Fri. Mar 6th, 2026

ರಾಜ್ಯಪಾಲರ ಭಾಷಣದ ಮೂಲಕ ದ್ವೇಷ ಹರಡುವ ಪ್ರಯತ್ನ:ಕಾಂಗ್ರೆಸ್ ವಿರುದ್ಧ ಡಿ.ವಿ.ಸದಾನಂದ ಗೌಡ ವಾಗ್ದಾಳಿ

Share this with Friends

ಬೆಂಗಳೂರು: ಸುಮಾರು 50 ವರ್ಷಕ್ಕೂ ಹೆಚ್ಚು ಕಾಲ ದೇಶದ ಆಡಳಿತ ನಡೆಸಿದವರು ಸಂವಿಧಾನಕ್ಕೆ ಅಪಚಾರ ಮಾಡುವುದನ್ನು ನಾವು ನೋಡುತ್ತಿದ್ದೇವೆ. ಸಂವಿಧಾನಬದ್ಧವಾದ ವೇದಿಕೆಯನ್ನು ರಾಜ್ಯಪಾಲರ ಮೂಲಕ ದುರ್ಬಳಕೆ ಮಾಡಲು ಬೇಕಾದ ಪ್ರಯತ್ನಗಳನ್ನು ಮಾಡಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಮಾಜಿ ಸಿಎಂ ಡಿವಿ ಸದಾನಂದಗೌಡ ಹರಿಹಾಯ್ದಿದ್ದಾರೆ.

ಗಣರಾಜ್ಯೋತ್ಸವದ ಪ್ರಯುಕ್ತ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ರಾಜ್ಯಪಾಲರ ಮೂಲಕ ಏನೆಲ್ಲಾ ಪ್ರಯತ್ನಗಳನ್ನು ಮಾಡಿದ್ದಾರೆ ಎಂದು ಇತ್ತೀಚಿನ ವಿದ್ಯಮಾನಗಳನ್ನು ಗಮನಿಸಿದರೆ ಗೊತ್ತಾಗುತ್ತದೆ.ರಾಜ್ಯಪಾಲರ ಭಾಷಣದ ಮೂಲಕ ದ್ವೇಷ ಹರಡುವ ಪ್ರಯತ್ನ ಮಾಡಿದ್ದಾರೆ. ಇದೊಂದು ಕೆಟ್ಟ ಸಂಪ್ರದಾಯವಾಗಿದ್ದು, ಇದನ್ನು ಇಡೀ ರಾಜ್ಯದ ಜನತೆ ಖಂಡಿಸಬೇಕಾದ ದಿನವಿದು ಎಂದು ನುಡಿದರು.

ಮೋದಿ ಅವರು ಪ್ರತಿ ಪ್ರಾದೇಶಿಕ ಭಾಷೆಗೆ ನೀಡುತ್ತಿದ್ದು, ಆಯಾ ರಾಜ್ಯದ ಸಂಸ್ಕೃತಿ, ಸಂಸ್ಕಾರಗಳಿಗೆ ಉತ್ತೇಜನ ಕೊಡುತ್ತಿದ್ದಾರೆ.ನಮ್ಮ ದೇಶದ ಆರ್ಥಿಕ ಪ್ರಗತಿ ಅತ್ಯಂತ ಅದ್ಭುತವಾಗಿರುವುದಕ್ಕೆ ವಿಕಸಿತ ಭಾರತದ ನಿರ್ಮಾಣಕ್ಕೆ ಪಣ ತೊಟ್ಟಿರುವ ನರೇಂದ್ರ ಮೋದಿಯವರ ಆಡಳಿತ ಸೂತ್ರಗಳೇ ಕಾರಣ.ಭಾರತವು ಪ್ರತಿ ಕ್ಷೇತ್ರದಲ್ಲೂ ಸ್ವಾಭಿಮಾನಿ ರಾಷ್ಟ್ರವಾಗುತ್ತಿದೆ. ಹಾಲು ಉತ್ಪಾದನೆಯಲ್ಲಿ ಅದು ಜಗತ್ತಿನ ನಂಬರ್ ಒನ್ ರಾಷ್ಟ್ರವಾಗಿದೆ. ಮಾವಿನ ಹಣ್ಣು ಮತ್ತಿತರ ತೋಟಗಾರಿಕಾ ಬೆಳೆಗಳನ್ನು ಹಾಗೂ ಆಹಾರೋತ್ಪನ್ನಗಳನ್ನು ನಾವು ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಸರಬರಾಜು ಮಾಡುತ್ತಿದ್ದೇವೆ. ಚಂದ್ರಯಾನದಲ್ಲೂ ಭಾರತ ಮುಂಚೂಣಿಯಲ್ಲಿದೆ ಎಂದು ವಿವರಿಸಿದರು.

ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್ ಅವರು ಮಾತನಾಡಿ, ನಮ್ಮದೇ ಆದ ಆರ್ಥಿಕ ನೀತಿ, ರಾಜಕೀಯ ನೀತಿ, ನಮ್ಮದೇ ಆದ ಸಾಮಾಜಿಕ- ಶೈಕ್ಷಣಿಕ, ಧಾರ್ಮಿಕ, ಕೈಗಾರಿಕಾ ನೀತಿಯನ್ನು ನಾವು ಅಳವಡಿಸಿಕೊಂಡಿದ್ದೇವಾ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದರು. ಸ್ವಾತಂತ್ರ್ಯ ಹೋರಾಟಗಾರರ ಕನಸನ್ನು ನನಸು ಮಾಡಲು ನಮ್ಮ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪ್ರಯತ್ನಿಸುತ್ತಿರುವುದು ನಮಗೆಲ್ಲರಿಗೂ ಸಂತೋಷದ ಸಂಗತಿ ಎಂದರು.

ಕರ್ನಾಟಕದ ಆಡಳಿತ ವ್ಯವಸ್ಥೆ, ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹಳಿ ತಪ್ಪಿದೆ. ಈ ಹಿನ್ನೆಲೆಯಲ್ಲಿ ನಾವು ನೀವು ಗಂಭೀರವಾಗಿ ಯೋಚಿಸಬೇಕಿದೆ. ಇಲ್ಲಿಯೂ ಬದಲಾವಣೆ ತರುವ ಪ್ರಯತ್ನವನ್ನು ನಾವೆಲ್ಲರೂ ಮಾಡೋಣ ಎಂದು ಮನವಿ ಮಾಡಿದರು.

 


Share this with Friends

Related Post