ಬೆಂಗಳೂರು, ಫೆ.10: ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮಾಡಿರುವ ಭ್ರಷ್ಟಾಚಾರ ಆರೋಪದ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದರು.
ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿ ದ ಅವರು,ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಕೆಂಪಣ್ಣನವರು ಸರ್ಕಾರದ ಮೇಲೆ ಶೇ.40 ಕಮಿಶನ್ ಗುರುತರ ಆರೋಪ ಮಾಡಿದ್ದಾರೆ. ಕಮಿಶನ್ ಕೊಡುವವರಿಗೆ ಬಿಲ್ ಪಾವತಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಸರ್ಕಾರ ಅಧಿಕಾರಕ್ಕೆ ಬಂದ ಆರಂಭದಿಂದಲೇ ಕಮಿಶನ್ ದಂಧೆ ಹಾಗೂ ಲೂಟಿ ನಡೆಯುತ್ತಿದೆ ಎಂದು ನಾವು ಕೂಡ ತಿಳಿಸಿದ್ದೆವು ಎಂದು ಹೇಳಿದರು.
ತೆರಿಗೆ ಅಧಿಕಾರಿಗಳು ದಾಳಿ ಮಾಡಿದಾಗಲೂ ಕಾಂಗ್ರೆಸ್ ಬೆಂಬಲಿಗರ ಮನೆಗಳಲ್ಲಿ ಎರಡು ಕಡೆ ಐವತ್ತು- ಐವತ್ತು ಕೋಟಿ ಹಣ ಸಿಕ್ಕಿದೆ,ಇದು ಲೂಟಿ ಹೊಡೆದ ಹಣ ಎಂಬುದಕ್ಕೆ ಇನ್ನೇನು ಸಾಕ್ಷ್ಯ ಬೇಕು ಎಂದು ಪ್ರಶ್ನಿಸಿದರು.
ಇದೇ ಕೆಂಪಣ್ಣ ನಮ್ಮ ಸರಕಾರದ ಅವಧಿಯಲ್ಲಿ ಆರೋಪ ಮಾಡಿದಾಗ ಸಿಎಂ ಸಿದ್ದರಾಮಯ್ಯನವರು ಪೇಸಿಎಂ ಎಂಬ ಪೋಸ್ಟರ್ ಅಂಟಿಸಿದ್ದರು. ಈಗ ಯಾರ ಮುಖದ ಮೇಲೆ ಯಾವ ಪೋಸ್ಟರ್ ಅಂಟಿಸಿಕೊಳ್ಳುತ್ತಾರೆ, ಪೇ ಸಿದ್ದರಾಮಯ್ಯ, ಎಟಿಎಂ ಸಿದ್ದರಾಮಯ್ಯ ಎಂದು ಅಂಟಿಸಿಕೊಳ್ಳುತ್ತಾರಾ ಎಂದು ಕಟುವಾಗಿ ನುಡಿದರು.
ಭ್ರಷ್ಟಾಚಾರದ ತನಿಖೆಯನ್ನು ಸಿಬಿಐಗೆ ವಹಿಸಿದರೆ ಕೂಡಲೇ ನಮ್ಮ ಬಳಿ ಇರುವ ದಾಖಲೆಗಳನ್ನು ನೀಡುತ್ತೇವೆ. ಇವರು ಪ್ರಾಮಾಣಿಕರೇ ಆಗಿದ್ದರೆ, ನಯಾ ಪೈಸೆಯೂ ಭ್ರಷ್ಟಾಚಾರ ಆಗಿಲ್ಲ ಎನ್ನುವವರಾದರೆ ಸಿಬಿಐ ತನಿಖೆಗೆ ನೀಡಲಿ ಕೆಂಪಣ್ಣ ಅವರು ಆರೋಪ ಮಾಡಿದ ಎಲ್ಲವನ್ನೂ ತನಿಖೆಗೆ ನೀಡಲಿ ಎಂದು ಅಶೋಕ್ ಸವಾಲು ಹಾಕಿದರು.
ಸರ್ಕಾರ ಮಾಡುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಸದನದಲ್ಲಿ ಪ್ರಸ್ತಾಪಿಸುತ್ತೇವೆ, ಸರ್ಕಾರವನ್ನು ತೊಲಗಿಸಲು ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶ್ವೇತಪತ್ರವನ್ನು ಸಂಸತ್ತಿನಲ್ಲಿ ಮಂಡಿಸಿದ್ದಾರೆ. ಅದರಲ್ಲಿ ತಪ್ಪಿದ್ದರೆ, ಏನಾದರೂ ಅನುಮಾನಗಳಿದ್ದಲ್ಲಿ ಹಕ್ಕುಚ್ಯುತಿ ಮಂಡಿಸಲು ಅವಕಾಶವಿದೆ. ಧಮ್ ಇದ್ದರೆ ಕಾಂಗ್ರೆಸ್ ನಾಯಕರು ಹಕ್ಕುಚ್ಯುತಿ ಮಂಡಿಸಲಿ ಎಂದು ಸವಾಲು ಹಾಕಿದರು.