Sat. Mar 14th, 2026

ಮಂಡ್ಯಕ್ಕೆ ಶೀಘ್ರದಲ್ಲೇ ‘ARAI’ ಪರೀಕ್ಷಾ ಕೇಂದ್ರ: ₹14 ಕೋಟಿ ವೆಚ್ಚದ ಕ್ರೀಡಾಂಗಣಕ್ಕೆ ಕುಮಾರಸ್ವಾಮಿ ಶಂಕುಸ್ಥಾಪನೆ

Share this with Friends

ಮಂಡ್ಯ: ಜಿಲ್ಲೆಯ ಕೈಗಾರಿಕಾ ಅಭಿವೃದ್ಧಿಗೆ ಪೂರಕವಾಗಿ ‘ಆಟೋಮೊಟಿವ್ ರಿಸರ್ಚ್ ಅಸೋಸಿಯೇಷನ್‌ ಆಫ್ ಇಂಡಿಯಾ’ (ARAI) ಪರೀಕ್ಷಾ ಕೇಂದ್ರವನ್ನು ಶೀಘ್ರದಲ್ಲೇ ಸ್ಥಾಪಿಸಲಾಗುವುದು ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.

ನಗರದ ವಿಸಿ ಫಾರಂನಲ್ಲಿ ‘ಖೇಲೋ ಇಂಡಿಯಾ’ ಯೋಜನೆಯಡಿ ₹14 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸುಸಜ್ಜಿತ ಒಳಾಂಗಣ ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ವೇಗ ಪಡೆದುಕೊಂಡ ARAI ಪ್ರಕ್ರಿಯೆ:

“ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ಕೈಗಾರಿಕೆಗಳನ್ನು ತರುವ ನನ್ನ ಭರವಸೆಯಂತೆ ಕೆಲಸಗಳು ನಡೆಯುತ್ತಿವೆ. ARAI ಕೇಂದ್ರಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳು ದೆಹಲಿ ಮಟ್ಟದಲ್ಲಿ ವೇಗವಾಗಿ ನಡೆಯುತ್ತಿದ್ದು, ಜಾಗ ಹಂಚಿಕೆಯ ಪತ್ರ ಸಿಕ್ಕ ತಕ್ಷಣ ತಜ್ಞರ ತಂಡ ಸ್ಥಳ ಪರಿಶೀಲನೆ ನಡೆಸಲಿದೆ. ನುಡಿದಂತೆ ನಡೆಯುವ ನಿಟ್ಟಿನಲ್ಲಿ ನಾನು ಕಾರ್ಯೋನ್ಮುಖನಾಗಿದ್ದೇನೆ” ಎಂದು ಸಚಿವರು ತಿಳಿಸಿದರು.

ಕ್ರೀಡಾಪಟುಗಳ ಕನಸು ನನಸು:

ಜಿಲ್ಲೆಯಲ್ಲಿ ಸುಸಜ್ಜಿತ ಒಳಾಂಗಣ ಕ್ರೀಡಾಂಗಣ ಬೇಕೆಂಬ ದಶಕಗಳ ಬೇಡಿಕೆಗೆ ಈಗ ಚಾಲನೆ ಸಿಕ್ಕಿದೆ. ಭೂಮಿಪೂಜೆ ಮುಗಿದಿದ್ದು, ಕಾಮಗಾರಿಯನ್ನು ಅತ್ಯಂತ ವೇಗವಾಗಿ ಪೂರ್ಣಗೊಳಿಸಿ ಕ್ರೀಡಾಪಟುಗಳ ಬಳಕೆಗೆ ಮುಕ್ತಗೊಳಿಸಲಾಗುವುದು ಎಂದು ಅವರು ಹೇಳಿದರು

ಮಂಡ್ಯದ ಅಭಿವೃದ್ಧಿಗೆ ಕಾರ್ಪೊರೇಟ್ ಸಂಸ್ಥೆಗಳ ಸಾಥ್: ಸಿಎಸ್‌ಆರ್ ನಿಧಿಯಲ್ಲಿ ಸೌಲಭ್ಯ ವಿತರಿಸಿದ ಸಚಿವ  ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಕೇವಲ ಸರ್ಕಾರಿ ಅನುದಾನವಷ್ಟೇ ಅಲ್ಲದೆ, ಪ್ರಮುಖ ಕಾರ್ಪೊರೇಟ್ ಕಂಪನಿಗಳು ತಮ್ಮ ಸಿಎಸ್‌ಆರ್ (CSR) ನಿಧಿಯ ಮೂಲಕ ದೊಡ್ಡ ಮಟ್ಟದ ಕೊಡುಗೆ ನೀಡಿವೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಶ್ಲಾಘಿಸಿದರು. ಟಿಸಿಎಸ್, ಇನ್ಫೋಸಿಸ್, ಹಿಂದೂಜಾ, ಹೆಚ್‌ಎಂಟಿ ಹಾಗೂ ಕೇಂದ್ರ ಉಕ್ಕು ಸಚಿವಾಲಯದ ಅಧೀನದ ಸೈಲ್ (SAIL) ಸಂಸ್ಥೆಗಳು ಜಿಲ್ಲೆಯ ಪ್ರಗತಿಗೆ ಕೈಜೋಡಿಸಿವೆ ಎಂದರು.

ಕೊಡುಗೆಗಳ ವಿವರ:

ಈ ಕಂಪನಿಗಳ ಸಹಯೋಗದೊಂದಿಗೆ ಜಿಲ್ಲೆಯ 380ಕ್ಕೂ ಹೆಚ್ಚು ವಿಕಲಚೇತನ ಫಲಾನುಭವಿಗಳಿಗೆ ಎಲೆಕ್ಟ್ರಿಕ್ ವಾಹನಗಳನ್ನು ವಿತರಿಸಲಾಗಿದೆ. ಅಲ್ಲದೆ, ಮಂಡ್ಯದ 600 ಶಾಲೆಗಳಿಗೆ ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್‌ಗಳನ್ನು ನೀಡಲಾಗಿದ್ದು, ಮಂಡ್ಯದ ಮಿಮ್ಸ್ (MIMS) ಆಸ್ಪತ್ರೆಗೆ ಸುಸಜ್ಜಿತ ಆಂಬ್ಯುಲೆನ್ಸ್ ಸೌಲಭ್ಯ ಕಲ್ಪಿಸಲಾಗಿದೆ. ಕಾರ್ಪೊರೇಟ್ ಕಂಪನಿಗಳ ಈ ಸಾಮಾಜಿಕ ಕಳಕಳಿ ಜಿಲ್ಲೆಯ ಜನರಿಗೆ ವರದಾನವಾಗಲಿದೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

ಯುವಜನ ಸಬಲೀಕರಣಕ್ಕೆ ಒತ್ತು:

“ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಯುವಜನರ ಕಲ್ಯಾಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಪ್ರತಿ ಸಂಪುಟ ಸಭೆಯಲ್ಲೂ ಪ್ರಧಾನಿಗಳು ಯುವಶಕ್ತಿಯ ಸಬಲೀಕರಣಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ. ಅವರ ಆಶಯದಂತೆ ಕ್ರೀಡಾ ಸಚಿವ ಮನ್ಸೂಖ್ ಮಾಂಡವಿಯಾ ಅವರು ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುತ್ತಿದ್ದಾರೆ” ಎಂದು ಅವರು ನುಡಿದರು.

ಉದ್ಯೋಗ ಸೃಷ್ಟಿಯ ಭರವಸೆ:

ಈಗಾಗಲೇ ಸಿಎಸ್‌ಆರ್ ಅನುದಾನದಡಿ ಜಿಲ್ಲೆಯ 96 ಶಾಲೆಗಳ ನವೀಕರಣಕ್ಕೆ ಚಾಲನೆ ನೀಡಲಾಗಿದೆ. “ಮಂಡ್ಯದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ಸ್ಥಳೀಯ ಯುವಕರಿಗೆ ಉದ್ಯೋಗ ನೀಡುವ ನನ್ನ ಮಾತು ಹುಸಿಗೊಳಿಸುವುದಿಲ್ಲ. ಬೃಹತ್ ಕೈಗಾರಿಕಾ ಇಲಾಖೆಯ ವತಿಯಿಂದಲೇ ARAI ಘಟಕ ಸ್ಥಾಪನೆಯಾಗಲಿದ್ದು, ಇದರಿಂದ ಮಂಡ್ಯ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳ ಯುವಜನರಿಗೆ ಉದ್ಯೋಗಾವಕಾಶಗಳು ತೆರೆಯಲಿವೆ” ಎಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.


Share this with Friends

Related Post