ಬೆಂಗಳೂರು: ಕನಕದಾಸರನ್ನು ಮಹಾಭಕ್ತರು ಎಂದು ಬಿಂಬಿಸುವ ಪ್ರಯತ್ನವನ್ನೇ ಮಾಡಲಾಗಿದೆ. ಅವರೊಬ್ಬ ಸಂತರು, ಕೃಷ್ಣನ ಭಕ್ತರು, ದಾಸ ಶ್ರೇಷ್ಠರು ಎನ್ನುವುದನ್ನೇ ಹೆಚ್ಚು ಬಿಂಬಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರವೀಂದ್ರ ಕಲಾ ಕ್ಷೇತ್ರದಲ್ಲಿ ಆಯೋಜಿಸಿದ್ದ ದಾಸಶ್ರೇಷ್ಠ ಕನಕದಾಸ ಜಯಂತಿಯನ್ನು ಉದ್ಘಾಟಿಸಿ, ಕನಕಶ್ರೀ ಪ್ರಶಸ್ತಿ ಪುರಸ್ಕಾರ ಮಾಡಿ ಮಾತನಾಡಿದರು.
ವಾಸ್ತವವಾಗಿ ಕನಕದಾಸರು ಸಮಾಜ ಸುಧಾರಕರು, ದಾರ್ಶನಿಕರು, ಜಾತ್ಯತೀತ ಮನುಷ್ಯ, ಮಾನವತಾವಾದಿ, ವಿಶ್ವಮಾನವ ಎಂದು ಬಿಂಬಿಸಿರುವುದು ಬಹಳ ಕಡಿಮೆ. ಕನಕದಾಸರು ಶೂದ್ರ ಜಾತಿಯಾದ ಕುರುಬ ಜಾತಿಯಲ್ಲಿ ಆಕಸ್ಮಿಕವಾಗಿ ಜನಿಸಿದರು. ಅವರು ಮಾಡಿರುವ ಕೆಲಸಗಳು ಜನರಿಗೆ ಪರಿಚಯಿಸಲೆಂದು ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಬುದ್ಧ, ಬಸವ, ಮಹಾತ್ಮ ಗಾಂಧಿ ಅಂಬೇಡ್ಕರ್, ಕನಕದಾಸರ ಬಗ್ಗೆ ಜನರಿಗೆ ಸತ್ಯವನ್ನು ಇರುವ ಪ್ರಯತ್ನ ಮಾಡಬೇಕು ಎಂದರು.
ಕನಕದಾಸರು ಜಾತಿ ವ್ಯವಸ್ಥೆ ಹೋಗಲಾಡಿಸಲು ಪ್ರಯತ್ನಿಸಿದರು. ಮೌಢ್ಯ, ಢಾಂಭಿಕತನ ಹೋಗಲಾಡಿಸಿ, ವೈಚಾರಿಕತೆ ಬೆಳೆಯಬೇಕು ಹಾಗೂ ಮನುಷ್ಯ ಸಮಾಜ ನಿರ್ಮಾಣವಾಗಬೇಕು ಎಂದು ಬಯಸಿದ್ದರು ಮನುಷ್ಯ ಮನುಷ್ಯರನ್ನು ಪ್ರೀತಿಸಿದಾಗ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ ಸ್ವಾತಂತ್ರ್ಯ, ಸಮಾನತೆ, ಭಾತೃತ್ವ ಹಾಗೂ ಸಹಿಷ್ಣುತೆಯ ಬಗ್ಗೆ ಸಂವಿಧಾನದಲ್ಲಿ ಬಹಳ ಸ್ಪಷ್ಟವಾಗಿ ಹೇಳಲಾಗಿದೆ. ಅಂಬೇಡ್ಕರ್ ಅವರು ಇತಿಹಾಸದ ಬಗ್ಗೆ ಸಂಶೋಧನೆ ನಡೆಸಿ ಸಂವಿಧಾನ ರಚಿಸಿದ್ದಾರೆ. ಬುದ್ಧ ಬಸವ ಕನಕದಾಸರ, ಮಹಾತ್ಮ ಗಾಂಧಿ ಅಂಬೇಡ್ಕರ್ ಅವರ ಕಾಲದಿಂದಲೂ ಜಾತಿ ಹೋಗಲಾಡಿಸುವ ಪ್ರಯತ್ನಗಳು ನಡೆಯುತ್ತಿವೆ. ಮನುಷ್ಯರಾಗಿ ಬದುಕಿ, ಮನುಷ್ಯ ಮನುಷ್ಯರನ್ನು ಪ್ರೀತಿಸಬೇಕು. ಆಗ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.
ಸಚಿವ ಶಿವರಾಜ್ ತಂಗಡಗಿ ಮಾತನಾಡಿ, ಕನಕದಾಸರು ಎಲ್ಲರನ್ನೂ ಜೊತೆಗೆ ಕರೆದುಕೊಂಡು, ಜನರ ಭಾವನೆಗಳಿಗೆ ಧ್ವನಿಗೂಡಿಸಿದವರು. ತತ್ವ ಸಿದ್ಧಾಂತವನ್ನು ಆಡು ಭಾಷೆಯಲ್ಲಿ ತಿಳಿಸಿಕೊಟ್ಟವರು. ದೀನ ದಲಿತರ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದರು. ಇದೀಗ ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ನ ಒಟ್ಟು ಗಾತ್ರದ ಶೇ.21 ಅನುದಾನವನ್ನು ದೀನ ದಲಿತರಿಗೆ ಕೊಟ್ಟಿದ್ದಾರೆ. ರಾಜ್ಯದಲ್ಲಿ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರ ಸಮುದಾಯದ ಅಭ್ಯುದಯಕ್ಕಾಗಿ ದುಡಿಯುತ್ತಿದ್ದಾರೆ. ಕನಕದಾಸರ ಜಯಂತಿ ಒಂದು ಸಮಾಜಕ್ಕೆ ಸೀಮಿತವಾಗಬಾರದೆಂದು ನಮ್ಮ ಸರ್ಕಾರದಿಂದಲೇ ಜಯಂತಿ ನಡೆಸಿಕೊಂಡು ಬರುತ್ತಿದ್ದೇವೆ ಎಂದರು.

