ಬಳ್ಳಾರಿ:ಮಾಜಿ ಸಚಿವ ಜನಾರ್ದನ ರೆಡ್ಡಿ ನಿವಾಸದ ಮುಂಭಾಗದಲ್ಲಿ ನಡೆದ ಘಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಮೃತಪಟ್ಟ ಪ್ರಕರಣ ಸಂಬಂಧ ಸಮಗ್ರ ಮಾಹಿತಿಯನ್ನು ಸ್ಥಳೀಯ ಶಾಸಕ ಭರತ್ ರೆಡ್ಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿದ್ದು ಪರಿಸ್ಥಿತಿ ಕುರಿತು ವಿವರ ನೀಡಿದರು.
ತೋರಣಗಲ್ ನ ಜಿಂದಾಲ್ ವಿಮಾನ ನಿಲ್ದಾಣದಲ್ಲಿ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಜತೆಯಲ್ಲಿ ಶಾಸಕ ಭರತ್ ರೆಡ್ಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದರು. ಈ ವೇಳೆ ಕೆಲ ಸಮಯ ಬಳ್ಳಾರಿ ಫೈರಿಂಗ್ ಪ್ರಕರಣ ಕುರಿತು ಮಾತುಕತೆ ನಡೆಸಿದರು. ಪ್ರಕರಣದಲ್ಲಿ ಶಾಸಕ ಭರತ್ ರೆಡ್ಡಿ ವಿರುದ್ಧ ಬಿಜೆಪಿ ಆರೋಪ ಮಾಡುತ್ತಿರುವ ಹಿನ್ನಲೆಯಲ್ಲಿ ಶಾಸಕ ಮತ್ತು ಸಿಎಂ ಭೇಟಿ ಮಹತ್ವ ಪಡೆದುಕೊಂಡಿದೆ.
ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಹಿರಂಗವಾಗಿಯೇ ತಮ್ಮ ಶಾಸಕ ಭರತ್ ರೆಡ್ಡಿಗೆ ಪಕ್ಷದ ಬೆಂಬಲ ಘೋಷಿಸಿದ್ದು ಶಾಸಕರ ಬೆನ್ನಿಗೆ ನಿಲ್ಲುವ ಘೋಷಣೆ ಮಾಡಿದ್ದಾರೆ ಆದರೂ ಬಿಜೆಪಿಯಿಂದ ತೀವ್ರವಾದ ಆರೋಪ ಭರತ್ ರೆಡ್ಡಿ ವಿರುದ್ಧವೇ ಬರುತ್ತಿರುವ ಹಿನ್ನಲೆಯಲ್ಲಿ ಸಿಎಂ ಸವಿಸ್ತಾರವಾಗಿ ಮಾಹಿತಿ ಪಡೆದುಕೊಂಡರು.
ಇದಕ್ಕೂ ಮುನ್ನ ಮುಖ್ಯಮಂತ್ರಿಯವರು ಕಾನೂನು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಡಿಜಿಪಿ ಹಿತೇಂದ್ರ, ಬಳ್ಳಾರಿ ವಲಯದ ಐಜಿ ವರ್ತಿಕಾ ಕಟಿಯಾರ್ ಹಾಗೂ ದಾವಣಗೆರೆ ವಲಯದ ಐಜಿ ರವಿಕಾಂತೇಗೌಡ ಅವರಿಂದಲೂ ಘಟನೆ ಕುರಿತು ಸಿಎಂ ಮಾಹಿತಿ ಪಡೆದುಕೊಂಡರು. ಮುಖ್ಯಮಂತ್ರಿಯವರು ಸಿಂಧನೂರಿನಿಂದ ಜಿಂದಾಲ್ ವಿಮಾನ ನಿಲ್ದಾಣಕ್ಕೆ ಹೆಲಿಕಾಪ್ಟರ್ ನಲ್ಲಿ ಆಗಮಿಸಿ ಬಳಿಕ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.

