ಬೆಂಗಳೂರು: ತೆರಿಗೆ ಪಾವತಿ ಮಾಡದಿದ್ದರೆ, ನಾವು ಹೇಗೆ ಪಾಲಿಕೆ ನಡೆಸಲಾಗುತ್ತದೆ.ಮಾನವೀಯತೆಯಿಂದ ಅವಕಾಶ ನೀಡಬೇಕು ಎಂದು ಓಟಿಎಸ್ ವ್ಯವಸ್ಥೆ ಕಲ್ಪಿಸಿದ್ದೆವು.ಆದರೂ ಪಾವತಿಸದಿದ್ದೆ ಏನು ಮಾಡಲು ಸಾಧ್ಯ? ಎಂದು ಆಸ್ತಿ ತೆರಿಗೆ ಪಾವತಿ ಮಾಡದ ಕಾರಣ ಆಸ್ತಿ ಹರಾಜು ಮಾಡಲು ಮುಂದಾಗಿರುವ ಪಾಲಿಕೆ ನಿಲುವನ್ನು ಡಿಸಿಎಂ ಡಿಕೆ ಶಿವಕುಮಾರ್ ಸಮರ್ಥಿಸಿಕೊಂಡಿದ್ದು, ತೆರಿಗೆ ಸಂಗ್ರಹ ಬಗ್ಗೆ ನಾನು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಜಿಬಿಎ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ಆಸ್ತಿ ತೆರಿಗೆ ಪಾವತಿ ಮಾಡದ ಕಾರಣ ಹರಾಜು ಮಾಡಲಾಗುತ್ತಿದೆ, “ಇದು ದೊಡ್ಡ ಸಮಸ್ಯೆಯಲ್ಲ. ಸಣ್ಣ ಪುಟ್ಟ ಮನೆಯವರು ಹೊರತಾಗಿ ಉಳಿದವರು ಅವರು ಪ್ರತಿ ತಿಂಗಳು ಬಾಡಿಗೆ ಪಡೆಯುತ್ತಿದ್ದಾರೆ. 80% ಜನ ವಾಣಿಜ್ಯ ಆಸ್ತಿಗಳು 7-8 ವರ್ಷಗಳಿಂದ ತೆರಿಗೆ ಪಾವತಿ ಮಾಡಿಲ್ಲ. ಕೆಲವು ಮಾಜಿ ಶಾಸಕರ ಆಸ್ತಿಗಳಿವೆ. ನಾನು ಅವರ ಹೆಸರು ಹೇಳುವುದಿಲ್ಲ. ಆಸ್ತಿ ತೆರಿಗೆ ಪಾವತಿ ಮಾಡದಿದ್ದರೆ, ನಾವು ಹೇಗೆ ನಡೆಬೇಕು. ಅವಕಾಶ ನೀಡಬೇಕು ಎಂದು ಓಟಿಎಸ್ ವ್ಯವಸ್ಥೆ ಕಲ್ಪಿಸಿದ್ದೆವು. ತೆರಿಗೆ ಸಂಗ್ರಹ ಬಗ್ಗೆ ನಾನು ಹಸ್ತಕ್ಷೇಪ ಮಾಡುವುದಿಲ್ಲ. ನಮಗೆ ಮಾನವೀಯತೆ ಇರುವುದಕ್ಕೆ ಓಟಿಎಸ್ ನೀಡಿದ್ದೆವು. ಇದರಿಂದ ಜನರಿಗೆ ಎಷ್ಟು ಅನುಕೂಲವಾಗಿದೆ ಎಂದು ನಮಗೆ ಗೊತ್ತಿದೆ. ಇದನ್ನು ಬಳಸಿಕೊಳ್ಳದಿದ್ದರ, ಪಾಲಿಕೆ ಅವರು ಏನು ಮಾಡಬೇಕು. ಕೆಲವರು ಕಟ್ಟಡ ನಕ್ಷೆ ಅನುಮೋದನೆಗೆ 35% ಪಾವತಿ ಮಾಡಿ 75% ಪಾವತಿ ಮಾಡದೇ ಕೋರ್ಟ್ ಮೆಟ್ಟಿಲೇರಿದ್ದಾರೆ. ಅಂತಹವರಿಗೆ ನಕ್ಷೆ ಅನುಮೋದನೆ ಮಾಡಬೇಡಿ ಎಂದಿದ್ದೇನೆ. ಈ ರೀತಿ ಅನೇಕ ಡೆವಲಪ್ಪರ್ ಗಳು ದುರುಪಯೋಗ ಮಾಡಿಕೊಂಡಿದ್ದಾರೆ. ಇಲ್ಲಿ ಬಡವರು, 30×40 ನಿವೇಶನದಾರರು ಇಲ್ಲ. ಎಲ್ಲಾ ದೊಡ್ಡ ಶ್ರೀಮಂತರೆ ಇದ್ದಾರೆ” ಎಂದು ತಿಳಿಸಿದರು.
