Fri. Mar 6th, 2026

ಬೆಂಗಳೂರು ಗ್ಯಾಸ್ ಚೇಂಬರ್ ಆಗದಂತೆ ಎಚ್ಚರವಹಿಸಬೇಕು:ಈಶ್ವರ ಖಂಡ್ರೆ

Share this with Friends

ಬೆಂಗಳೂರು:ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಪರಿಸರ ಸಂರಕ್ಷಣೆಗೆ ರೂಪಿಸಿರುವ ಎಲ್ಲಾ ಕಾಯಿದೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಬೆಂಗಳೂರು ಗ್ಯಾಸ್ ಚೇಂಬರ್ ಆಗದಂತೆ ಎಚ್ಚರವಹಿಸಬೇಕು ಎಂದು ಅಧಿಕಾರಿಗಳಿಗೆ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಸಚಿವರು, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ವಾಯುಮಾಲಿನ್ಯ ಅತೀವ ಗಂಭೀರ ಹಂತ ತಲುಪಿರುವುದು ಎಲ್ಲರಿಗೂ ಎಚ್ಚರಿಕೆಯ ಸಂಕೇತವಾಗಿದೆ. ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದಾಗ ಹೊಗೆ ಮತ್ತು ಮಂಜಿನಿಂದ ಕೂಡಿದ ವಾತಾವರಣದಲ್ಲಿ ಉಸಿರಾಡಲೂ ಕಷ್ಟವಾಯಿತು. ಬೆಂಗಳೂರು ನಗರಕ್ಕೂ ಇಂತಹ ಪರಿಸ್ಥಿತಿ ಬರಬಾರದು ಎಂಬ ದೃಢ ಸಂಕಲ್ಪದೊಂದಿಗೆ, ಎಲ್ಲ ಅಗತ್ಯ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ವಿವಿಧ ಅಭಿವೃದ್ಧಿ ಯೋಜನೆಗಳಿಂದ ಪರಿಸರದ ಮೇಲೆ ಆಗುವ ಪರಿಣಾಮಗಳ ಕುರಿತು ಚರ್ಚಿಸಲು ರಾಜ್ಯ ತಜ್ಞರ ನಿಷ್ಕರ್ಷ ಸಮಿತಿ (SEAC), SEIAA ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿ, ನೂತನ ವರ್ಷದಲ್ಲಿ ಪ್ರಕೃತಿ ಮತ್ತು ಪರಿಸರ ಸಂರಕ್ಷಣೆಗೆ ಸಂಕಲ್ಪ ಮಾಡಬೇಕೆಂದು ತಿಳಿಸಿದ್ದೇನೆ ಎಂದರು.

ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಪರಿಸರ ಸಂರಕ್ಷಣೆಗೆ ರೂಪಿಸಿರುವ ಎಲ್ಲಾ ಕಾಯಿದೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ, ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ನಗರಗಳನ್ನು ಸುರಕ್ಷಿತವಾಗಿಟ್ಟುಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದ ಸಚಿವರು, ಸ್ವಚ್ಛ ಗಾಳಿ – ಆರೋಗ್ಯಕರ ಜೀವನ, ಪರಿಸರ ರಕ್ಷಣೆ ನಮ್ಮ ಕರ್ತವ್ಯ ಎಂದು ತಿಳಿಸಿದ್ದಾರೆ.

ಖರ್ಗೆ ಭೇಟಿ:

ಇದೇ ವೇಳೆ 2026ರ ನೂತನ ವರ್ಷದಂದು ಎಐಸಿಸಿ ಅಧ್ಯಕ್ಷ  ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಭೇಟಿಯಾದ ಸಚಿವ ಈಶ್ವರ ಖಂಡ್ರೆ ನೂತನ ವರ್ಷದ ಶುಭಾಶಯಗಳನ್ನು ತಿಳಿಸಿದರು.


Share this with Friends

Related Post