ಮೈಸೂರು: ಬಸವಾದಿ ಶರಣರ ಸಂದೇಶ ಒಂದು ದೇಶಕ್ಕೆ ಅಥವಾ ಒಂದು ರಾಜ್ಯಕ್ಕೆ ಒಂದು ಸಮುದಾಯಕ್ಕೆ ಸೀಮಿತವಲ್ಲ ಅದು ವಿಶ್ವಕ್ಕೆ ಅನ್ವಯ ಎಂದು ಶರಣ ತತ್ವ ಚಿಂತಕರಾದ ಪೂಜ್ಯ ಶ್ರೀ ಬಸವಯೋಗಿಪ್ರಭುಗಳು ನುಡಿದರು.
ತಿ.ನರಸೀಪುರದ ನಂಜನಗೂಡು ರಸ್ತೆಯಲ್ಲಿ ರುವ ಎ.ಪಿ.ಎಮ್.ಸಿ ಆವರಣದಲ್ಲಿ ನಡೆದ ಲಿಂಗಾಯತ ಧರ್ಮ ಜಾಗೃತಿ ಸಮಾವೇಶ ಮತ್ತು 2025 ನೇ ವರ್ಷದ ದಿನದರ್ಶಿಕೆ ಬಿಡುಗಡೆ ಸಮಾರಂಭವನ್ನು ಉದ್ದೇಶಿಸಿ ಪೂಜ್ಯರು ಮಾತನಾಡಿದರು.
ಜಗತ್ತಿನ ಮೊದಲ ಪಾರ್ಲಿಮೆಂಟ್ ಅನುಭವ ಮಂಟಪದ ಮೂಲಕ ವಿಶ್ವ ಸಂದೇಶವನ್ನು ವಚನಗಳ ಮೂಲಕ ಬಸವಾದಿ ಶರಣರು ಜಗಜ್ಯೋತಿ ಬಸವೇಶ್ವರರ ನೇತೃತ್ವದಲ್ಲಿ
ಸಾರಿದರು ಎಂದು ಹೇಳಿದರು.
ಬಸವಾದಿ ಶರಣರ ಬದುಕು ಅದೊಂದು ಕಾಯಕ,ದಾಸೋಹ,ವೈಜ್ಞಾನಿಕತೆ,ಸದ್ಭಕ್ತಿ,ಸಮಾನತೆ,ಸಮತೆ,ಅಹಿಂಸೆ,ದಯೆ, ನಿಜದ ನಿಲುವಿನ ಬದುಕಾಗಿತ್ತು.
ಶರಣರು ಜೀವಪರವಾದ ಬದುಕನ್ನು ಸಾಗಿಸಿದವರು ಬಸವಾದಿ ಶರಣರು ಸ್ಥೂಲ ಶರೀರ ಸೂಕ್ಷ್ಮ ಶರೀರ ಕಾರಣ ಶರೀರಕ್ಕೆ ಲಿಂಗಾಯತ ಲಿಂಗ ಸ್ವಾಯತ ಲಿಂಗ ಸನ್ನಿಹಿತ ಮಾಡಿ ಸಂದೇಶ ಬದುಕನ್ನು ಸಾಗಿಸಿದವರು.
ದೇವರು ಗುಡಿ, ಗುಂಡಾರ , ಮಸೀದಿ, ಚರ್ಚ್ ಗಳಲ್ಲಿ ಇಲ್ಲ ಒಳ್ಳೆಯ ಮನಸ್ಸನ್ನು ಯಾರು ಹೊಂದಿರುತ್ತಾರೋ ಅವರ ಅಂತರಾತ್ಮದಲ್ಲಿ ನಿರಾಕಾರ ಶಿವ ನೆಲೆಸಿರುತ್ತಾನೆ ಎಂದು ಸಾರಿದ್ದರು ಎಂದು ತಿಳಿಸಿದರು.
ಸತ್ಯ ಶುದ್ಧ ಕಾಯಕ ಮತ್ತು ದಾಸೋಹವನ್ನು ಜಗತ್ತಿಗೆ ಕೊಟ್ಟವರು ಮತ್ತು ಅದರಂತೆ ನಡೆದವರು,ಯಾವುದೇ ಪದವಿಗಳಿಗೆ ಆಸೆ ಪಡದೆ ನಿಸ್ವಾರ್ಥದ ಬದುಕನ್ನು ಬದುಕಿದವರು ಶರಣರು ಎಂದು ಬಣ್ಣಿಸಿದರು.
ಕಲ್ಲನಾಗರಕ್ಕೆ ಹಾಲ ನೆರೆಯುವ ನಿಜನಾಗರ ಕಂಡಡೆ ಕೊಲ್ಲುವ ಅಜ್ಞಾನ ಮೌಢ್ಯಯುತ ಸಮಾಜವನ್ನು ಸರಿ ದಾರಿಗೆ
ತರುವ ಸಂದೇಶವನ್ನು ನೀಡಿ ಅದರಂತೆ ಬದುಕಿದ ಶರಣರು ಉಪಮಿಸಬಾರದ ಉಪಮಾತೀತರಾಗಿದ್ದಾರೆ.ಅವರ ಬದುಕು ನಮ್ಮೆಲರ ಬದುಕಾಗಲಿ ಅವರ ಸಂದೇಶವನ್ನು ನಮ್ಮೆಲ್ಲರ ಜೀವನದಲ್ಲಿ ಅಳವಡಿಸಿಕೊಂಡು ಬದುಕು ಸಾಗಿಸೋಣ ಎಂದು ಬಸವಯೋಗಿ ಪ್ರಭುಗಳು ತಿಳಿಹೇಳಿದರು.
ಜಾಗತಿಕ ಲಿಂಗಾಯತ ಮಹಾಸಭಾದ ಕೇಂದ್ರ ಸಮಿತಿಯ ಉಪಾಧ್ಯಕ್ಷ ಜಿ.ಬಿ. ಪಾಟೀಲ್ ಲಿಂಗಾಯತ ಸ್ವತಂತ್ರ ಧರ್ಮದ ಕುರಿತು ತಿಳಿಸಿಕೊಟ್ಟರು.
ಮೈಸೂರು ಹೊಸಮಠದ ಚಿದಾನಂದ ಸ್ವಾಮೀಜಿ 2025ನೆ ದಿನದರ್ಶಿಕೆ ಬಿಡುಗಡೆ ಮಾಡಿದರು. ಜಾಗತಿಕ ಲಿಂಗಾಯತ ಗೌರವಾಧ್ಯಕ್ಷರಾದ ಎಮ್.ಎಲ್.ಹುಂಡಿ, ವಿರಕ್ತ ಮಠದ ಗೌರೀಶಂಕರ ಸ್ವಾಮಿಜಿ
ಆಶೀರ್ವಚನ ನೀಡಿದರು.
ತಾಲ್ಲೂಕು ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ತೊಟ್ಟವಾಡಿ ರವಿ, ಕಾರ್ಯದರ್ಶಿ ಬಸವಣ್ಣ, ಮೈಸೂರು ಜಾಗತಿಕ ಲಿಂಗಾಯತ ಮಹಾಸಭಾದ ಮಹಾದೇವಪ್ಪ ಮತ್ತು ಸದಸ್ಯರು ಉಪಸ್ಥಿತರಿದ್ದರು.