“ಓಟಿಎಸ್ ಯೋಜನೆಯಲ್ಲಿ 2.65 ಲಕ್ಷ ಜನರು ಪ್ರಯೋಜನ ಪಡೆದಿದ್ದಾರೆ. ಇದರಿಂದ ಪಾಲಿಕೆಗೆ 1200 ಕೋಟಿ ಸಂಗ್ರಹವಾಗಿದೆ. ಇದು ಐತಿಹಾಸಿಕ ನಿರ್ಧಾರ” .ಮಂತ್ರಿ ಮಾಲ್ ನವರು 35 ಕೋಟಿ ಬಾಕಿ ಉಳಿಸಿಕೊಂಡಿದ್ದು, ಅವರಿಗೆ ಈ ರೀತಿ ಮಾಡುತ್ತಿಲ್ಲ ಬೇರೆಯವರಿಗೆ ಯಾಕೆ ಎಂದು ಕೇಳಿದಾಗ, “ನಾನು ಅಲ್ಲಿಗೆ ಬೀಗ ಹಾಕಿಸಿ, 8 ಕೋಟಿ ಹಣ ಪಾವತಿ ಮಾಡಿಸಿದ್ದಾರೆ. ಅವರಿಗೆ ನ್ಯಾಯಾಲಯ ಸ್ವಲ್ಪ ಕಾಲಾವಕಾಶ ನೀಡಿದೆ. 20 ಕೋಟಿ ಬಾಕಿ ಇದೆ” ಎಂದು ಹೇಳಿದರು.
ಬಿ ಯಿಂದ ಎ ಖಾತಾ ಪರಿವರ್ತನೆಗೆ ಎಷ್ಟು ಅರ್ಜಿ ಬಂದಿವೆ ಆಗಿದೆ ಎಂದು ಕೇಳಿದಾಗ, “ಸುಮಾರು 7 ಸಾವಿರ ಅರ್ಜಿಗಳು ಬಂದಿವೆ. ಎಲ್ಲರ ಅರ್ಜಿಗಳನ್ನು ಸ್ಥಳ ಪರಿಶೀಲನೆ ಮಾಡಿ ಅವರ ಆಸ್ತಿ ಮುಂದೆ ಇರುವುದು ಸರ್ಕಾರಿ ರಸ್ತೆಯೇ ಎಂದು ಪರಿಶೀಲಿಸಿ. ಆ ಆಸ್ತಿಗೆ ಜಿಪಿಎಸ್ ನಿಗದಿಪಡಿಸುತ್ತಿರುವ ಕಾರಣ ಇದು ವಿಳಂಬವಾಗುತ್ತಿದೆ” ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಗುತ್ತಿಗೆದಾರರ ಬಿಲ್ ಸಮಸ್ಯೆ ಇಲ್ಲ:
ಗುತ್ತಿಗೆದಾರರು ಬಾಕಿ ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ, ಏಪ್ರಿಲ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುವುದೇ ಎಂದು ಕೇಳಿದಾಗ, “ಪಾಲಿಕೆಗಳಲ್ಲಿ ಕ್ರಾಂತಿಕಾರಿ ತೀರ್ಮಾನ ಮಾಡಿ ಬಿಲ್ ವಿತರಣೆ ಮಾಡುತ್ತಿದ್ದೇವೆ.ಬೆಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಆ ಸಮಸ್ಯೆ ಇಲ್ಲ. ಬೇರೆ ಕಡೆ ಕಾಮಗಾರಿಗಳ ಗುತ್ತಿಗೆದಾರರು ಈ ರೀತಿ ಕೇಳುತ್ತಿರಬಹುದು. ನಾವು ಸಮಸ್ಯೆ ಆದಷ್ಟು ಬಗೆಹರಿಸಿದ್ದೇವೆ. ಸುಮಾರು 90% ಸಮಸ್ಯೆ ಬಗೆಹರಿಸಿದ್ದು, ತಾಂತ್ರಿಕ ಕಾರಣಗಳಿಂದಾಗಿ 10% ಮಾತ್ರ ಬಾಕಿ ಉಳಿದಿವೆ. ಬೆಂಗಳೂರು ರಸ್ತೆ ಕಾಮಗಾರಿ ವಿಚಾರದಲ್ಲಿ ಯಾವ ಗುತ್ತಿಗೆದಾರರ ಬಿಲ್ ಬಾಕಿ ಇಲ್ಲ” ಎಂದರು.
