Fri. Nov 1st, 2024

ಗ್ಯಾರಂಟಿಗಳ ಹೊರತಾಗಿ ಅಭಿವೃದ್ಧಿಗೂ ಹಣ ಮೀಸಲಿಟ್ಟು ಖರ್ಚು ಮಾಡಿದ್ದೇವೆ:ಸಿಎಂ

Share this with Friends

ಬೆಂಗಳೂರು, ಮೇ. 20: ಬಿಜೆಪಿಯ ನಿರಂತರ ಅಪಪ್ರಚಾರದ ನಡುವೆಯೂ ಗ್ಯಾರಂಟಿಗಳು ಜನರ ಮನೆ ಮನೆ ತಲುಪಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಸರ್ಕಾರ ವರ್ಷ ಪೂರೈಸಿದ ಸಂದರ್ಭವಾಗಿ ಬೆಂಗಳೂರು ಪ್ರೆಸ್ ಕ್ಲಬ್ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಸಿಎಂ,ಗ್ಯಾರಂಟಿಗಳ ಹೊರತಾಗಿ ಅಭಿವೃದ್ಧಿಗೂ ಹಣ ಮೀಸಲಿಟ್ಟು ಖರ್ಚು ಮಾಡಿದ್ದೇವೆ ಎಂದು ಹೇಳಿದರು.

ವಿಜಯೇಂದ್ರ, ಆರ್.ಅಶೋಕ್ ಗೆ ಆರ್ಥಿಕತೆ ಅರ್ಥ ಆಗಲ್ಲ, ಹಾಗಾಗಿ ಖಜಾನೆ ಖಾಲಿ ಆಗಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ನಾವು ಗ್ಯಾರಂಟಿಯೇತರ ಅಭಿವೃದ್ಧಿ ಕಾರ್ಯಗಳಿಗೆ
54374 ಕೋಟಿ ಖರ್ಚು ಮಾಡುವುದಾಗಿ ಬಜೆಟ್ ನಲ್ಲಿ ಹೇಳಿದ್ದೆವು, ಆದರೆ 56274 ಕೋಟಿ ಖರ್ಚು ಮಾಡಿದ್ದೇವೆ ಎಂದು ಅಂಕಿ ಅಂಶಗಳೊಂದಿಗೆ ವಿವರಿಸಿದರು.

ಸಮಾಜ ಕಲ್ಯಾಣಕ್ಕಾಗಿ ಪರಿಶಿಷ್ಟ ಜಾತಿ ವರ್ಗದ ಗುತ್ತಿಗೆದಾರರಿಗೆ ಒಂದು ಕೋಟಿವರೆಗಿನ ಕಾಮಗಾರಿಗೆ ಮೀಸಲಾತಿ, ಹಿಂದುಳಿದವರಿಗೆ ಮೀಸಲಾತಿ ನೀಡಿದೆವು.ಎಸ್ ಸಿ ಎಸ್ ಪಿ-ಟಿಎಸ್ ಪಿ ಕಾಯ್ದೆ ಮಾಡಿದ್ದು ನಮ್ಮ ಸರ್ಕಾರ, ಮೋದಿ ಭಾಷಣದಲ್ಲಿ ಸುಳ್ಳು ಹೇಳುವುದನ್ನು ಬಿಟ್ಟು ಈ ಕಾಯ್ದೆಯನ್ನು ಬಿಜೆಪಿ ಆಡಳಿತದ ಸರ್ಕಾರಗಳು ಏಕೆ ಜಾರಿ ಮಾಡಿಲ್ಲ ಇದಕ್ಕೆ ಉತ್ತರಿಸಲಿ ಎಂದು ಸಿಎಂ ಸವಾಲು ಹಾಕಿದರು.

ಚಿನ್ನಪ್ಪರೆಡ್ಡಿ ಆಯೋಗದ ವರದಿಯಂತೆ 30 ವರ್ಷದಿಂದ ರಾಜ್ಯದಲ್ಲಿ ಮುಸ್ಲಿಂ ಮೀಸಲಾತಿ ಜಾರಿಯಲ್ಲಿದೆ. ಬೊಮ್ಮಾಯಿ ಸರ್ಕಾರ ಕೂಡ ಸುಪ್ರೀಂಕೋರ್ಟ್ ನಲ್ಲಿ ಅಫಿಡವಿಟ್ ಸಲ್ಲಿಸಿ ಮುಸ್ಲೀಮರ ಮೀಸಲಾತಿ ರದ್ದು ಮಾಡುವುದಿಲ್ಲ ಎಂದು ಒಪ್ಪಿಕೊಂಡಿದೆ. ಆದರೂ ಮೋದಿ ಭಾಷಣಗಳಲ್ಲಿ ಸುಳ್ಳು ಹೇಳುತ್ತಾ ತಿರುಗುತ್ತಿದ್ದಾರೆ,ನಾವು ಯಾರ ಮೀಸಲಾತಿಯನ್ನೂ ಕಿತ್ತುಕೊಂಡಿಲ್ಲ,ಹಾಗಾಗಿ ಮೋದಿ ಹೇಳುತ್ತಿರುವುದು ಅಪ್ಪಟ ಸುಳ್ಳು ಎಂದು ಹೇಳಿದರು.

ನಮ್ಮ‌ಸರ್ಕಾರದಲ್ಲಿ ಆರೋಗ್ಯ, ಶಿಕ್ಷಣ, ನೀರಾವರಿ, ಸಮಾಜ ಕಲ್ಯಾಣ, ಕೃಷಿ ಸೇರಿ ಎಲ್ಲಾ ಇಲಾಖೆಗಳಲ್ಲೂ ಅಭಿವೃದ್ಧಿ ಕೆಲಸಗಳು ಚೆನ್ನಾಗಿ ನಡೆಯುತ್ತಿವೆ ಎಂದು ತಿಳಿಸಿದರು.

ಬಿಜೆಪಿಯ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿ ನರಳುತ್ತಿದ್ದ ಮಧ್ಯಮ ವರ್ಗ ಮತ್ತು ಬಡವರ ಕೊಳ್ಳುವ ಶಕ್ತಿ ಹೆಚ್ಚಿಸಲು ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ ಎಂದು ಸಿದ್ದು ತಿಳಿಸಿದರು.

ಪ್ರಮಾಣವಚನ ಸ್ವೀಕರಿಸಿದ ದಿನದಿಂದಲೇ ಚುನಾವಣೆಯಲ್ಲಿ ಕೊಟ್ಟ ಆಶ್ವಾಸನೆ, ಗ್ಯಾರಂಟಿಗಳ ಜಾರಿಗೆ ಕ್ರಮ ತೆಗೆದುಕೊಂಡು ಐದಕ್ಕೆ ಐದೂ ಜಾರಿ ಮಾಡಿದ್ದೇವೆ,ಅನ್ನಭಾಗ್ಯ ಯೋಜನೆಗೆ ನಾವು ಹಣ ಕೊಟ್ಟರೂ ಅಕ್ಕಿ ಕೊಡದೆ ಕೇಂದ್ರ ಸರ್ಕಾರ ಸತಾಯಿಸಿತು ಅಕ್ಕಿ ಸಂಗ್ರಹ ಇದ್ದರೂ ಕೊಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಮ್ಮ ಅವಧಿಯಲ್ಲಿ ಭ್ರಷ್ಟಾಚಾರ ಸಂಪೂರ್ಣವಾಗಿ ನಿಂತಿದೆ ಎಂದು ಹೇಳುವುದಿಲ್ಲ, ಆದರೆ ಪ್ರಮಾಣ ಕಡಿಮೆ ಮಾಡಲು ನಿಷ್ಠುರವಾಗಿ ಕ್ರಮ ತೆಗೆದುಕೊಳ್ಳುತ್ತಿದ್ದೇವೆ,ಶೇ 40 ಕುರಿತು ತನಿಖೆ ಪ್ರಾರಂಭಿಸಿದ್ದೇವೆ ಎಂದು ಇದೇ ವೇಳೆ ಸಿದ್ದರಾಮಯ್ಯ ಹೇಳಿದರು.

ನೇಹಾ ಕೊಲೆ ಪ್ರಕರಣದ ಆರೋಪಿ ಬಂಧಿತನಾಗಿ ತ್ವರಿತ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪನೆ ಆಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಕೊಲೆಗಳ ಪ್ರಮಾಣ ಕಡಿಮೆ ಆಗಿದೆ ಎಂದು ಅಂಕಿ ಅಂಶಗಳ ಸಹಿತ ಹೇಳಿ ಆದರೂ ಅಧಿಕಾರಿಗಳಿಗೆ ಅಪರಾಧ ತಡೆಗಟ್ಟಲು ಕಟ್ಟು ನಿಟ್ಟಿನ ಸೂಚನೆ ನೀಡಿದ್ದೇವೆ ಎಂದು ತಿಳಿಸಿದರು.

