ಮಡಿಕೇರಿ, ಮೇ.10: ಎಸ್ಎಸ್ಎಲ್‌ಸಿಯಲ್ಲಿ
ಉತ್ತೀರ್ಣರಾದ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಖುಷಿಯಲ್ಲಿದ್ದರೆ ಇತ್ತ ಕೊಡಗಿನಲ್ಲಿ ಮಗಳು ಪಾಸಾದರೂ ತಂದೆ,ತಾಯಿ ದುಃಖಿತರಾಗಿದ್ದಾರೆ.
ಇದಕ್ಕೆ ಕಾರಣ ಎಸ್‌ಎಸ್‌ಎಲ್‌ಸಿ ಪಾಸಾದ ಖುಷಿಯಲ್ಲಿದ್ದ ಮಗಳ ಹತ್ಯೆಯಾಗಿರುವುದು, ಈಗ ಅವರ ಮನೆ ಸ್ಮಶಾನವಾಗಿಬಿಟ್ಟಿದೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿ ಗ್ರಾಮದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ.
ಆ ಬಾಲಕಿಯನ್ನು 30 ವರ್ಷದ ನೀಚ ಯುವಕನೊಬ್ಬ ಬೀಬತ್ಸವಾಗಿ ಹತ್ಯೆ ಮಾಡಿ ತಲೆ ಕತ್ತರಿಸಿ ರುಂಡ ಮುಂಡ ಬೇರೆ ಬೇರೆ ಬಿಸಾಕಿ ವಿಕೃತಿ ಮೆರೆದಿದ್ದಾನೆ.
ಮೃತ ಬಾಲಕಿಯ ಸೂರಲಬ್ಬಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಯು.ಎಸ್ ಮೀನಾ, ಮೀನಾ ಸುಬ್ರಮಣಿ ಮತ್ತು ಮುತ್ತಕ್ಕಿ ದಂಪತಿಯ ಒಬ್ಬಳೇ ಮಗಳು.
ಅಲ್ಲದೆ ಮೀನಾ ಸೂರ್ಲಬ್ಬಿ ಸರ್ಕಾರಿ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಏಕೈಕ ವಿದ್ಯಾರ್ಥಿನಿಯಾಗಿದ್ದರು, ಪರೀಕ್ಷೆಯಲ್ಲಿ ಉತೀರ್ಣರಾಗಿದ್ದರಿಂದ ಶಾಲೆಗೆ ಶೇ.100 ಫಲಿತಾಂಶ ತಂದು ಕೊಟ್ಟಿದ್ದಾಳೆ.
ಹತ್ಯೆ ಮಾಡಿದ ಆರೋಪಿ ಗ್ರಾಮದ ನಿವಾಸಿ ಓಂಕಾರಪ್ಪ (ಪಾಪು),ಆತನೊಂದಿಗೆ ಬಾಲಕಿಯ ನಿಶ್ಚಿತಾರ್ಥ ಮಾಡಲು ಮಾತುಕತೆ ನಡೆದಿತ್ತು. ಆದರೆ, ಆಕೆ ಅಪ್ರಾಪ್ತ ಬಾಲಕಿ ಆಗಿರುವ ಕಾರಣ ಪೊಲೀಸರು ಮಧ್ಯ ಪ್ರವೇಶಿಸಿ ನಿಶ್ಚಿತಾರ್ಥ ನಿಲ್ಲಿಸಿದ್ದರು.
ಆರೋಪಿ ಓಂಕಾರಪ್ಪ ಸಂತ್ರಸ್ತೆಯನ್ನು ಆಕೆಯ ಪೋಷಕರ ಮುಂದೆಯೇ ಮನೆಯಿಂದ ಕರೆದೊಯ್ದು ಹತ್ಯೆ ಮಾಡಿದ್ದಾನೆ,ಆದರೆ ಯಾವ ಕಾರಣಕ್ಕಾಗಿ ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಬೇಕಿದೆ.