ಮೈಸೂರು,ಏ.25: ಒಂಟಿ ಮಹಿಳೆಯರ ಸರ ದೋಚುತ್ತಿದ್ದ ಕಳ್ಳನನ್ನು ಕುವೆಂಪುನಗರ ಠಾಣೆ ಪೊಲೀಸರು ಸೆರೆಹಿಡಿದಿದ್ದಾರೆ.
ವಾಕಿಂಗ್ ಮಾಡುತ್ತಿದ್ದ ವೃದ್ದೆಯ ಚಿನ್ನದ ಸರ ಕಸಿದು ಪರಾರಿಯಾಗಿದ್ದ ಆರೋಪಿಯನ್ನ ಬಂಧಿಸುವಲ್ಲಿ ಕುವೆಂಪುನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಚಾಮರಾಜನಗರ ನಿವಾಸಿ ರಂಗಸ್ವಾಮಿ ಬಂಧಿತ ಆರೊಪಿ.ಆತನಿಂದ 3.30 ಲಕ್ಷ ಮೌಲ್ಯದ 55 ಗ್ರಾಂ ತೂಕದ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ ಬೈಕ್ ವಶಪಡಿಸಿಕೊಳ್ಳಲಾಗಿದೆ.
ಏಪ್ರಿಲ್ 23 ರ ಬೆಳಿಗ್ಗೆ ಮಧುವನ ಪಾರ್ಕ್ ಬಳಿ ಮಹದೇವಮ್ಮ ಅವರು ವಾಕಿಂಗ್ ಮಾಡುತ್ತಿದ್ದಾಗ ಬೈಕ್ ನಲ್ಲಿ ಬಂದ ರಂಗಸ್ವಾಮಿ ಆಕೆಯ ಚಿನ್ನದ ಸರ ಕಿತ್ತು ಪರಾರಿಯಾಗಿದ್ದ.
ಅದೇ ದಿನ ರಾತ್ರಿ ಗಸ್ತಿನಲ್ಲಿದ್ದ ಸಿಬ್ಬಂದಿಗಳಾದ ಶ್ರೀನಿವಾಸ್ ಹಾಗೂ ಮುಕುಂದೇಗೌಡ ಅವರು ದೇವಯ್ಯನಹುಂಡಿ ಬಳಿ ಕಲ್ಯಾಣಮಂಟಪದ ಸಮೀಪ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡುತ್ತಿದ್ದ ರಂಗಸ್ವಾಮಿಯನ್ನ ವಶಕ್ಕೆ ಪಡೆದು ಆತನ ಬೆರಳಚ್ಚು ಮುದ್ರೆಗಳನ್ನ ಪರಿಶೀಲಿಸಿದಾಗ ಹಳೇ ಕಳ್ಳ ಎಂದು ಧೃಢಪಟ್ಟಿದೆ.ವಿಚಾರಣೆ ವೇಳೆ ವೃದ್ದೆಯ ಸರ ದೋಚಿದ್ದಾಗಿ ಒಪ್ಪಿಕೊಂಡಿದ್ದಾನೆ.
ಅಪರಾಧ ಮತ್ತು ಸಂಚಾರ ಡಿಸಿಪಿ ಜಾಹ್ನವಿ ಅವರ ಮಾರ್ಗದರ್ಶನದಲ್ಲಿ ಕೆ.ಆರ್.ವಿಭಾಗದ ಎಸಿಪಿ ರಮೇಶ್ ಕುಮಾರ್ ಉಸ್ತುವಾರಿಯಲ್ಲಿ ಕುವೆಂಪುನಗರ ಠಾಣೆ ಪಿಐ ಯೋಗೇಶ್ ನೇತೃತ್ವದಲ್ಲಿ ಪಿಎಸ್ಸೈ ಗಳಾದ ಗೋಪಾಲ್,ಕು.ರಾಧ ಮತ್ತು ಸಿಬ್ಬಂದಿಗಳಾದ ಮಂಜುನಾಥ್,
ಆನಂದ್,ಹಜರತ್ ಆಲಿ,ಸುರೇಶ್ ಹಾಗೂ ನಾಗೇಶ್ ಆರೋಪಿಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಗೊಳಿಸಿದ್ದಾರೆ
ನಗರಪೊಲೀಸ್ ಆಯುಕ್ತ ಬಿ.ರಮೇಶ್ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಮುತ್ತುರಾಜ್ ಅವರು ಪೊಲೀಸರ ಕಾರ್ಯವನ್ನು ಶ್ಲಾಘಿಸಿದ್ದಾರೆ.