ಬೆಂಗಳೂರು: ಕಾದಂಬರಿ ಸಾರ್ವಭೌಮ, ಕನ್ನಡದ ಕಟ್ಟಾಳು ಎ.ಎನ್.ಕೃಷ್ಣರಾವ್(ಅನಕೃ) ಸ್ಮಾರಕ ನಿರ್ಮಿಸಲು ಕೂಡಲೇ ಜಾಗ ನೀಡುವಂತೆ ಮಾಜಿ ಅಡ್ವೋಕೇಟ್ ಜನರಲ್ ಮತ್ತು ಹಿರಿಯ ವಕೀಲ ಅಶೋಕ್ ಹಾರನಹಳ್ಳಿ, ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಚಾಮರಾಜಪೇಟೆಯ ಕೇಶವ ಶಿಲ್ಪ ಸಭಾಂಗಣದಲ್ಲಿ ಅನಕೃ ಪ್ರತಿಷ್ಠಾನ, ಭಾನುವಾರ ಆಯೋಜಿಸಿದ್ದ ‘ಅನಕೃ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಅನಕೃ ಸ್ಮಾರಕ ನಿರ್ಮಿಸಲು ಸರ್ಕಾರ, ಹಿಂದೆ ಕೊಟ್ಟಿದ್ದ ಜಾಗ ವಿವಾದ ಹೊಂದಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ್ದ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು.ಮುಂದಿನ 3 ತಿಂಗಳದೊಳಗೆ ಸ್ಮಾರಕ ನಿರ್ಮಿಸಲು ಹೊಸದಾಗಿ ಜಾಗ ನೀಡುವಂತೆ ಸರ್ಕಾರಕ್ಕೆ ಸೂಚಿಸಿದೆ. ಹಾಗಾಗಿ, ಹೊಸ ಜಾಗ ನೀಡಲು ಸರ್ಕಾರ ಮುಂದೆ ಬರಬೇಕು. ಬಾಕಿ ಉಳಿದಿರುವ ಅನಕೃ ಸಮಗ್ರ ಸಾಹಿತ್ಯವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಿಸಬೇಕು. ಹಲವು ವರ್ಷಗಳಿಂದ ಈ ಕೆಲಸ ಬಾಕಿ ಉಳಿದಿದೆ. ಈ ಬಗ್ಗೆ ಇಲಾಖೆ ಬೇಗ ತೀರ್ಮಾನ ತೆಗೆದುಕೊಂಡು ಪ್ರಕಟಿಸಿದರೆ ಅನಕೃ ಅವರಿಗೆ ಗೌರವ ಸಿಕ್ಕಿದಂತಾಗುತ್ತದೆ ಎಂದರು.
ವಿದ್ವಾಂಸ ಶತಾವಧಾನಿ ಡಾ.ಆರ್.ಗಣೇಶ್ ಮಾತನಾಡಿ, ಅನಕೃ ಸಾಹಿತ್ಯಕ್ಕೆ ಸೀಮಿತವಾಗದೆ ಚಳುವಳಿಗಾರನಂತೆ ರಾಜ್ಯಾದ್ಯಂತ ಸುತ್ತಾಡಿ ಮೌಲಿಕವಾಗಿ ಕೆಲಸ ಮಾಡಿದ್ದರು. ನಾಟಕ, ರಂಗಭೂಮಿ ಮತ್ತು ಸಿನಿಮಾ ಸೇರಿ ಇತರ ಕ್ಷೇತ್ರದ ಬಗ್ಗೆ ಕಾದಂಬರಿ ಬರೆದಿದ್ದಾರೆ. ಚಿಕ್ಕವಯಸ್ಸಿನಲ್ಲೇ ಅವರ ಕಾದಂಬರಿ ಓದಲು ಪ್ರಾರಂಭಿಸಿದ್ದೆ. ಅವರ ಕಾದಂಬರಿಗಳು ಸಮಾಜದ ಮೇಲೆ ಸಾಕಷ್ಟು ಪರಿಣಾಮ ಬೀರಿವೆ. ತಾವು ಬೆಳೆಯುವ ಜೊತೆಗೆ ಶಿಷ್ಯಂದಿರನ್ನೂ ಬೆಳೆಸಿದ್ದರು. ವಿಡಂಬನೆ ಸಾಹಿತ್ಯವನ್ನು ರಚಿಸಿದ್ದರು. ಪ್ರತಿ, ವಾತ್ಸಲ್ಯ ಆಗಾಧವಾಗಿತ್ತು ಎಂದರು.
ಅನುವಾದಕಿ ಪ್ರೊ.ಎಲ್.ವಿ.ಶಾಂತಕುಮಾರಿ, ವಿದ್ವಾಂಸ ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ಅನಕೃ ಪ್ರಶಸ್ತಿ ಪ್ರದಾನ ಮಾಡಲಾಯಿತು. ರಾಷ್ಟ್ರೋತ್ಥಾನ ಸಾಹಿತ್ಯದ ಗೌರವ ಪ್ರಧಾನ ಸಂಪಾದಕ ನಾಡೋಜ ಡಾ.ಎಸ್.ಆರ್.ರಾಮಸ್ವಾಮಿ, ಲೇಖಕ ಬಿ.ಎನ್.ಶಶಿಕಿರಣ್, ಅನಕೃ ಪ್ರತಿಷ್ಠಾನದ ಟ್ರಸ್ಟಿ ಬಿ.ವಿ.ರಾಜರಾಂ ಮತ್ತಿತರರಿದ್ದರು.

