ಚಂಡೀಗಢ: ಅಮೃತಸರದಲ್ಲಿರುವ ಗೋಲ್ಡನ್ ಟೆಂಪಲ್ ಕಾವಲುಗಾರನಾಗಿ ಸೇವೆ ಸಲ್ಲಿಸುತ್ತಿದ್ದ ಪಂಜಾಬ್ ಮಾಜಿ ಉಪ ಮುಖ್ಯಮಂತ್ರಿ ಸುಖಬೀರ್ ಸಿಂಗ್ ಬಾದಲ್ ಮೇಲೆ ದುಷ್ಕರ್ಮಿ ಗುಂಡಿನ ದಾಳಿ ನಡೆಸಿದ್ದಾನೆ
ಬಾದಲ್ ಅವರು ಶಿರೋಮಣಿ ಅಕಾಲಿ ದಳದ ನಾಯಕ,ಪಂಜಾಬ್ ಮಾಜಿ ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು.
ಇದೀಗ ಧಾರ್ಮಿಕ ಶಿಕ್ಷೆಯ ಭಾಗವಾಗಿ ಗೋಲ್ಡನ್ ಟೆಂಪಲ್ ಪ್ರವೇಶದ್ವಾರದ ಕಾವಲುಗಾರನಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಇಂದು ಬೆಳಿಗ್ಗೆ ತಪಸ್ಸಿಗೆ ಕುಳಿತಾಗ ದುಷ್ಕರ್ಮಿ ಗುಂಡಿನ ದಾಳಿ ನಡೆಸಿ ಕೊಲೆಗೆ ಯತ್ನಿಸಿದ್ದ.
ಆರೋಪಿಯನ್ನು ಅಮೃತಸರದಿಂದ ಸುಮಾರು 75 ಕಿ.ಮೀ ದೂರದಲ್ಲಿರುವ ಗುರುದಾಸ್‌ಪುರ ಜಿಲ್ಲೆಯ ದಾಲ್ ಖಾಲ್ಸಾದ ನರೇನ್ ಸಿಂಗ್ ಚೋರ್ಹಾ ಎಂದು ಗುರುತಿಸಲಾಗಿದೆ.
ಗುಂಡು ಹಾರಿಸುತ್ತಿದ್ದಾಗಲೇ ಅಲ್ಲಿನ ಜನರು ಆತನ ಮೇಲೆ ಹಲ್ಲೆ ನಡೆಸಿ ಹಿಡಿದು ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಾದಲ್ ಅವರು 2007 ರಿಂದ 2017 ರವರೆಗೆ ಪಂಜಾಬ್ ಉಪ ಮುಖ್ಯಮಂತ್ರಿ ಯಾಗಿದ್ದಾಗ ಪಕ್ಷದ ಪ್ರತಿಷ್ಠೆಗೆ ಧಕ್ಕೆ ತರುವಂತಹ ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿದ್ದರು.
ಹಾಗಾಗಿ ಬಾದಲ್ ಹಾಗೂ ಅಕಾಲಿದಳದ ಇನ್ನಿತರ ನಾಯಕರಿಗೆ ತಂಖಾ (ಧಾರ್ಮಿಕ ಶಿಕ್ಷೆ) ಘೋಷಿಸಲಾಗಿತ್ತು.
ಸೇವಾದರ್ ಅಡಿಯಲ್ಲಿ ಪಾತ್ರೆ ತೊಳೆಯಲು, ಬೂಟು ಸ್ವಚ್ಛಗೊಳಿಸಲು ತಿಳಿಸಲಾಗಿತ್ತು. ಬಾದಲ್ ಗೋಲ್ಡನ್ ಟೆಂಪಲ್‌ನಲ್ಲಿ ತಪಸ್ಸು ಆರಂಭಿಸಿದ್ದರು.
ಕಳೆದ ಎರಡು ದಿನಗಳಿಂದ ಬಾದಲ್ ಒಂದು ಕೈಯಲ್ಲಿ ಈಟಿ ಹಿಡಿದು, ನೀಲಿ `ಸೇವಾದರ್’ ಸಮವಸ್ತ್ರವನ್ನು ಧರಿಸಿ ಗೋಲ್ಡನ್ ಟೆಂಪಲ್‌ನ ಗೇಟ್ ಬಳಿ ವ್ಹೀಲ್ ಚೇರ್‌ನಲ್ಲಿ ಕುಳಿತಿದ್ದರು.
ಸಿಸಿಟಿವಿ ದೃಶ್ಯಗಳಲ್ಲಿ ದಾಳಿಕೋರ ನಿಧಾನವಾಗಿ ಗೇಟ್ ಬಳಿ ಬಂದು ಬಂದೂಕನ್ನು ಹೊರತೆಗೆದು ಬಳಿಕ ಗುಂಡಿನ ದಾಳಿ ನಡೆಸಿರುವುದು ಸೆರೆಯಾಗಿದೆ.
ಗುಂಡು ಹಾರಿಸಿದ ನರೇನ್ ಸಿಂಗ್ ಖಲಿಸ್ತಾನಿ ಭಯೋತ್ಪಾದಕರ ಗುಂಪು ಬಬ್ಬರ್ ಖಾಲ್ಸಾ ಜೊತೆ ಸಂಪರ್ಕ ಹೊಂದಿದ್ದಾನೆ. 2004ರಲ್ಲಿ 94 ಅಡಿ ಸುರಂಗವನ್ನು ಅಗೆದು ಜೈಲಿನಿಂದ ತಪ್ಪಿಸಿಕೊಂಡಿದ್ದ ಬುರೈಲ್ ಜೈಲ್ ಬ್ರೇಕ್ ಪ್ರಕರಣದ ಮಾಸ್ಟರ್ ಮೈಂಡ್ ಬಬ್ಬರ್ ಖಾಲ್ಸಾ ಜೊತೆ ಸಂಬಂಧವಿದೆ ಎಂದು ಮೂಲಗಳು ತಿಳಿಸಿವೆ.