಚಿವರುಗಳಾದ ಸತೀಶ್ ಜಾರಕಿಹೊಳಿ, ದಿನೇಶ್ ಗುಂಡೂರಾವ್, ಜಮೀರ್ ಅಹ್ಮದ್ ಖಾನ್, ಎನ್. ಎಸ್ ಬೋಸರಾಜ್,
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ, ಮಂಜುನಾಥ್ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.