ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದ ವಿಬಿ ಜಿ ರಾಮ್ ಜಿ ಕಾಯ್ದೆ ವಿರುದ್ಧ ಹಾಗು ಮನರೇಗಾ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ್ದ ನಿರ್ಣಯವನ್ನು ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೂ ವಿಧಾನಸಭೆ ಅಂಗೀಕರಿಸಿದ್ದು ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಮಾಡಲಾಯಿತು.
ವಿಧಾನಸಭೆಯ ಕಲಾಪದಲ್ಲಿ ವಿಬಿ ಜಿ ರಾಮ್ ಜಿ ಯೋಜನೆ ಕುರಿತಂತೆ ನಡೆದ ಚರ್ಚೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, 2008 ರಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಮನರೇಗಾ ಅಡಿ 31.54 ಲಕ್ಷ ಕುಟುಂಬಗಳಿಗೆ ಕೆಲಸ ಒದಗಿಸಲಾಗಿದೆ. 13.24 ಕೋಟಿ ಮಾನವ ದಿನಗಳ ಸೃಜನೆಯಾಗಿದ್ದು, ದುಡಿಯೋಣ ಬಾ, ಕೃಷಿ ಹೊಂಡ ಅಭಿಯಾನ ಹಮ್ಮಿಕೊಂಡಿರುವ ಬಗ್ಗೆ ರಾಜ್ಯಪಾಲರ ಭಾಷಣದಲ್ಲಿ ಹೇಳಿಸಲಾಗಿತ್ತು.ಬಸವರಾಜ ಬೊಮ್ಮಾಯಿ ಯವರು ಕೂಡ ಮನರೇಗಾ ಯೋಜನೆಗೆ ಹೆಚ್ಚಿನ ಒತ್ತು ನೀಡಿರುವ ಬಗ್ಗೆ ಹೇಳಿದ್ದು, ಈಗ ಇದ್ದಕ್ಕಿಂದ್ದಂತೆ ರದ್ದು ಮಾಡಲಾಗಿದೆ.ವಿಬಿ ಜಿ ರಾಮ್ ಜಿ ಯೋಜನೆಯಿಂದ ಉದ್ಯೋಗವಿಲ್ಲದೆ ಗ್ರಾಮೀಣ ಜನರು ಈಗ ವಲಸೆ ಹೋಗಲು ಪ್ರಾರಂಭಿಸಿದ್ದು, ಗ್ರಾಮೀಣ ಜನರ ಬದುಕನ್ನು ಕಸಿದುಕೊಳ್ಳುವ ಕೆಲಸವಾಗಿದೆ. ಸಾಂವಿಧಾನಿಕ ಹಕ್ಕನ್ನು ಗ್ರಾಮೀಣ ಜನರಿಂದ ಕಸಿದುಕೊಳ್ಳಲಾಗಿದೆ.ಕಾಯ್ದೆ ಜಾರಿಗೆ ತರುವ ಮುನ್ನ ರಾಜ್ಯಗಳೊಂದಿಗೆ ಚರ್ಚೆಯಾಗಿಲ್ಲ. 60: 40 ಅನುದಾನದ ಅನುಪಾತ ತರುವ ಮುನ್ನ ಚರ್ಚೆಯಾಗಬೇಕಿತ್ತು ಎಂದರು.
ಮಹಿಳೆಯರು, ಸಣ್ಣ ರೈತರು, ಆದಿವಾಸಿಗಳಿಗೆ ಆರ್ಥಿಕವಾಗಿ ಶಕ್ತಿ ಬರಬಾರದು ಎಂದು ಮನಸ್ಮೃತಿ ಹೇಳುತ್ತದೆ. ಮನುಸ್ಮೃತಿ ಪ್ರಕಾರ ಶೂದ್ರರಿಗೆ ಆರ್ಥಿಕವಾಗಿ ಶಕ್ತಿ ಬಂದರೆ ಸೇವಕರಾಗಿ ಉಳಿಯುವುದಿಲ್ಲ. ಅದನ್ನೇ ಈಗ ಪಾಲಿಸಲಾಗುತ್ತಿದೆ.ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ಸಂಪೂರ್ಣವಾಗಿ ರದ್ದು ಗೊಳಿಸಬೇಕು. ಮನರೇಗಾ ಯೋಜನೆ ಮರುಜಾರಿಗೊಳಿಸಬೇಕು. ಜನರ ಉದ್ಯೋಗದ ಹಕ್ಕನ್ನು ಮರುಸ್ಥಾಪಿಸಬೇಕು. ಪಂಚಾಯಿಗಳ ಅಧಿಕಾರ ಪುನರ್ ಸ್ಥಾಪನೆಯಾಗಬೇಕು. ದೇಶಾದ್ಯಂತ ಕನಿಷ್ಠ 400 ರೂ.ಗಳ ವೇತನ ನೀಡಬೇಕು ಎನ್ನುವುದು ನಮ್ಮ ಬೇಡಿಕೆ ಹಾಗಾಗಿ ಮಹಾತ್ಮ ಗಾಂಧಿ ಹೆಸರು ತೆಗೆದುಹಾಕಿ ಅವರಿಗೆ ಪುನಃ ಅವಮಾನ ಮಾಡಬಾರದು. ಕೇಂದ್ರ ಸರ್ಕಾರ ಹಾಗೂ ರಾಷ್ಟ್ರಪತಿಗಳಿಗೆ ಈ ಮನವಿಯನ್ನು ಕಳುಹಿಸಿಕೊಡಲಾಗುವುದು ಎಂದರು.
ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ,ಮಹಾತ್ಮ ಗಾಂಧಿಯವರು ರಘುಪತಿ ರಾಘವ ರಾಜಾ ರಾಮ ಎಂದು ಹಾಡುತ್ತಿದ್ದರು, ಆದರೆ ಕಾಂಗ್ರೆಸ್ ‘ಆದರ್ಶ ಪುರುಷ’ ಶ್ರೀರಾಮನನ್ನು ದ್ವೇಷಿಸುತ್ತಿದೆ.ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರದ ವಿರುದ್ಧ 18 ನಿರ್ಣಯಗಳನ್ನು ಅಂಗೀಕರಿಸಿದೆ, ಇದನ್ನು ಬೇರೆ ಯಾವುದೇ ರಾಜ್ಯ ಮಾಡಿಲ್ಲ. ಈಗ, ಕಾಂಗ್ರೆಸ್ ಸರ್ಕಾರವು ವಿಬಿ-ಜಿ ರಾಮ್ ಜಿ ಕುರಿತು 19 ನೇ ನಿರ್ಣಯವನ್ನು ಅಂಗೀಕರಿಸಲು ಸಿದ್ಧವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಜೋಡಿಸಿದಾಗ ಮಾತ್ರ ರಾಜ್ಯವು ಅಭಿವೃದ್ಧಿ ಹೊಂದುತ್ತದೆ ಎಂದು ರಾಜ್ಯ ಸರ್ಕಾರ ತಂದ ನಿರ್ಣಯಕ್ಕೆ ವಿರೋಧ ವ್ಯಕ್ತಪಡಿಸಿದರು.
ಸಿಎಂ ಮಂಡಿಸಿದ್ದ ನಿರ್ಣಯದ ಪರ ಕಾಂಗ್ರೆಸ್ ಸದಸ್ಯರು ಮತ್ತು ವಿರೋಧಿಸಿ ವಿಪಕ್ಷ ಸದಸ್ಯರು ವಿಷಯ ಪ್ರಸ್ತಾಪ ಮಾಡಿ ಪರ ವಿರೋಧವಾಗಿ ವಾಕ್ಸಮರ ನಡೆಯಿತು.ಚರ್ಚೆಯ ನಂತರ ಮನರೇಗಾ ಪರವಾಗಿ, ವಿಬಿ ಜಿ ರಾಮ್ ಜಿ ವಿರುದ್ಧವಾಗಿ ಸಿಎಂ ಸಿದ್ದರಾಮಯ್ಯ ಸದನದಲ್ಲಿ ಮಂಡಿಸಿದ್ದ ನಿರ್ಣಯವನ್ನು ಸ್ಪೀಕರ್ ಯುಟಿ ಖಾದರ್ ಮತಕ್ಕೆ ಹಾಕಿದರು. ಧ್ವನಿ ಮತದ ಮೂಲಕ ಖಂಡನಾ ನಿರ್ಣಯ ಅಂಗೀಕಾರವಾಗಿದೆ ಎಂದು ಸ್ಪೀಕರ್ ಖಾದರ್ ಪ್ರಕಟಿಸಿದರು. ನಿರ್ಣಯ ಅಂಗೀಕಾರವಾದ ಬಳಿಕ ಅನಿರ್ದಿಷ್ಟಾವಧಿಗೆ ಕಲಾಪವನ್ನು ಮುಂದೂಡಲಾಯಿತು. ಕೇಂದ್ರ ಜಾರಿಗೆ ತಂದ ಜಿ ರಾಮ್ ಜಿ ಕಾಯ್ದೆ ವಿರುದ್ಧವೇ ನಿರ್ಣಯ ಮಂಡಿಸಲು ಸರ್ಕಾರ ವಿಶೇಷ ಅಧಿವೇಶನ ಕರೆದಿತ್ತು.ಅದರಂತೆ ನಿರ್ಣಯ ಕೈಗೊಂಡು ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.