ಜಾತಿಗಣತಿ ವರದಿ ಸ್ವೀಕರಿಸಬೇಡಿ ಎಂದು ಒತ್ತಡ ಹೇರಿದರು ಆದರೆ, ಸಾಮಾಜಿಕ ನ್ಯಾಯ, ಸರ್ವರಿಗೂ ಸಮಪಾಲು, ಸಮಬಾಳು ಎನ್ನುವ ಮೌಲ್ಯ ಕಾಪಾಡಲು ವರದಿ ಸ್ವೀಕರಿಸಿದೆವು,ಆರ್ಥಿಕವಾಗಿ, ಸಾಮಾಜಿಕವಾಗಿ ದುರ್ಬಲರನ್ನು ಪತ್ತೆ ಹಚ್ಚಲು ಜಾತಿ ಗಣತಿ,ಸಾಮಾಜಿಕ ಆರ್ಥಿಕ ಸಮೀಕ್ಷೆ ಅತ್ಯಗತ್ಯ,ಆದ್ದರಿಂದ ನಾವು ಜಾತಿಗಣತಿ ಮಾಡಿಸಿ ವರದಿ ಸ್ವೀಕರಿಸಿದ್ದು ಈ ವರದಿಯಿಂದ ಯಾವುದೇ ಸಮುದಾಯಕ್ಕೂ ತೊಂದರೆ ಮಾಡುವುದಿಲ್ಲ,
ನಾವು ಜಾತಿಗಣತಿ ವರದಿಯನ್ನು ನಾವಿನ್ನೂ ನೋಡಿಲ್ಲ ಕ್ಯಾಬಿನೆಟ್ ಮುಂದೆ ಇಟ್ಟು ನಂತರ‌ ಈ ಬಗ್ಗೆ ತೀರ್ಮಾನಿಸುತ್ತೇವೆ ಎಂದು ಹೇಳಿದರು.

ರಾಜ್ಯ ಭೀಕರ ಪರಿಹಾರಕ್ಕೆ ತುತ್ತಾದಾಗಲೂ ರಾಜ್ಯದ ಪಾಲಿನ ಬರ ಪರಿಹಾರವನ್ನು ಕೇಂದ್ರ ಕೊಡಲಿಲ್ಲ. ನಾವು ನಮ್ಮ ಪಾಲು ಕೇಳಲು ಪದೇ ಪದೇ ಕೇಂದ್ರಕ್ಕೆ ಹೋಗಿ ಮನವಿ ಮಾಡಿದರೂ ಕೊಡಲಿಲ್ಲ. ನಾನೇ ಪ್ರಧಾನಿ ಮತ್ತು ಅಮಿತ್ ಶಾ ಅವರಿಗೆ ಮನವಿ ಕೊಟ್ಟೆ. ಆದರೂ ಪ್ರಯೋಜನ ಆಗಲಿಲ್ಲ ಹೀಗಾಗಿ ಸುಪ್ರೀಂಕೋರ್ಟ್ ಮೊರೆ ಹೋಗಬೇಕಾಯಿತು,ಕೇಂದ್ರದ ಅಸಹಕಾರದ ನಡುವೆಯೂ ನಾವು ರಾಜ್ಯದ ಜನತೆಯ ಕೈ ಬಿಡಲಿಲ್ಲ ಪರಿಹಾರ ಕೊಟ್ಟೆವು ಎಂದು ಸಿದ್ದರಾಮಯ್ಯ ಸಮರ್ಥಿಸಿಕೊಂಡರು.

ಬಿಜೆಪಿಯ ದೇವರಾಜೇಗೌಡರೇ ಮೊದಲಿಗೆ ಪತ್ರಿಕಾಗೋಷ್ಠಿ ನಡೆಸಿದ್ದರು,ಅತ್ಯಾಚಾರಕ್ಕೆ ಒಳಗಾದವರು ದೂರು ಕೊಟ್ಟರು, ಆರು ತಿಂಗಳ ಮೊದಲೇ ಬಿಜೆಪಿಗೆ ಆ ವಿಷಯ ಗೊತ್ತಿತ್ತು, ಆದರೂ ಪ್ರಜ್ವಲ್ ಗೆ ಟಿಕೆಟ್ ಕೊಟ್ಟರು,ಪ್ರಧಾನಿಯೇ ಬಂದು ಪ್ರಜ್ವಲ್ ಗೆಲ್ಲಿಸಲು ಭಾಷಣ ಮಾಡಿ ಹೋದರು ಎಂದು ಸಿದ್ದರಾಮಯ್ಯ ಪ್ರಶ್ನೆಗೆ ಉತ್ತರಿಸಿದರು.


Share this with Friends

Related Post