Mon. Dec 23rd, 2024

ಕಾಂಗ್ರೆಸ್ ಕಚೇರೀನ ಹೆಡ್ಡಾಫೀಸ್ ಮಾಡೋಕಾಗುತ್ತಾ: ಹೆಚ್.ಡಿ.ಕೆ ತಿರುಗೇಟು

Share this with Friends

ಬೆಂಗಳೂರು,ಏ.10: ನನ್ನ ತೋಟ ಏನಾದರೂ ಮಾಡಿಕೊಳ್ಳಬಹುದು ಅದರೆ
ಕಾಂಗ್ರೆಸ್ ಕಚೇರಿಯನ್ನು ಹೆಡ್ಡಾಫೀಸ್ ಮಾಡಿಕೊಳ್ಳಲು ಸಾಧ್ಯವೇ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಬಿಡದಿಯ ತೋಟವನ್ನು ಜೆಡಿಎಸ್ ಹೆಡ್ಡಾಫೀಸ್ ಎಂದು ಟೀಕೆ ಮಾಡಿರುವ ಕಾಂಗ್ರೆಸ್ ಪಕ್ಷಕ್ಕೆ ತಿರುಗೇಟು ಕೊಟ್ಟರು.

ಬಿಡದಿಯ ನನ್ನ ತೋಟವೇ ನನ್ನ ಪಕ್ಷದ ಹೆಡ್ಡಾಫೀಸ್,ಅದರಲ್ಲಿ ತಪ್ಪೇನಿದೆ,ನಾನು ಪಕ್ಷದ ಅಧ್ಯಕ್ಷ, ಅಲ್ಲಿ ನಾನು ನಮ್ಮ ಪಕ್ಷದ ಕೆಲ ಮುಖಂಡರ ಸಭೆ ಕರೆದಿದ್ದೆ. ಅಲ್ಲದೆ, ನನ್ನ ತೋಟದಲ್ಲಿ 120 ಜನ ಈಗಲೂ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಊಟದ ವ್ಯವಸ್ಥೆ ಮಾಡಿದ್ದೆವು ಮಾಡಬಾರದು ಅಂತ ಹೇಳಕ್ಕೆ ಅದೇನು ಕಾಂಗ್ರೆಸ್ ಹೆಡ್ಡಾಫೀಸಾ, ಬಿಜೆಪಿಗೆ ಕೇಶವ ಕೃಪ ಹೇಗೋ ನಮ್ಮ ಪಕ್ಷಕ್ಕೆ ನಮ್ಮ ತೋಟದ ಮನೆಯೂ ಹಾಗೆಯೇ ಎಂದು ಹೇಳಿದರು.

ಕಾಂಗ್ರೆಸ್ ನಾಯಕರು ವಿಧಾನಸಭೆ ಚುನಾವಣೆಗೆ ಮೊದಲು ಮೇಕೆದಾಟು ಪಾದಯಾತ್ರೆ ಮಾಡಿದ್ದರು. ಪಾದಯಾತ್ರೆಯಲ್ಲಿ ತೂರಾಡಿದ್ದು ಯಾರು ನಾನಾ? ನನಗೂ ಏನು ಮಾಡಬೇಕು, ಮಾಡಬಾರದು ಎಂದು ಗೊತ್ತಿದೆ. ಅಲ್ಲಿನ ತಹಶಿಲ್ದಾರ್ ಅವರಿಗೆ ಪದೇಪದೆ ಫೋನ್ ಕರೆ ಮಾಡಿ ಒತ್ತಡ ಹೇರಿದ್ದಾರೆ. ಏನು ಸಿಗಲಿಲ್ಲ ಇಷ್ಟು ಚುನಾವಣೆ ಮಾಡಿದವನಿಗೆ ಏನು ಮಾಡಬೇಕು ಅನ್ನೋದು ಗೊತ್ತಿಲ್ವಾ ಎಂದು ಖಾರವಾಗಿ ಪ್ರಶ್ನಿಸಿದರು.

ನಾವು ಬಿಡದಿ ತೋಟದಲ್ಲಿ ಗ್ಲಾಸ್ ಇಟ್ಟು ಪಾರ್ಟಿ ಮಾಡ್ತಿಲ್ಲ, ಹಾಗೆ ಮಾಡೋದು ಕಾಂಗ್ರೆಸ್ ಸಂಸ್ಕೃತಿ. ಅಂತಹ ಕೆಲಸವನ್ನು ಕಾಂಗ್ರೆಸ್ ನಿರಂತರವಾಗಿ ಮಾಡಿಕೊಂಡು ಬಂದಿದೆ ಎಂದು ಕುಮಾರಸ್ವಾಮಿ ದೂರಿದರು.

ನಾನು ಎಂದೂ ಸಹ ಅಧಿಕಾರದಲ್ಲಿದ್ದಾಗ ನಮ್ಮ ಸಮುದಾಯದ ಸ್ವಾಮೀಜಿಗಳನ್ನು ದುರುಪಯೋಗ ಪಡಿಸಿಕೊಳ್ಳುವ ಕೆಲಸ ಮಾಡಿಲ್ಲ, ಅಧಿಕಾರವನ್ನೂ ದುರ್ಬಳಕೆ ಮಾಡಿಕೊಂಡಿಲ್ಲ. ಜಾತ್ಯತೀತ ಅಂತ ಹೇಳೋರು, ಪ್ರತೀ ದಿನ ಜಾತಿ ಬಗ್ಗೆಯೇ ಮಾತಾಡ್ತಾರೆ. ನಮ್ಮ ಸಮಾಜದ ಜನ ದಡ್ಡರಲ್ಲ. ಇವರು ನಡೆಸುತ್ತಿರುವ ರಾಜಕೀಯ ಎಲ್ಲರಿಗೂ ಅರ್ಥ ಆಗುತ್ತಿದೆ ಎಂದು ಕುಟುಕಿದರು.

ನನ್ನ ನೇತೃತ್ವದ ಮೈತ್ರಿ ಸರಕಾರ ಹೋಗಲಿಕ್ಕೆ ಕಾಂಗ್ರೆಸ್ ನಾಯಕರು ಏನೆಲ್ಲಾ ಮಾಡಿದರು ಎನ್ನುವುದು ನನಗೆ ಗೊತ್ತಿದೆ. ಆಗ ಕಾಂಗ್ರೆಸ್ ನಾಯಕರಲ್ಲಿಯೇ ಯಾಕೆ ಸಂಘರ್ಷ ನಡೆಯಿತು ಎನ್ನುವುದೂ ತಿಳಿದಿದೆ ಎಂದು ಕಾಂಗ್ರೆಸ್ ಗೆ ಟಾಂಗ್ ಕೊಟ್ಟರು ‌ಹೆಚ್ ಡಿ ಕೆ.

ಈ ವೇಳೆ ಮೈಸೂರು-ಕೊಡಗು ಬಿಜೆಪಿ ಅಭ್ಯರ್ಥಿ ಯದುವೀರ್ ಹಾಗೂ
ಮಾಜಿ ಶಾಸಕ ಎಲ್.ನಾಗೇಂದ್ರ ಮತ್ತಿತರ ಬಿಜೆಪಿ ಮುಖಂಡರು ಹಾಜರಿದ್ದರು.


Share this with Friends

Related Post