ಪಾಲಿಕೆ ಚುನಾವಣೆ ಬಗ್ಗೆ ಕೇಳಿದಾಗ, “ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ರಾಜ್ಯ ಚುನಾವಣಾ ಆಯೋಗದ ಜವಾಬ್ದಾರಿಗೆ ಬಿಟ್ಟಿದ್ದು, ಕೋರ್ಟ್ ನಲ್ಲಿ ಅವರೇ ಅಫಿಡವಿಟ್ ಸಲ್ಲಿಸಿದ್ದಾರೆ. ಈ ಚುನಾವಣೆ, ಆಯೋಗದ ಕೈಯಲ್ಲಿದೆ, ನಮ್ಮ ಕೈಯಲ್ಲಿಲ್ಲ” ಎಂದು ತಿಳಿಸಿದರು.
ಪಾಲಿಕೆ ಬಳಿ ಹಣ ಇಲ್ಲ ಎಂದು ಕೇಳಿದಾಗ, “ಬೆಂಗಳೂರು ಪೂರ್ವ ಪಾಲಿಕೆ ಸ್ವಲ್ಪ ಬಡವಾಗಿರಬಹುದು. ಉಳಿದ ಎಲ್ಲಾ ಪಾಲಿಕೆಗಳು ತಮ್ಮ ಸಾಮರ್ಥ್ಯದ ಮೇಲೆ ನಿರ್ವಹಣೆ ಮಾಡಬಹುದು” ಎಂದು ಹೇಳಿದರು.
ಬೆಂಗಳೂರಿಗೆ ರಾಜ್ಯ ಬಜೆಟ್ ನಲ್ಲಿ ಏನು ನಿರೀಕ್ಷೆ ಮಾಡಬಹುದು ಎಂದು ಕೇಳಿದಾಗ, “ಈ ಬಗ್ಗೆ ನಮ್ಮ ಅಧಿಕಾರಿಗಳು ಪ್ರಸ್ತಾವನೆ ನೀಡಿದ್ದಾರೆ. ಉಳಿದ ವಿಚಾರವನ್ನು ಸಿಎಂ ಅವರ ಬಳಿ ಕೇಳಿ. ಸರ್ಕಾರದ ಬಳಿ ಇರುವ ಹಣದ ಮೇಲೆ ಅವರು ತೀರ್ಮಾನ ಮಾಡುತ್ತಾರೆ” ಎಂದರು.
26ರಂದು ನೀವು ದೆಹಲಿಗೆ ಹೋಗುತ್ತೀರಿ ಎಂದು ಶಾಸಕರ ಇಕ್ಬಾಲ್ ಹುಸೇನ್ ಹೇಳಿಕೆ ಬಗ್ಗೆ ಕೇಳಿದಾಗ, “ಇಕ್ಬಾಲ್ ಹುಸೇನ್ ಬಾಯಿಗೆ ಬೀಗ ಹಾಕಿಕೊಂಡರೆ ಒಳ್ಳೆಯದು. ನಾನು ಎಲ್ಲಾ ಇಕ್ಬಾಲ್ ಹುಸೇನ್ ಅವರಿಗೂ ಹೇಳುತ್ತಿದ್ದೇನೆ. ನನಗೆ ಒಳ್ಳೆಯದು ಮಾಡಬೇಕು ಎಂದು ಅಂದುಕೊಂಡಿದ್ದರೆ ಬಾಯಿಗೆ ಬೀಗ ಹಾಕಿಕೊಳ್ಳಲಿ” ಎಂದರು.
ಸಿಎಂ ಅವರು ಟ್ವೀಟ್ ಬಗ್ಗೆ ಕೇಳಿದಾಗ, “ಬಿಜೆಪಿಯವರು ಅಥವಾ ಏನಾದರೂ ಮಾಡುತ್ತಿರಬಹುದು. ನನಗೆ ಮಾಹಿತಿ ಇಲ್ಲ. ಅವರಿಗೆ ಮಾಹಿತಿ ಇರುತ್ತದೆ. ನಾಳೆ ಕಾರವಾರಕ್ಕೆ ನಾವು ಹೋಗುತ್ತಿದ್ದು, ಅಲ್ಲಿ ಅವರ ಜೊತೆ ಮಾತನಾಡಿ ನಿಮಗೆ ಹೇಳುತ್ತೇನೆ” ಎಂದರು.

